ಹುಬ್ಬಳ್ಳಿ: ಬಿಜೆಪಿ ಅನಾವಶ್ಯಕ ರಾಜಕಾರಣ ಮಾಡುತ್ತಿರುವುದು ಸೂಕ್ತವಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇಹುಬ್ಬಳ್ಳಿ ಗಲಭೆ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಈ ಹಿನ್ನೆಲೆ ಸರ್ಕಾರ ಪರಮಾರ್ಶೆ ಮಾಡಿತು. ಈ ವಿಚಾರ ಸಚಿವ ಸಂಪುಟದ ಉಪ ಸಮಿತಿ, ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಹಾಗೂ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವಂತದಾಗಿದೆ ಎಂದು ಹೇಳಿದರು.
ನಾವು ಅಲ್ಪಸಂಖ್ಯಾತ ಓಲೈಕೆ ಮಾಡುತ್ತಿಲ್ಲ. ಬಿಜೆಪಿ ಆ ರೀತಿ ಬಿಂಬಿಸುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತ ಕಲ್ಯಾಣ ಮಾಡವುದು ತಪ್ಪಾ ಎಂದು ಪ್ರಶ್ನಿಸಿದರು.
ನಮಗೆಲ್ಲರೂ ಭಾರತೀಯರೇ. ಸಮಾಜ ಒಡೆದಾಳುವ ಮಾತುಗಳಿಂದ ರಾಷ್ಟ್ರಕಟ್ಟಲು ಆಗಲ್ಲ. ಬಿಜೆಪಿ ತಮ್ಮ ಕಾಲದಲ್ಲಿ ಎಷ್ಟು ಕೇಸ್ ವಾಪಸ್ಸು ಪಡೆದಿದ್ದಾರೆ. ರಾಜಕೀಯ ಪ್ರೇರಿತ ಕೇಸ್ ದಾಖಲಾಗಿದ್ದರೆ ಅವುಗಳನ್ನು ವಿಮರ್ಶೆ ಮಾಡಿ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ವಾಪಸು ಪಡೆಯುವ ಅವಕಾಶವಿದೆ. ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿರುವುದು ಸೂಕ್ತವಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇತ್ತೀಚೆಗೆ ಪ್ರಗತಿ ಪರಿಶೀಲನಾ ಸಭೆಯಾಗಿದ್ದು, ಅಧಿಕಾರಿಗಳಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸೂಕ್ತ ಸೂಚನೆ ನೀಡಿದ್ದಾರೆ. ಅದರಂತೆ ಮಾಡಲಾಗುತ್ತಿದೆ. ಇನ್ನು ನವಲಗುಂದ ತಾಲೂಕಿನ ಯಮನೂರು ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ ಎಂದರು.