ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಕೇಂದ್ರದ ವಿರುದ್ದ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಗುಡುಗಿದ್ದಾರೆ.
ಸುದ್ದಿಗಾರರು ಗುಜರಾತ್‌ನಲ್ಲಿ ರಾಹುಲ್ ಗಾಂಧಿ ಅವರ ಕಾರಿನತ್ತ ಕಲ್ಲು ತೂರಿರುವ ಬಗ್ಗೆ ಕೇಳಿದಾಗ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ‘ರಾಹುಲ್ ಅವರು ಗುಜರಾತ್‌ಗೆ ಕೋಮು ಗಲಭೆ ಮಾಡಿಸಲು ಹೋಗಿದ್ದರಾ? ಅವರು ಪ್ರವಾಹ ಸಂತ್ರಸ್ತ್ರರನ್ನು ಭೇಟಿಯಾಗಿ ಸಾಂತ್ವನ ಹೇಳಲು ಹೋಗಿದ್ದರು. ಅದಕ್ಕೂ ಅವಕಾಶ ನೀಡುವುದಿಲ್ಲ ಅಂತಾದರೆ ಇದೇನು ಹಿಟ್ಲರ್ ಸಂಸ್ಕೃತಿಯಾ? ಸರ್ವಾಧಿಕಾರಿ ವ್ಯವಸ್ಥೆಯಾ ? ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ. ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದರು.
ಡಿ.ಕೆ.ಶಿವಕುಮಾರ್ ಅವರ ಮೇಲಿನ ಐಟಿ ದಾಳಿ ಕುರಿತಾಗಿ ಪ್ರಶ್ನಿಸಿದಾಗ ‘ನೋಡಿ ಕಾನೂನು ರೀತಿ ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತೇವೆ. ಶಿವಕುಮಾರ್ ಅವರಿಗೇನು ಕಾನೂನು ಗೊತ್ತಿಲ್ವಾ? ‘ಎಂದರು.
‘ಯಾರ ಮೇಲೆ ಬೇಕಾದರೂ ದಾಳಿ ಮಾಡಬಹುದು, ಆದರೆ ಒಬ್ಬ ಕ್ಯಾಬಿನೆಟ್ ಸಚಿವನ ಮನೆ ಮೇಲೆ ಸಿಆರ್‌ಪಿಎಫ್ ಪಡೆಗಳನ್ನು ಬಳಸಿ ದಾಳಿ ಮಾಡಬೇಕಿತ್ತಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆಯಾ? ಇಲ್ಲಿ ಪೊಲೀಸರು ಭದ್ರತೆ ನೀಡುವುದಿಲ್ಲವೆ’ ಎಂದು ಕಿಡಿಕಾರಿದರು.
‘ದಾಳಿ ಮಾಡಲಿ ಬಿಜೆಪಿಯವರ ಮೇಲೂ ಮಾಡಲಿ. ಯಡಿಯೂರಪ್ಪನ ಮೇಲೆ ಆರೋಪ ಇಲ್ಲವೆ? ಅನಂತ್ ಕುಮಾರ್ ವಿರುದ್ಧ ಇಲ್ಲವೆ? ಸದಾನಂದ ಗೌಡರ ವಿರುದ್ಧ ಇಲ್ಲವೆ , ಈಶ್ವರಪ್ಪ ನಿವಾಸದಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿರಲಿಲ್ಲವೆ? ಅವರೆಲ್ಲರ ಮನೆಗಳ ಮೇಲೂ ದಾಳಿ ನಡೆಸಲಿ’ ಎಂದು ಸವಾಲು ಹಾಕಿದರು.