ಚಾಕಲೇಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ? ದೊಡ್ಡವರು ಸಣ್ಣವರು ಎಂಬ ಬೇಧವಿಲ್ಲದೇ ಎಲ್ಲರ ಬಾಯಲ್ಲು ನೀರೂರಿಸೋ ಶಕ್ತಿ ಚಾಕಲೇಟ್ ಗೆ ಇದೆ. ಹೆಚ್ಚಿನವರಿಗೆ ಯಾವೆಲ್ಲಾ ರೀತಿಯ ಚಾಕಲೇಟ್ ಇದಿಯೋ ಅದೆಲ್ಲಾನೂ ಇಷ್ಟ. ದಾರಿಯಲ್ಲಿ ಹೋಗುವಾಗ ಅಂಗಡಿಯ ಮುಂದೆ ಇರಿಸಿದ ಚಾಕಲೇಟ್ ನ್ನು ನೋಡಿದರೇ ‘ನಂಗೆ ಬೇಕೇ ಬೇಕು’ ಎಂದು ಹಠ ಮಾಡೋ ಮಕ್ಕಳು, ಅವರನ್ನು ಹಾಗೋ ಹೇಗೋ ಸಂಬಾಳಿಸುವ ಹೆತ್ತವರು, ಆದರೂ ಪಟ್ಟು ಬಿಡದೆ ಕಂಡ ಚಾಕಲೇಟನ್ನು ತನ್ನದಾಗಿಸಿ ನಗುವ ಮಕ್ಕಳನ್ನು ನೋಡುವುದೇ ಚಂದ. ಒಟ್ಟಾರೆ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರಿಗೂ ಚಾಕಲೇಟ್ ಅಂದರೆ ಇಷ್ಟ.
ಈ ಚಾಕಲೇಟ್ ಗಳು ಭಾವನೆಯನ್ನು ಹಂಚಿಕೊಳ್ಳುವ ಒಂದು ಸಾಧನವಾಗಿ ಕೂಡ ಕೆಲಸ ಮಾಡುತ್ತದೆ. ಪ್ರೀತಿ, ಮಮತೆ, ಸ್ನೇಹ ಎಲ್ಲಾ ರೀತಿಯ ಬಂಧಗಳಲ್ಲಿ ಇದು ತನ್ನ ಸಿಹಿಯನ್ನು ಹಂಚಿಕೊಳ್ಳುತ್ತದೆ.
ಚಾಕಲೇಟ್ ಖರೀದಿಸುವವರಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಾಹಾರಿಗಳು ಎಂಬ ಯಾವುದೇ ಬೇಧವಿಲ್ಲದೆ ಎಲ್ಲರೂ ಇದನ್ನು ಖರೀದಿಸುತ್ತಾರೆ. ಜನರೂ ಕೂಡ ಇದರಲ್ಲಿ ಯಾವೆಲ್ಲಾ ಪದಾರ್ಥಗಳು ಸೇರಿವೆ ಎಂದು ತಿಳಿಯುವ ಸಾಹಸ ಮಾಡುವುದು ಕೂಡ ಕಡಿಮೆಯೇ. ನಾವು ಅಷ್ಟು ಇಷ್ಟ ಪಟ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಚಾಕಲೇಟ್ ನ್ನು ಮಾಂಸಹಾರಿ ಹಾಗೂ ಸಸ್ಯಾಹಾರಿ ಎಂದು ವಿಂಗಡಿಸಲಾಗುತ್ತದೆ ಎಂಬ ವಿಷಯ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಕೇಳಿದರೆ ಅಲ್ಲೊಂದು ಇಲ್ಲೊಂದು ಉತ್ತರ ಬರಬಹುದಷ್ಟೇ. ಇದರ ಬಗ್ಗೆ ತಿಳಿದಿರುವವರು ತುಂಬಾ ವಿರಳ.
ಹೌದು, ಚಾಕಲೇಟನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಕೆಲವು ಚಾಕಲೇಟ್ ಗಳನ್ನು ತಯಾರಿಸುವಾಗ ಮಾಂಸಾಹಾರಿ ಅಂಶಗಳನ್ನು ಸೇರಿಸಲಾಗುತ್ತದೆ.
ಚಾಕಲೇಟನ್ನು ಕೋಕೋ ಹಣ್ಣಿಂದ ತಯಾರಿಸಲಾಗುತ್ತದೆ. ಇದು ಶುದ್ದ ಸಸ್ಯಾಹಾರವಾಗಿದೆ. ಆದರೆ ನಂತರದ ತಯಾರಿಕಾ ವಿಧಾನದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಲಾಗುತ್ತದೆ. ಚಾಕಲೇಟ್ ತಯಾರಿಕೆಯ ಸಮಯದಲ್ಲಿ ಪ್ರಾಥಮಿಕವಾಗಿ ಚಾಕಲೇಟ್ ನಲ್ಲಿ ಕೋಕೋ, ಸಕ್ಕರೆ, ಕೋಕೋ ಬಟರ್ ಗಳನ್ನು ಬಳಸಲಾಗುತ್ತದೆ. ಎಗ್ ವೈಟ್ ಅಥವಾ ಅಲ್ಬುಮೆನ್, ಮೊಟ್ಟೆ ಲೆಸಿಥಿನ್, ಶೆಲಾಕ್, ಕ್ಯಾಫ್ ರೆನೆಟ್ ಮತ್ತು ಜೆಲಾಟಿನ್ ಗಳನ್ನು ಸೇರಿಸಿದಾಗ ಅದು ಮಾಂಸಹಾರಿ ರೂಪ ತಾಳುತ್ತದೆ.
ಸಾಮಾನ್ಯವಾಗಿ ಡಾರ್ಕ್ ಚಾಕಲೇಟ್ ಗಳು ಸಸ್ಯಾಹಾರ ವಾಗಿರುತ್ತದೆ. ಇದಕ್ಕೆ ಮಾಂಸಹಾರ ಅಂಶಗಳು ಸೇರ್ಪಡೆಯಾಗುವುದು ತುಂಬಾ ಕಡಿಮೆ. ಆದರೆ ಮಿಲ್ಕ್ ಚಾಕಲೇಟ್ ಗಳನ್ನು ತಯಾರಿಸುವಾಗ ಅದಕ್ಕೆ ಮಾಂಸಾಹಾರಿ ಅಂಶಗಳನ್ನು ಸೇರಿಸಲಾಗುತ್ತದೆ.
ಚಾಕಲೇಟ್ ಸಿಂಬಲ್
ಹಾಗಾದರೆ ಚಾಕಲೇಟ್ ನಲ್ಲಿ ಈ ರೀತಿಯ ಅಂಶ ಸೇರ್ಪಡೆಯಾಗಿದೆ ಎಂದು ತಿಳಿಯುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ಅಂಗಡಿಯಲ್ಲಿ ಲಭಿಸುವ ಪ್ಯಾಕ್ ಆದ ತಿಂಡಿಗಳ ಪ್ಲಾಸ್ಟಿಕ್ ಕವರಲ್ಲಿ ಅದು ಸಸ್ಯಾಹಾರವೋ, ಮಾಂಸಾಹಾರವೋ ಎಂದು ಒಂದು ಸಣ್ಣ ಗುರುತಿನ ಮೂಲಕ ತಿಳಿಸಿರುತ್ತಾರೆ. ಹಾಗೆಯೇ ಅಂತಹದ್ದೇ ಗುರುತನ್ನು ಚಾಕಲೇಟ್ ನ ಕವರ್ ನಲ್ಲಿ ನಮೂದಿಸಲಾಗುತ್ತದೆ.
ಸಾಮಾನ್ಯವಾಗಿ ಸಸ್ಯಾಹಾರಿ ಚಾಕೊಲೇಟ್ ಕವರ್ ನಲ್ಲಿ ಹಸಿರು ಬಣ್ಣದ ಚಿಹ್ನೆಯನ್ನು ನಮೂದಿಸಲಾಗಿರುತ್ತದೆ.
ಹಾಗೆಯೇ ಮಾಂಸಾಹಾರಿ ಚಾಕಲೇಟ್ ನಲ್ಲಿ ಕಂದು ಬಣ್ಣದ ಚಿಹ್ನೆಯನ್ನು ನಮೂದಿಸಲಾಗಿರುತ್ತದೆ.
ಈ ಮೂಲಕ ಸಸ್ಯಾಹಾರಿ ಹಾಗೂ ಮಾಂಸಾಹಾರಿ ವ್ಯಕ್ತಿಗಳು ಚಾಕಲೇಟನ್ನು ಖರೀದಿಸಬಹುದು. ಆಹಾರ ಪದಾರ್ಥಗಳಲ್ಲಾದರೆ ಕೆಂಪು ಬಣ್ಣದ ಚಿಹ್ನೆಯು ಚಾಲ್ತಿಯಲ್ಲಿದೆ. ಅದು ಆ ಆಹಾರದಲ್ಲಿ ಪೂರ್ತಿ ಮಾಂಸಾಹಾರ ಅಂಶವನ್ನು ಸೇರಿಸಲಾಗಿರುತ್ತದೆ ಎಂದು ತಿಳಿಸುತ್ತದೆ.
-ಪೂರ್ಣಶ್ರೀ .ಕೆ