Advertisement

ಶಾಲಾರಂಭಕ್ಕೆ ಕಾಡಲಿದೆಯೇ ನೀರಿನ ಅಭಾವ: ಸುರಿಯದ ಮಳೆ: ಏರುತ್ತಿರುವ ಬಿಸಿಲ ಝಳ

03:23 PM May 28, 2023 | Team Udayavani |

ಮಹಾನಗರ: ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಮಳೆ, ಹೊರಗಡೆ ರಣ ಬಿಸಿಲು, ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಇವೆಲ್ಲದರ ನಡುವೆಯೇ ಮೇ 31ರಿಂದ ಶಾಲೆ ಆರಂಭವಾಗಲಿದ್ದು, ನಗರದ ಕೆಲವು ಶಾಲೆಗಳಲ್ಲಿ ತೀವ್ರ ತೊಂದರೆ ಉಂಟಾಗುವ ಸಾಧ್ಯತೆಯಿದೆ.

Advertisement

ನಗರದಲ್ಲಿ ಈಗಾಗಲೇ ರೇಷನಿಂಗ್‌ ಮೂಲಕ ನೀರು ಪೂರೈಕೆ ನಡೆಯುತ್ತಿದ್ದು, ಎತ್ತರದ ಪ್ರದೇಶಗಳಿಗೆ ಟ್ಯಾಂಕರ್‌ ನೀರು ಸರಬರಾಜು ಆಗುತ್ತಿದೆ. ಬಹುತೇಕ ಶಾಲೆಗಳಿಗೆ ಸ್ವಂತ ನೀರಿನ ಮೂಲಗಳಿಲ್ಲ. ಪಾಲಿಕೆಯ ನೀರೇ ಆಧಾರವಾಗಿದೆ. ಒಂದೆಡೆ ಈಗಾಗಲೇ ಕಾಲೇಜುಗಳು ನೀರಿನ ಸಮಸ್ಯೆಯ ನಡುವೆಯೇ ಕಾರ್ಯಾಚರಿಸುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಟ್ಯಾಂಕರ್‌ ನೀರನ್ನೇ ನೆಚ್ಚಿಕೊಂಡಿವೆ. ಇದರ ನಡುವೆಯೇ ಶಾಲೆಗಳು ಆರಂಭವಾದರೆ ನೀರಿನ ಬಳಕೆ ಪ್ರಮಾಣ ಹೆಚ್ಚಾಗಲಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಖಾಸಗಿ, ಅನುದಾನಿತ, ಸರಕಾರಿ ಸೇರಿ ನಗರದಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 500 ಲೀ.ನಿಂದ 1,500 ಲೀ. ವರೆಗೆ ನೀರು ದಿನಕ್ಕೆ ಬೇಕಾಗುತ್ತದೆ. ಶೌಚಾಲಯಕ್ಕೆ ಹೆಚ್ಚಿನ ನೀರು ಬೇಕಾಗಿದ್ದು, ಉಳಿದಂತೆ ಕುಡಿಯಲು, ಊಟದ ಬಳಿಕ ಕೈ ತೊಳೆಯುವುದು, ತಟ್ಟೆ ತೊಳೆಯುವುದು ಮೊದಲಾದವುಗಳಿಗೆ ನೀರು ಅಗತ್ಯ.

ನಗರದ ಸರಕಾರಿ ಶಾಲೆಗಳಿಗೆ ಇಸ್ಕಾನ್‌ನಿಂದ ಮಧ್ಯಾಹ್ನದ ಬಿಸಿಯೂಟ ಪೂರೈಕೆಯಾಗುತ್ತದೆ. ಇದರಿಂದ ಬಿಸಿಯೂಟ ತಯಾರಿಕೆಗೆ ಸಂಬಂಧಿಸಿದ ಕೆಲಸಗಳಿಗೆ ನೀರಿನ ಅಗತ್ಯ ಬೀಳುವುದಿಲ್ಲ. ನೀರಿಲ್ಲದೆ, ಶಾಲೆಗಳಲ್ಲಿ ನಡೆಲಾದ ಹೂವಿನ ಗಿಡಗಳು ಈಗಾಗಲೇ ಬಾಡಿ ಹೋಗಿವೆ.

ಟ್ಯಾಂಕರ್‌ ಮೂಲಕ
ನೀರು ಪೂರೈಕೆಗೆ ಸೂಚನೆ
ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳಿಗೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಆಯಾ ಗ್ರಾಮ ಪಂಚಾಯತ್‌ಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಕೆಲವು ಶಾಲೆಗಳಿಗೆ ಸ್ವಂತ ನೀರಿನ ಮೂಲಗಳಿದ್ದು, ನೀರಿನ ಸಮಸ್ಯೆಯಾದಲ್ಲಿ ಗ್ರಾಪಂ ಪಿಡಿಒ, ಅಧ್ಯಕ್ಷರಿಗೆ ಮನವಿ ಸಲ್ಲಿಸಬೇಕು. ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಿದ್ದು, ಒಂದು ವೇಳೆ ಪೂರೈಕೆಯಾಗದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Advertisement

ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ
ನೀರಿನ ಸಮಸ್ಯೆ ಒಂದೆಡೆಯಾದರೆ ಬಿಸಿಲ ಝಳಕ್ಕೆ ತರಗತಿಯಲ್ಲಿ ಕುಳಿತು ಪಾಠ ಕೇಳುವುದೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ.

ಕೆಲವು ಶಾಲೆಗಳಲ್ಲಿ ತರಗತಿಗಳಲ್ಲಿ ಫ್ಯಾನ್‌ ಕೂಡ ಇಲ್ಲ. ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರೂ ಇದರಿಂದ ಸಮಸ್ಯೆ ಅನುಭವಿಸಲಿದ್ದು, ಎಲ್ಲರೂ ಮಳೆಗಾಗಿ ನಿರೀಕ್ಷಿಸುತ್ತಿದ್ದಾರೆ.

ಮೂಡುಬಿದಿರೆ: ಶೇ.30ರಷ್ಟು
ಶಾಲೆಗಳಲ್ಲಿ ಸಮಸ್ಯೆ
ಮೂಡುಬಿದಿರೆ ವ್ಯಾಪ್ತಿಯಲ್ಲಿ ಶೇ. 30ರಷ್ಟು ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಸೋಮವಾರ ಈ ಸಂಬಂಧ ಶಾಲೆ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆಯಲಾಗುವುದು. ನೂರು ಮಕ್ಕಳಿರುವ ಶಾಲೆಗೆ ದಿನಕ್ಕೆ ಕನಿಷ್ಠ ಒಂದು ಸಾವಿರ ಲೀ. ನೀರಿನ ಅಗತ್ಯವಿದೆ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯತ್‌ಗಳಿಂದ ನೀರನ್ನು ಪಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ. ಶಾಲಾರಂಭಕ್ಕೆ ಮುನ್ನ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಮೂಡುಬಿದಿರೆ ಬಿಇಒ ತಿಳಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ
ಬಗೆಹರಿಸಲು ಕ್ರಮ
ಶಾಲಾರಂಭ ಮುಂದೂಡಿಕೆ ಕುರಿತ ನಿರ್ಧಾರ ಜಿಲ್ಲೆ ಅಥವಾ ರಾಜ್ಯ ಮಟ್ಟದಲ್ಲಿ ಆಗಬೇಕಿದೆ. ಬಿಇಒ ಮಟ್ಟದಲ್ಲಿ ಶಾಲಾ ಮುಖ್ಯಶಿಕ್ಷಕರ ಸಭೆ ನಡೆಸಲಾಗಿದ್ದು, ಕುಡಿ ಯುವ ನೀರು ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ಕುಡಿ ಯುವ ನೀರಿನ ಸಮಸ್ಯೆಗಳಿರುವಲ್ಲಿ ಸ್ಥಳೀಯ ಮಟ್ಟದಲ್ಲಿ ಬಗೆಹರಿಸಲಾಗುವುದು.
– ಎಚ್‌.ಆರ್‌. ಈಶ್ವರ್‌ ಮಂಗಳೂರು
ದಕ್ಷಿಣ ಬಿಇಒ

Advertisement

Udayavani is now on Telegram. Click here to join our channel and stay updated with the latest news.

Next