Advertisement

38 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ವಿಷವೇ?: ಡಿಕೆಶಿ

11:24 PM Mar 31, 2024 | Team Udayavani |

ಬೆಂಗಳೂರು: ಕೇವಲ 38 ಸ್ಥಾನ ಗೆದ್ದವರಿಗೆ ಐದು ವರ್ಷ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ವಿಷವೇ? ಅವರಿಗೆ ಹೆಗಲುಗೊಟ್ಟು ಹಗಲಿರುಳು ಹೋರಾಡಿದ್ದು ವಿಷವೇ? ಅಮೃತ ಕೊಟ್ಟವರಿಗೆ ವಿಷ ಕೊಟ್ಟರು ಎನ್ನುತ್ತಾರೆ. ನಾವೆಲ್ಲಿ ಬೆನ್ನಿಗೆ ಚೂರಿ ಹಾಕಿದ್ದೇವೆ? ನಾನು ಏನು ಮಾಡಿದ್ದೇನೆ ಎಂಬುದು ಜೆಡಿಎಸ್‌ ಕಾರ್ಯಕರ್ತರಿಗೆ ಗೊತ್ತಿದೆ…
-ಜೆಡಿಎಸ್‌ ನಾಯಕರ ಬೆನ್ನಿಗೆ ಚೂರಿ ಹಾಕಿದರು ಎಂಬ ಆರೋಪಕ್ಕೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ಇದು.

Advertisement

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರವನ್ನು ಬೀಳಿಸಿದ ಬಿಜೆಪಿ ನಾಯಕರ ಜತೆಗೆ ತಬ್ಟಾಡುತ್ತಿದ್ದಾರೆ. ಇದನ್ನು ಆ ಮತದಾರರೇ ತೀರ್ಮಾನ ಮಾಡಬೇಕು ಎಂದರು.
ಜೆಡಿಎಸ್‌ ಕಾರ್ಯಕರ್ತರು ಅತಂತ್ರ ಸ್ಥಿತಿ ತಲುಪಿದ್ದಾರೆ. ಅಲ್ಲಿನ ಜನಕ್ಕೆ ಡಿ.ಕೆ.ಸುರೇಶ್‌ ಏನು ಎಂಬುದು ಗೊತ್ತಿದೆ. ಅಮಿತ್‌ ಶಾ ಬಂದರೆ ಬಲ ಬರಬಹುದು ಎಂದು ಮಾಡುತ್ತಿದ್ದಾರೆ.

ಇಬ್ಬರೂ ಸೇರಿ ಕಾರ್ಯಕರ್ತರ ಸಭೆ ಯಾಕೆ ಮಾಡಲಿಲ್ಲ? ಇವರಿಬ್ಬರೂ ಒಂದಾದ ತತ್‌ಕ್ಷಣ ಕಾರ್ಯಕರ್ತರು ಒಂದಾಗುತ್ತಾರಾ? ರಾಮನಗರ ಹಾಗೂ ಮಂಡ್ಯ ಜಿಲ್ಲೆ ರಾಜಕಾರಣ ನೋಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಡಿದ ಮಾತು, ಹೇಳಿದ ವಿಚಾರ, ನಡೆದುಕೊಂಡ ರೀತಿ ನೋಡಿದರೆ ಈಗ ಪರಿಸ್ಥಿತಿ ಬದಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ನಿಖೀಲ್‌ ಪರ ಪ್ರಚಾರ ಮಾಡುವಂತೆ ಚಲುವರಾಯಸ್ವಾಮಿಗೆ ಆಹ್ವಾನ ನೀಡಿ ಎಂದು ಹೇಳಿದೆ. ಅನಿತಾ ಕುಮಾರಸ್ವಾಮಿ ಕೂಡ ಚಲುವರಾಯಸ್ವಾಮಿ ಮನೆಗೆ ಹೋಗಲು ಸಿದ್ಧರಿದ್ದರು. ಆದರೆ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಮನೆಗೆ ಹೋಗುವುದು ಬೇಡ ಎಂದಿದ್ದರು. ಈಗ ಕುಮಾರಸ್ವಾಮಿ ಎಲ್ಲರ ಮನೆಗೆ ಹೋಗಲು ಸಿದ್ಧ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಆಗಿರುವ ಪರಿವರ್ತನೆಯಿಂದ ಬಹಳ ಸಂತೋಷವಾಗಿದೆ ಎಂದು ಹೇಳಿದರು.

ಬಿಜೆಪಿ ದುರ್ಬಲ ತಂತ್ರಗಾರಿಕೆ
ಬಿಜೆಪಿ ಈಗ ಗೊಂದಲದ ಗೂಡಾಗಿದೆ. ಸದಾನಂದ ಗೌಡ, ನಳಿನ್‌ ಕುಮಾರ್‌ ಕಟೀಲು, ಪ್ರತಾಪಸಿಂಹ ಸಹಿತ ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಏಕಾಏಕಿ ಕೈಬಿಟ್ಟಿದ್ದಾರೆ. 40 ವರ್ಷ ರಾಜಕಾರಣ ಮಾಡಿಕೊಂಡು ಬಂದವರನ್ನು ಈ ರೀತಿ ಕೈಬಿಟ್ಟರೆ ಹೇಗೆ? ಬಿಜೆಪಿ ದುರ್ಬಲ ತಂತ್ರಗಾರಿಕೆ ಮಾಡಿದೆ. ನಮ್ಮ ಪಕ್ಷ ಭವಿಷ್ಯದಲ್ಲಿ 30-40 ವರ್ಷಗಳ ಕಾಲ ರಾಜಕಾರಣ ಮಾಡಬಲ್ಲ ಯುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದೇವೆ. ಇವರು ರಾಜಕೀಯವಾಗಿ ಪಕ್ಷಕ್ಕೆ ಅಡಿಪಾಯ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅಪ್ಪ-ಮಗಳನ್ನು ದೂರ ಮಾಡಿದ ಅಪವಾದ ಬೇಡ
ನಿಶಾ ಯೋಗೇಶ್ವರ ನಮ್ಮ ಮನೆ ಮಗಳಂತೆ. ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ರಾಜಕೀಯಕ್ಕೆ ಅಪ್ಪ-ಮಗಳನ್ನು ದೂರ ಮಾಡಿದ ಅಪವಾದ ಬೇಡ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು, ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ. ನಿಶಾ ದೊಡ್ಡ ಧೈರ್ಯ ಮಾಡಿರುವಂತೆ ಕಾಣು
ತ್ತಿದೆ. ಕಾಂಗ್ರೆಸ್‌ನಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನಿಸಿದರೆ ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next