ಮನುಷ್ಯ ಜೀವನ ನೀರಿನ ಮೇಲಿರುವ ಗುಳ್ಳೆಯಂತೆ ಎಂಬ ಮಾತನ್ನು ಹಿರಿಯರಿಂದ ಕೇಳಿದ್ದೇವೆ. ಪ್ರತಿದಿನ ದಿನಪತ್ರಿಕೆ ಓದಿದಾಗ ಈಜಲು ಹೋದ ಯುವಕರು ನೀರುಪಾಲು ಅನ್ನುವ ಹೆಡ್‌ಲೈನ್ ಇರುತ್ತದೆ. ಅಪಘಾತದಲ್ಲಿ ಅದೆಷ್ಟೋ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈಗ ಈ ನೀರಿನೊಂದಿಗೆ ಸರಸ ಸರಿಯಲ್ಲ ಎಂದು ಇವರಿಗೆ ಹೇಗೆ ಅರ್ಥಮಾಡಿಸುವುದು! ಈ ಯುವಕರಿಗೆ ತಮ್ಮ ಜೀವ-ಜೀವನದ ಮೌಲ್ಯ ತಿಳಿಯುತ್ತಿಲ್ಲ.
ಒಂದು ವರ್ಷದಲ್ಲಿ ಎಷ್ಟೋ ಯುವಕರು ನೀರು ಪಾಲಾಗುತ್ತಿದ್ದಾರೆ. ಸಮಾರಂಭಕ್ಕೆ ಬಂದವರು, ಅದೆಷ್ಟೋ ದಿನಗಳ ನಂತರ ಮನೆಗೆ ಬಂದವರು, ನೀರಿನಲ್ಲಿ ಆಟವಾಡಲು ಹೋಗಿ ತಮ್ಮ ಜೀವನದ ಆಟವನ್ನೇ ಮುಗಿಸಿರುತ್ತಾರೆ. ಮಕ್ಕಳು ಮನೆಗೆ ಬಂದಿದ್ದಾರೆ ಎಂಬ ಸಂಭ್ರಮ ದಲ್ಲಿರುವಾಗ ಮನೆಯವರಿಗೆ ದುಃಖದ ವಾತಾವರಣ ಆವರಿಸುತ್ತದೆ. ನಮ್ಮನ್ನು ಕಳೆದುಕೊಂಡಾಗ ನಮ್ಮ ಹೆತ್ತವರ ಜೀವ ನರಳಾಡುತ್ತಿರುತ್ತದೆ. ಆದರೆ ಅದು ನಮಗೆ ಅರ್ಥವಾಗುವುದಿಲ್ಲ. ನಮ್ಮ ಇಷ್ಟವನ್ನು ನೆರವೇರಿಸಲು ಹೋಗಿ ಹೆತ್ತವರು ಕಷ್ಟಪಡುವಂತೆ ಮಾಡುತ್ತೇವೆ.
ಕಣ್ಣೆದುರೇ ಆಡಿ ಬೆಳೆದ ಮಕ್ಕಳು ಹೀಗೆ ನೀರುಪಾಲಾಗುವುದನ್ನು ನೋಡಿದ ಹೆತ್ತವರ ಪರಿಸ್ಥಿತಿ ಹೇಗಿರುತ್ತದೆ, ಅದನ್ನು ಕಲ್ಪನೆ ಸಹ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಒಂದು ಗಿಡ ಮರವಾಗಿ ಬೆಳೆಯಲು ವರ್ಷಗಳೇ ಬೇಕಾಗುತ್ತದೆ. ಹಾಗೆಯೇ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿಸಲು ಅಷ್ಟೇ ಕಷ್ಟಪಟ್ಟಿರುತ್ತಾರೆ. ಆದರೆ, ಮಕ್ಕಳು ತಮ್ಮ ಜೀವನವನ್ನು ಹಾಳುಮಾಡಲು ಕ್ಷಣಗಳೇ ಸಾಕು. ಹೆತ್ತವರ ಆಸೆ-ಆಕಾಂಕ್ಷೆಗಳಿಗೆ ಬೆಲೆಯೇ ಇಲ್ಲವೆ? ಹೆತ್ತವರನ್ನು ಖುಷಿಯಾಗಿ ನೋಡಿಕೊಳ್ಳಬೇಕಾದ ಮಕ್ಕಳೇ ಅವರಿಗೆ ನೋವು ಕೊಟ್ಟರೆ ಎಷ್ಟು ಸರಿ?
ರೋಶ್ನಿ
ತೃತೀಯ ಬಿ.ಕಾಂ.
ಮಿಲಾಗ್ರಿಸ್ ಕಾಲೇಜ್, ಕಲ್ಯಾಣಪುರ