ನೋಯ್ಡಾ: ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಮೇ 25 ರಂದು ಸಂಜೆ ನೋಯ್ಡಾ ಸೆಕ್ಟರ್ -100 ರ ಲೋಟಸ್ ಬೌಲೆವರ್ಡ್ ಸೊಸೈಟಿಯಲ್ಲಿ ಶಿಲ್ಪಾ ಎನ್ನುವ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬಂದ ದೂರಿನ ಹಿನ್ನೆಲೆಯಲ್ಲಿ ಐಆರ್ ಎಸ್ ಅಧಿಕಾರಿ ಸೌರಭ್ ಮೀನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?: ಐಆರ್‌ಎಸ್ ಅಧಿಕಾರಿ ಸೌರಭ್ ಮೀನಾ ಹಾಗೂ ಮೃತ ಶಿಲ್ಪಾ ಗೌತಮ್ ಕಳೆದ ಮೂರು ವರ್ಷಗಳಿಂದ ಲಿವ್ ಇನ್ ರಿಲೇಷನ್ ನಲ್ಲಿದ್ದರು. ಶಿಲ್ಪಾ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಗೆ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರೆ, ಸೌರಭ್ ಆದಾಯ ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿದ್ದರು.
ಶಿಲ್ಪಾ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಚಾರ ತಿಳಿದ ಪೊಲೀಸರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಶಿಲ್ಪಾ ಸೌರಭ್ ಬಳಿ ಮದುವೆಯಾಗುವಂತೆ ಹೇಳುತ್ತಿದ್ದಳು. ಈ ಕಾರಣದಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಆಗಾಗ ಜಗಳ ಆಗುತ್ತಿತ್ತು. ಇದರಿಂದ ಶಿಲ್ಪಾಳ ಮೇಲೆ ಸೌರಭ್ ಹಲ್ಲೆ ಮಾಡುತ್ತಿದ್ದ ಎಂದು ಪೋಷಕರು ಪೊಲೀಸರ ಬಳಿ ಹೇಳಿ ದೂರು ದಾಖಲಿಸಿದ್ದಾರೆ.
ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸೌರಭ್‌ನನ್ನು ಬಂಧಿಸಿದ್ದಾರೆ.
ಘಟನೆಯ ಸಮಯದಲ್ಲಿ ಸೌರಭ್ ಅಪಾರ್ಟ್‌ಮೆಂಟ್‌ನಲ್ಲಿದ್ದರು ಎನ್ನುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.