Advertisement

ಪ್ಯಾಸೆಂಜರ್‌ ರೈಲು ಓಡಾಟ ಎಂದು? ರೈಲ್ವೆ ಹೋರಾಟಗಾರರಿಗೆ ಬೇಸರ…

02:36 PM Sep 23, 2024 | Team Udayavani |

ಉದಯವಾಣಿ ಸಮಾಚಾರ
ಲೋಕಾಪುರ: ಇಲ್ಲಿಯ ಲೋಕಾಪುರ ರೈಲು ನಿಲ್ದಾಣವನ್ನು ಗೂಡ್ಸ್‌ ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದು ಕಾರ್ಖಾನೆಗಳ ಮಾಲೀಕರಿಗೆ ಸಂತಸವಾಗಿದೆ ಆದರೆ, ಸಾರ್ವಜನಿಕರು, ರೈಲ್ವೆ ಹೋರಾಟಗಾರರಿಗೆ ಬೇಸರ ವ್ಯಕ್ತವಾಗಿದೆ.

Advertisement

ಹೌದು. ಸಾರ್ವಜನಿಕರು, ರೈಲ್ವೆ ಹೋರಾಟ ಗಾರರ ಹಲವು ವರ್ಷಗಳ ಹೋರಾಟದ ತಪಸ್ಸಿನ ಫಲವಾಗಿ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಲೋಕಾಪುರವರೆಗೆ ಬಂದು ತಲುಪಿದೆ. ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಸಾರ್ವಜನಿಕರ ಪ್ರಯಾಣಕ್ಕೆ ಪ್ಯಾಸೆಂಜರ್‌ ರೈಲು ಓಡಿಸಿ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದ ಅಧಿಕಾರಿಗಳು, ಈಗ ಕೇವಲ ಗೂಡ್ಸ್‌ ರೈಲು ಆರಂಭಿಸಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಸಕ್ಕರೆ, ಸಿಮೆಂಟ್‌, ಸುಣ್ಣದ ಕಲ್ಲು ಕಾರ್ಖಾನೆಗಳು ಹೆಚ್ಚು ಇರುವುದರಿಂದ ಈ ಮಾರ್ಗದಲ್ಲಿ ರೈಲು ಓಡಾಡುವುದರಿಂದ ಕಾರ್ಖಾನೆ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ರೈಲು ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಆದರೆ ಪ್ಯಾಸೆಂಜರ್‌ ರೈಲು ಓಡದೇ ಇರುವುದರಿಂದ ಸಾರ್ವಜನಿಕರಿಗೆ
ಬೇಸರವಾಗಿದೆ.

ಪೂರ್ಣಗೊಳ್ಳದ ಕಾಮಗಾರಿ: ಲೋಕಾಪುರ ರೈಲು ನಿಲ್ದಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಗೆ ವೇಗ ನೀಡಿ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಅಧಿ ಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ.

ಕುಡಚಿ ತಲುಪದ ರೈಲು: ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಯೋಜನೆ ಆರಂಭಗೊಂಡು ದಶಕಗಳೇ ಕಳೆದರೂ ಕಾಮಗಾರಿ ಮುಕ್ತಾಯ ಕನಸಾಗೇ ಉಳಿದಿದೆ. ಲೋಕಾಪುರವರೆಗೆ ಬಂದು ತಲುಪಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಕುಡಚಿ ತಲುಪುವುದು ಎಂದು ಎನ್ನುವಂತಾಗಿದೆ.

Advertisement

ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಗೂಡ್ಸ್‌  ರೈಲುಗಳ ಸಂಚಾರಕ್ಕೆ ಮುನ್ನ ಪ್ಯಾಸೆಂಜರ್‌ ರೈಲು ಓಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ- ಹೋರಾಟಗಾರ ಒತ್ತಾಯಿಸಿದ್ದಾರೆ.

ಲೋಕಾಪುರದಿಂದ ಪ್ರಥಮವಾಗಿ ಸಾರ್ವಜನಿಕ ಪ್ಯಾಸೆಂಜರ್‌ ರೈಲುಗಳು ಆರಂಭಿಸಬೇಕು. ಈಗಾಗಲೆ ರೈಲ್ವೆ ಇಲಾಖೆಗೆ ಪ್ರಥಮವಾಗಿ ಪ್ಯಾಸೆಂಜರ್‌ ರೈಲು ಆರಂಭಿಸಲು ಮನವಿ ಮುಖಾಂತರ ಎಚ್ಚರಿಸಲಾಗಿದೆ. ರೈಲ್ವೆ ಇಲಾಖೆ ಮೊಂಡ ಸ್ವಭಾವ ಬಿಟ್ಟು ಜಿಲ್ಲೆಯ ಜನರ ಅಪೇಕ್ಷೆಯಂತೆ ಪ್ಯಾಸೆಂಜರ್‌ ರೈಲು ಆರಂಭಿಸಿ ನಂತರ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಸಮಿತಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪಕ್ಷಾತೀತ ಹೋರಾಟ ಮಾಡಿ ರೈಲ್ವೆ ಇಲಾಖೆಗೆ ಬಿಸಿ ಮುಟ್ಟಿಸಬೇಕಾಗುತ್ತದೆ.
●ಕುತುಬುದ್ದೀನ ಖಾಜಿ, ರೈಲು ಮಾರ್ಗ ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ.

ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ಭಾಗದ ರೈತರು ಕುಡಚಿ ರೈಲು ಮಾರ್ಗಕ್ಕೆ ಜಮೀನು ನೀಡಿದ್ದಾರೆ. ಆದರೆ ಅಧಿಕಾರಿಗಳು ಕಾರ್ಖಾನೆಗಳ ಮಾಲೀಕರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಗೂಡ್ಸ್‌ ರೈಲು ಆರಂಭಿಸಿದ್ದಾರೆ. ಪ್ಯಾಸೆಂಜರ್‌ ರೈಲು ಬಿಡದೆ ಗೂಡ್ಸ್‌ ರೈಲು ಬಿಟ್ಟರೆ ನಮ್ಮ ವಿರೋಧವಿದೆ. ಸಾರ್ವಜನಿಕರೊಂದಿಗೆ ಪ್ರತಿಭಟನೆ ಮಾಡಲಾಗುವುದು.
●ಗುರುರಾಜ ಬ. ಉದುಪುಡಿ,
ನಗರ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ

*ಸಲೀಂ ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next