Advertisement

ಕೊಹ್ಲಿ ಏಕದಿನ ನಾಯಕತ್ವವೂ ಮುಕ್ತಾಯ?

10:05 PM Nov 11, 2021 | Team Udayavani |

ಮುಂಬೈ: ವಿರಾಟ್‌ ಕೊಹ್ಲಿ ಭಾರತೀಯ ತಂಡದ ಟಿ20 ನಾಯಕತ್ವದ ಅವಧಿ ಮುಗಿದಿದೆ. ಅವರ ಜಾಗಕ್ಕೆ ರೋಹಿತ್‌ ಶರ್ಮ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

Advertisement

ವಿಷಯ ಇಷ್ಟಕ್ಕೇ ಮುಗಿದಿಲ್ಲ. ಕೊಹ್ಲಿಯ ಏಕದಿನ ನಾಯಕತ್ವವೂ ಮುಗಿಯುವ ಸಾಧ್ಯತೆ ದಟ್ಟವಾಗಿದೆ! ಮುಂದಿನ ವರ್ಷ ಜ.11ರಿಂದ ದ.ಆಫ್ರಿಕಾ ಎದುರು ದ್ವಿಪಕ್ಷೀಯ ಕ್ರಿಕೆಟ್‌ ನಡೆಯಲಿದೆ. ಅದಕ್ಕೂ ಮುನ್ನವೇ ಈ ಬಗ್ಗೆಯೂ ಇತ್ಯರ್ಥವಾಗುವ ನಿರೀಕ್ಷೆಯಿದೆ. ಅರ್ಥಾತ್‌ ಬಿಸಿಸಿಐ ಈ ಕುರಿತು ಕೊಹ್ಲಿಯೊಂದಿಗೆ ಮಾತುಕತೆ ನಡೆಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ!

ಏಕದಿನ ನಾಯಕತ್ವದ ಕುರಿತು ನಿಮ್ಮ ನಿಲುವೇನು? ನೀವದರಲ್ಲಿ ಮುಂದುವರಿಯಲು ಬಯಸುತ್ತೀರಾ? ಎಂದು ಪ್ರಶ್ನಿಸಿರುವ ಸಾಧ್ಯತೆಯಿದೆ. ಪ್ರಸ್ತುತ ಕೊಹ್ಲಿ ತಮ್ಮ ಎಂದಿನ ಲಯದಲ್ಲಿಲ್ಲ. ಹಾಗಾಗಿ ಏಕದಿನ ನಾಯಕತ್ವದಿಂದಲೂ ಹೊರಬಂದು ಬ್ಯಾಟಿಂಗ್‌ ಬಗ್ಗೆ ಪೂರ್ಣ ಗಮನ ಹರಿಸುವ ಉದ್ದೇಶವಿದೆಯಾ? ಎಂದೂ ಪ್ರಶ್ನಿಸಿರುವ ಸಾಧ್ಯತೆಯಿದೆ. ಕೊಹ್ಲಿ ನಾಯಕತ್ವದ ಒತ್ತಡದಿಂದ ಮುಕ್ತರಾದರೆ ತಮ್ಮ ಎಂದಿನ ಬ್ಯಾಟಿಂಗನ್ನು ಕಂಡುಕೊಳ್ಳಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದಿದೆ.

ಇದನ್ನೂ ಓದಿ:ಬೂಮ್‌ ಕಾರ್ಬೆಟ್‌ ಎಲೆಕ್ಟ್ರಿಕ್‌ ಸ್ಕೂಟರ್‌; ಐದು ವರ್ಷ ಇಎಂಐ ಸೌಲಭ್ಯ

ಲೆಕ್ಕಾಚಾರಗಳೇನು?
1. ಕೊಹ್ಲಿ ಶತಕವೊಂದನ್ನು ಬಾರಿಸದೇ ಒಂದು ವರ್ಷಕ್ಕೂ ಮೇಲಾಗಿದೆ. ಅದು ಅವರಿಗಿರುವ ಒತ್ತಡವನ್ನು ತೋರುತ್ತಿದೆ. ಮೂರೂ ಮಾದರಿಯಲ್ಲಿ ಕೊಹ್ಲಿ ಎಂದಿನ ಅಸಾಮಾನ್ಯ ಆಟವನ್ನು ಆಡುತ್ತಿಲ್ಲ. ಹಾಗಾಗಿ ನಾಯಕತ್ವದಿಂದ ಬಿಡಿಸುವುದು ಒಂದು ಆದ್ಯತೆ.
2. ಇನ್ನೊಂದು ಗಮನಾರ್ಹ ವಿಚಾರವೂ ಇಲ್ಲಿದೆ. ಟಿ20 ಮತ್ತು ಏಕದಿನ ಸೀಮಿತ ಓವರ್‌ಗಳ ಕ್ರಿಕೆಟ್‌. ಇಲ್ಲಿ ಒಬ್ಬನೇ ನಾಯಕನಿರುವುದು ತಂಡದ ಸಂಯೋಜನೆ ದೃಷ್ಟಿಯಿಂದ ಉತ್ತಮ. ಬಹುತೇಕ ಒಂದೇ ರೀತಿಯ ಆಟಗಾರರು ತಂಡದಲ್ಲಿರುವುದರಿಂದ ಭಿನ್ನ ಅಭಿರುಚಿಯ, ಭಿನ್ನ ವ್ಯಕ್ತಿತ್ವದ ನಾಯಕರಿದ್ದಾಗ ಸಹ ಆಟಗಾರರಿಗೆ ಹೊರೆಯಾಗುತ್ತದೆ. ಇದನ್ನೂ ಬಿಸಿಸಿಐ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ.
3. ಕೊಹ್ಲಿ ಇದುವರೆಗೆ ಬಹುರಾಷ್ಟ್ರೀಯ ಕೂಟಗಳಲ್ಲಿ ನಾಯಕನಾಗಿ ದೊಡ್ಡ ಯಶಸ್ಸು ಸಾಧಿಸಿಲ್ಲ. 2023ರಲ್ಲಿ ಭಾರತದಲ್ಲೇ ಏಕದಿನ ವಿಶ್ವಕಪ್‌ ನಡೆಯಲಿದೆ. ಇಲ್ಲಿ ಪ್ರಶಸ್ತಿ ಗೆಲ್ಲಬಲ್ಲಂತಹ ತಂಡ ಸಿದ್ಧಗೊಳಿಸುವುದು ಅದರ ಗುರಿಯಾಗಿದೆ. ಇನ್ನು ಎರಡು ವರ್ಷ ಮಾತ್ರ ಬಾಕಿಯಿರುವುದರಿಂದ ಕೊಹ್ಲಿಯನ್ನೇ ಮುಂದುವರಿಸಬಹುದು ಅಥವಾ ಬದಲಾಯಿಸುವುದಾದರೆ ಈಗಲೇ ತೀರ್ಮಾನ ಮಾಡಬೇಕು. ಆಗ ಮಾತ್ರ ಸರಿಯಾದ ಗುರಿಯಿಟ್ಟುಕೊಂಡು ಮುನ್ನುಗ್ಗಲು ಸಾಧ್ಯ. ಕೊನೆಯಹಂತದಲ್ಲಿ ನಾಯಕನ ಬದಲಾವಣೆ ಮಾಡಿದಾಗ ಆಟಗಾರರಲ್ಲಿ ಗೊಂದಲವಾಗುವುದು ಸಹಜ.

Advertisement
Advertisement

Udayavani is now on Telegram. Click here to join our channel and stay updated with the latest news.

Next