ಇಸ್ತಾಂಬೂಲ್ : ಹೊಸ ವರ್ಷದ ರಾತ್ರಿ ಇಲ್ಲಿನ ನೈಟ್ ಕ್ಲಬ್‌ನಲ್ಲಿ 39 ಅಮಾಯಕರ ಬಲಿಪಡೆಯಲಾದ ಉಗ್ರ ದಾಳಿ ತನ್ನದೇ ಕೃತ್ಯವೆಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ. ದಾಳಿಕೋರ ಉಗ್ರ ಇನ್ನೂ ತಲೆತಪ್ಪಿಸಿಕೊಂಡಿದ್ದು ಆತನಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಉಗ್ರ ದಾಳಿಯಲ್ಲಿ ಮೃತಪಟ್ಟಿರುವ 39 ಮಂದಿಯ ಪೈಕಿ ಇಬ್ಬರು ಭಾರತೀಯರಾಗಿದ್ದು ಉಳಿದವರಲ್ಲಿ ಹೆಚ್ಚಿನವರು ವಿದೇಶೀಯರೇ ಆಗಿದ್ದಾರೆ.
ಇಸ್ತಾಂಬೂಲ್‌ನ ರೀನಾ ನೈಟ್ ಕ್ಲಬ್ ಮೇಲಿನ ಉಗ್ರ ದಾಳಿಯನ್ನು ಖಲೀಫತ್ ಸೈನಿಕರು ನಡೆಸಿದ್ದಾರೆ ಎಂದು ಐಸಿಸ್ ಉಗ್ರ ಸಂಘಟನೆಯ ಹೇಳಿಕೆಯು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಮುಸ್ಲಿಂ ಬಾಹುಳ್ಯದ ಟರ್ಕಿಯು ಕ್ರೈಸ್ತರ ಸೇವಕರಾಗಿದ್ದಾರೆ ಎಂದು ಐಸಿಸ್ ತನ್ನ ಹೇಳಿಕೆಯಲ್ಲಿ ಟೀಕಿಸಿದೆ. ನೆರೆಯ ಸಿರಿಯಾ ಮತ್ತು ಇರಾಕ್‌ನಲ್ಲಿ ಐಸಿಸ್ ವಿರುದ್ಧ ಹೋರಾಡುವ ಅಂತಾರಾಷ್ಟ್ರೀಯ ಸಂಯುಕ್ತ ಪಡೆಯೊಂದಿಗೆ ಅಂಕಾರಾ ಮೈತ್ರಿ ಹೊಂದಿರುವುದಕ್ಕೆ ಇದು ಐಸಿಸ್‌ನ ನೇರ ಆಕ್ರೋಶವೆಂದು ತಿಳಿಯಲಾಗಿದೆ.
ಒಳಾಡಳಿತ ಸಚಿವ ಸುಲೇಮಾನ್ ಸೊಯುಲು ಅವರು “ತಲೆಮರೆಸಿಕೊಂಡಿರುವ ಬಂದೂಕುಧಾರಿ ಉಗ್ರನನ್ನು ಬೇಗನೆ ಸೆರೆ ಹಿಡಿಯಲಾಗುವುದು’ ಎಂದು ಹೇಳಿದ್ದಾರೆ.