ನವದೆಹಲಿ:ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಈಗಲೂ ದೇಶದಲ್ಲಿ ದೇಶದ್ರೋಹ ಕಾನೂನಿನ ಅಗತ್ಯವಿದೆಯೇ ಎಂದು ಸುಪ್ರೀಂಕೋರ್ಟ್ ಗುರುವಾರ(ಜುಲೈ 15) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಅಷ್ಟೇ ಅಲ್ಲ ಸರ್ಕಾರದ ವಿರುದ್ಧ ಮಾತನಾಡುವ ವ್ಯಕ್ತಿಗಳ ವಿರುದ್ಧ ದೇಶದ್ರೋಹದ ಕಾನೂನನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಮಂಡ್ಯ ಉಪ ಅರಣ್ಯಾಧಿಕಾರಿ ವೆಂಕಟೇಶ್ ಮನೆ ಮೇಲೆ ಎಸಿಬಿ ದಾಳಿ
ಅಂದು ಮಹಾತ್ಮ ಗಾಂಧಿ, ತಿಲಕ್ ರಂತಹವರನ್ನು ಹತ್ತಿಕ್ಕಲು ಬ್ರಿಟಿಷರು ಬಳಕೆ ಮಾಡಿದ್ದ ವಸಾಹತುಶಾಹಿ ಕಾನೂನು, ಇನ್ನೂ 75 ವರ್ಷಗಳ ಸ್ವಾತಂತ್ರ್ಯದ ನಂತರವೂ ಇದು ಅಗತ್ಯವೇ? ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ .ವಿ.ರಮಣ ನೇತೃತ್ವದ ನ್ಯಾಯಪೀಠ, ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರನ್ನು ಪ್ರಶ್ನಿಸಿರುವುದಾಗಿ ವರದಿ ತಿಳಿಸಿದೆ.
ಐಟಿ ಕಾಯ್ದೆಯ ಸೆಕ್ಷನ್ 66ಎ ಉದಾಹರಣೆ ನೀಡಿದ ಸುಪ್ರೀಂಕೋರ್ಟ್, ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದ ಸಾವಿರಾರು ಜನರನ್ನು ಬಂಧಿಸಿಲು ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು. ಅದರ ಪರಿಣಾಮ ಆ ಕಾಯ್ದೆಯನ್ನು ರದ್ದುಪಡಿಸಲಾಯಿತು ಎಂದು ಹೇಳಿದೆ.
ಸರ್ಕಾರದ ವಿರುದ್ಧ ಮಾತನಾಡುವ ವ್ಯಕ್ತಿಗಳ ವಿರುದ್ಧ ಪೊಲೀಸರು ದೇಶದ್ರೋಹದ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸುಪ್ರೀಂ ನ್ಯಾಯಪೀಠ ಗಮನಸೆಳೆದಿದ್ದು, ಇದು ನೀವು ಬಡಗಿಗಳಿಗೆ ಗರಗಸ ಕೊಟ್ಟಂತೆಯೇ, ಆತ ಇಡೀ ಅರಣ್ಯವನ್ನೇ ಕತ್ತರಿಸುತ್ತಾನೆ. ಇದು ಈ ಕಾನೂನಿನ ಪ್ರಭಾವವಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಉದಾಹರಣೆಯೊಂದಿಗೆ ಹೇಳಿದರು.