ರಾಯಚೂರು: ಪ್ರಧಾನಿಯಾಗುವ ಅರ್ಹತೆ ಇರುವ ನೂರಾರು ಜನರಿದ್ದಾರೆ. ಯಾಕೆ, ನರೇಂದ್ರ ಮೋದಿಗೆ ಮಾತ್ರ ಆ ಅರ್ಹತೆ ಇದೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ದೇವದುರ್ಗ ತಾಲೂಕಿನ ವೀರಘೋಟದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪ್ರತಿಪಕ್ಷದ ನೂರಾರು ನಾಯಕರು ಕೂಡ ಪ್ರಧಾನಿ ಸ್ಥಾನಕ್ಕೆ ಅರ್ಹರೇ. ರಾಹುಲ್ ಗಾಂಧಿ , ದೇವೇಗೌಡ, ಮಾಯಾವತಿ ಸೇರಿ ಮಹಾ ಘಟಬಂಧನ್ ಜತೆ ಗುರುತಿಸಿಕೊಂಡ ನಾಯಕರಿಗೆಲ್ಲ ಆ ಯೋಗ್ಯತೆ ಇದೆ ಎಂದರು.
ಮೋದಿ ನೇರವಾಗಿ ಸಿಎಂ ಆಗಿದ್ದಾರೆ. ಅವರೇನು ಮೊದಲು ಮಂತ್ರಿಯಾಗಿದ್ರಾ, ಸಿಎಂ ನಂತರ ನೇರವಾಗಿ ಪ್ರಧಾನಿಯಾಗಿಲ್ಲವೇ ಎಂದು ಪ್ರಶ್ನಿಸಿದರು. ಇದು ಸಮ್ಮಿಶ್ರ ಸರ್ಕಾರಗಳ ಕಾಲ. ಹೀಗಾಗಿ, ಸಮಾನ ಮನಸ್ಕ ಪಕ್ಷಗಳೆಲ್ಲ ಒಂದಾಗಿ ಸರ್ಕಾರ ರಚಿಸುತ್ತಿವೆ.
ಕೇಂದ್ರದಲ್ಲಿರುವುದು ಎನ್‌ಡಿಎ ಸರ್ಕಾರವೇ ಹೊರತು ಬಿಜೆಪಿ ಸರ್ಕಾರವಲ್ಲ. ಈಗ ನಮ್ಮ ಮೈತ್ರಿಕೂಟ ರಚನೆಯಾಗಿದ್ದರೂ ಈಗಲೇ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲು ಬರುವುದಿಲ್ಲ ಎಂದರು.
ಸದನಕ್ಕೆ ಗೈರಾದ ಶಾಸಕರಿಗೆ ನೋಟಿಸ್ ನೀಡಲಾಗಿತ್ತು. ಅವರು ನಾವು ಕಾಂಗ್ರೆಸ್‌ನಲ್ಲಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಜತೆ ಮಾತುಕತೆ ನಡೆಸಲಾಗಿದೆ. ಅವರು ಕೆಲವು ಸಮಸ್ಯೆ ಹೇಳಿಕೊಂಡಿದ್ದಾರೆ. ಅದನ್ನು ಶೀಘ್ರವೇ ಪರಿಹರಿಸಲಾಗುವುದು. ಕಾಂಗ್ರೆಸ್‌ನಲ್ಲಿ ಈಗ ಯಾರೂ ಅತೃಪ್ತರಿಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ.