ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಸಕ್ಕರೆ ಬದಲಾಗಿ ಬಳಕೆ ಮಾಡುತ್ತಿರುವ ಸಿಹಿ ಪದಾರ್ಥಗಳ ಬಳಕೆ ಬಗ್ಗೆ ಎಚ್ಚರಿಕೆ ನೀಡಿದೆ. ಇದರಿಂದ ಸಾಂಕ್ರಾಮಿಕೇತರ ರೋಗಗಳು ಬರುವ ಸಾಧ್ಯತೆಗಳಿವೆ ಎಂಬುದು ಅದರ ಎಚ್ಚರಿಕೆ. ಸದ್ಯ ಸಕ್ಕರೆ ಕಾಯಿಲೆ ಇರುವಂಥವರು ಈ ಸಕ್ಕರೆಯೇತರ ಪದಾರ್ಥಗಳನ್ನು ಬಳಕೆ ಮಾಡುತ್ತಿರುವುದು ಹೆಚ್ಚುತ್ತಿದೆ.
ಏನಿದು ಸಕ್ಕರೆಯೇತರ ಸಿಹಿ?
ಸಕ್ಕರೆಯೇತರ ಸಿಹಿ ಪದಾರ್ಥವೆಂದರೆ, ಅತ್ಯಂತ ಕಡಿಮೆ ಅಥವಾ ಕ್ಯಾಲೊರಿಯೇ ಇಲ್ಲದಿರುವಂಥದ್ದು. ಇದನ್ನು ತೂಕ ಕಡಿಮೆ ಮಾಡಿಕೊಳ್ಳಲು ಬಳಕೆ ಮಾಡುತ್ತಾರೆ. ಅಸೆಸುಲ್ಫಾಮೆ ಕೆ, ಆಸ್ಪರ್‌ಟೇಮ್, ಅಡ್ವಾಂಟೇಮ್, ಸೈಕ್ಲಾಮೇಟ್ಸ್, ನಿಯೋಟೇಮ್, ಸಚ್ಚಾರಿನ್ ಸುಕ್ರಾಲೋಸ್, ಸ್ಟೇವಿಯಾ ಮತ್ತು ಸ್ಟೇವಿಯಾ ಡಿರೈವೇಟಿವ್ಸ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ಮಾಡಿದೆ.
ಸಕ್ಕರೆ ಕಾಯಿಲೆ ಇರುವವರು ಬಳಸಬಹುದೇ?
Related Articles
ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಖಚಿತವಾಗಿ ಹೇಳಿಲ್ಲ. ಆದರೆ ಈ ಹಿಂದೆ ಈ ಸಕ್ಕರೆಯೇತರ ಸಿಹಿ ಪದಾರ್ಥಗಳನ್ನು ಸಕ್ಕರೆ ಕಾಯಿಲೆ ಇರುವವರಿಗೆ ಮಾತ್ರ ಬಳಕೆ ಮಾಡಲು ಶಿಫಾರಸು ಮಾಡಲಾಗುತ್ತಿತ್ತು. ತೂಕ ಇಳಿಕೆ ಮಾಡಲು ಅಲ್ಲ.
ಅಧ್ಯಯನ ಏನು ಹೇಳುತ್ತದೆ?
ಈ ಸಕ್ಕರೆಯೇತರ ಸಿಹಿ ಪದಾರ್ಥಗಳ ಕುರಿತಂತೆ 283 ಅಧ್ಯಯನ ನಡೆಸಲಾಗಿದೆ. ವಯಸ್ಕರು ಮತ್ತು ಮಕ್ಕಳ ಮೇಲೂ ಅಧ್ಯಯನ ನಡೆಸಲಾಗಿದೆ. ಆದರೆ ಸಕ್ಕರೆಯೇತರ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಬೊಜ್ಜು ಬರುವ ಪ್ರಮಾಣ ಶೇ.76ರಷ್ಟಿದೆ. ಅಷ್ಟೇ ಅಲ್ಲ ದೀರ್ಘಾವಧಿಗೆ ಬಳಕೆ ಮಾಡಿದರೆ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಬಳಕೆ ನಿಲ್ಲಿಸಲು ಸಾಧ್ಯವೇ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸದ್ಯಕ್ಕೆ ಸಕ್ಕರೆಯೇತರ ಸಿಹಿ ಪದಾರ್ಥಗಳ ಬಳಕೆ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕೂ ಮುನ್ನ ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರ ಬಗ್ಗೆ ಅಧ್ಯಯನ ನಡೆಸಬೇಕಾಗುತ್ತದೆ. ಅಲ್ಲದೆ, ಈ ವಿಚಾರದಲ್ಲಿ ಬೇರೆ ಯಾವ ಮಾರ್ಗಗಳಿವೆ ಎಂಬುದನ್ನು ನೋಡಬೇಕಾಗಿದೆ. ಇದರ ಜತೆಗೆ, ಕಡಿಮೆ ಮಟ್ಟದ ಸಂಸ್ಕರಣವಾಗಿರುವ, ಸಿಹಿ ಇಲ್ಲದೇ ಇರುವ ಆಹಾರ ಪದಾರ್ಥಗಳನ್ನು ಬಳಕೆ ಮಾಡಿದರೆ ಉತ್ತಮ ಎಂಬುದು ಅದರ ಶಿಫಾರಸು. ಅಲ್ಲದೆ, ಭಾರತದಲ್ಲಿಯೂ ಕೇಂದ್ರ ಆರೋಗ್ಯ ಇಲಾಖೆ ಸಂಬಂಧ ನೀತಿ ರೂಪಿಸಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.