ಬೆಳಗಾವಿ: ವಕ್ಪ್ ವಿರುದ್ಧ ನಾವು ಜನ ಜಾಗೃತಿ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ ಕಿತ್ತೂರು ಕರ್ನಾಟಕ ಪ್ರವೇಶ ಮಾಡಿದ್ದೇವೆ. ನಾಳೆ ನಾವೆಲ್ಲ ದೆಹಲಿಗೆ ಹೋಗುತ್ತಿದ್ದೇವೆ. ವಕ್ಫ್ ಬಗ್ಗೆ ವರದಿ ಕೊಡುತ್ತೇವೆ. ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಅಷ್ಟಕ್ಕೆ ಮಾತ್ರ ನಮ್ಮ ಪ್ರವಾಸವಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ರವಿವಾರ (ಡಿ.01) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಉಚ್ಛಾಟನೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, “ಯಪ್ಪಾ, ಬಹಳ ದೊಡ್ಡ ಅನಾಹುತ. ಯಡಿಯೂರಪ್ಪ ಮನೆ ಬಿಟ್ಟು ಹೋಗುವುದು ಹೇಗೆ? ಯಡಿಯೂರಪ್ಪ ಮನೆಯಲ್ಲಿ ಮಲಗುವುದು ಹೇಗೆ, ನನ್ನ ಎದೆ ಹೋಡಿತು ಈಗ. ಬಹಳ ನೋವಿನ ಸಂಗತಿ ಇದು, ಕಣ್ಣಿರು ಬರ್ತಾ ಇದೆ” ಎಂದು ಯತ್ನಾಳ್ ವ್ಯಂಗ್ಯವಾಡಿದರು.
ಯತ್ನಾಳ್ ಉಚ್ಚಾಟನೆ ಖಚಿತ ಎಂದು ಮಾಧ್ಯಮದಲ್ಲಿ ಬರುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಯತ್ನಾಳ್ ಉಚ್ಚಾಟನೆ, ನೋಟಿಸ್ ಎಂದು ಬರುತ್ತದೆ. ಯಾಕೆ ಉಚ್ಚಾಟನೆ ಆಗಿಲ್ಲ ಎಂದು ವಿಶೇಷ ಕಾರ್ಯಕ್ರಮ ಮಾಡಿ ನಾಳೆ ಎಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ಬೇರೆ ಬೇರೆ ವಿಮಾನದಲ್ಲಿ ದೆಹಲಿಗೆ ಹೋಗುತ್ತಿದ್ದೇವೆ. ತಂಡದಲ್ಲಿ ಒಡಕು ಎಂದು ಬಿಂಬಿಸಬೇಡಿ ಎಂದ ಯತ್ನಾಳ್ ಹೇಳಿದರು.
ಯತ್ನಾಳ್ ವಿರುದ್ಧ ದೂರು ಕೊಟ್ಟಿಲ್ಲ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು ಯಡಿಯೂರಪ್ಪ ಕುಟುಂಬದ ಬಗ್ಗೆ ಯಾವುದೇ ಮಾತಾಡಿಲ್ಲ. ಯಾವುದೇ ಗೊಂದಲ ಇಲ್ಲ. ನಾವು ವಕ್ಫ್ ಬಗ್ಗೆ ಮಾತನಾಡುವುದು ತಪ್ಪಾ. ವಕ್ಪ್ ಇಡೀ ದೇಶದ ಕ್ಯಾನ್ಸರ್ ಇದ್ದ ಹಾಗೆ. ಜಮೀರ್ ಅಹಮ್ಮದ್ ಖಾನ್ ಹಚ್ಚಿದ ಬೆಂಕಿ ಇದು. 1.15 ಲಕ್ಷ ಎಕರೆ ಎಂದಿದ್ದ ಭೂಪ ಈಗ 6 ಲಕ್ಷ ಎಕರೆ ಎಂದು ಹೇಳುತ್ತಿದ್ದಾನೆ. ಯಾರ ಬಗ್ಗೆ ಮಾತನಾಡಲು ನಮಗೆ ಕೆಲಸ ಇಲ್ಲವೆ ಎಂದು ಯತ್ನಾಳ್ ಹೇಳಿದರು.
ಮಹಾರಾಷ್ಟ್ರ ಸಿಎಂ ಆಯ್ಕೆ ಬಳಿಕ ರಾಜ್ಯ ಬಿಜೆಪಿಗೆ ಸರ್ಜರಿ ವಿಚಾರಕ್ಕೆ ಮಾತನಾಡಿ, ಮುಂದೆ ಮತ್ತೊಂದು ರಾಜ್ಯದ ಚುನಾವಣೆ ಬರುತ್ತದೆ. ಆದರೆ ಯತ್ನಾಳ್ ಗೆ ಏನು ಆಗಲ್ಲ, ಯಾರೂ ಗಾಬರಿಯಾಗಬೇಡಿ. ಯತ್ನಾಳ್ ಭವಿಷ್ಯದ ಬಗ್ಗೆ ಯಾರು ಚಿಂತೆ ಮಾಡಬೇಡಿ. ನಾನು ಕರ್ನಾಟಕದ ನಂಬರ್ ಒನ್ ಆಗುತ್ತೆನೆ ಮುಂದೆ ನಾನು ಮಾಧ್ಯವರನ್ನು ಕರೆದು ಸರಿಯಾಗಿ ಉತ್ತರ ಕೊಡುತ್ತೇನೆ. ನನ್ನ ಉಚ್ಚಾಟನೆ ಮಾಡಲು ಮಾಧ್ಯಮದರ ಒತ್ತಡವಿತ್ತು ಎಂದು ಹೇಳುತ್ತೇನೆ. ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಇದೆಯಾ, ಇಲ್ಲವೇ ಮುಗಿಸಬೇಕು ಎನ್ನುವ ಉದ್ದೇಶ ಇದೆಯಾ ಗೊತ್ತಿಲ್ಲ. ಪ್ರೀತಿ ತೋರಿಸಿ ಮಾತನಾಡಿಸಿ ಆ ಮೇಲೆ ಹೊಡದೇ ಹೊಡಿತೀರಿ. ದೆಹಲಿಯಲ್ಲಿ ಬಂದ ಬಳಿಕ ಎರಡನೇ ಹಂತದ ಹೋರಾಟ ನಡೆಯಲಿದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇಲ್ಲಿಗೆ ನಾವು ಇದನ್ನು ಬಿಡುವುದಿಲ್ಲ. ಬಹಳಷ್ಟು ಕಾಂಗ್ರೆಸ್ ನಾಯಕರು ಉಪ ಚುನಾವಣೆ ಬಳಿಕ ವಕ್ಪ್ ಹೋರಾಟ ಇರಲ್ಲ ಎಂದಿದ್ದರು. ಈಗ ಯಾವ ಚುನಾವಣೆ ಇದೆ ಹೇಳಿ ಎಂದು ಯತ್ನಾಳ್ ಪ್ರಶ್ನಿಸಿದರು.
ದೀಪ ಆರಿರುವವರ ಬಗ್ಗೆ ನಾನು ಯಾಕೆ ಮಾತನಾಡಲಿ ಎಂದು ಯಡಿಯೂರಪ್ಪ ಆಪ್ತರಿಗೆ ಟಾಂಗ್ ಕೊಟ್ಟ ಯತ್ನಾಳ್, ದೇಶದಲ್ಲಿ ಹುಟ್ಟಿದವರು ಎಲ್ಲರೂ ಜವಾರಿನೇ. ಹೊರಗಿನಿಂದ ಬಂದವರು ಮಾತ್ರ ಹೈಬ್ರಿಡ್ ಎಂದು ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದರು.