Advertisement
ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಹೇಮಾವತಿ ನದಿ ಬಳಿ ನೀರು ಎತ್ತಿ ಬರಡು ಪ್ರದೇಶವಾದ ತಾಲೂಕಿನ ಅಘಲಯ, ಸಂತೆಬಾಚಹಳ್ಳಿ ಮತ್ತಿತರ ಪ್ರದೇಶಗಳಿಗೆ ಒದಗಿಸಲು ಏತ ನೀರಾವರಿ ಯೋಜನೆಗೆ ಪಂಪ್‌ಹೌಸ್ ನಿರ್ಮಾಣವಾಗಿದೆ. 207 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ಪೂರ್ಣ ವಾದರೆ ಚನ್ನರಾಯಪಟ್ಟಣ, ಕೆ.ಆರ್.ಪೇಟೆ, ನಾಗ ಮಂಗಲ ತಾಲೂಕಿನ ರೈತರ ಬದುಕು ಹಸನಾಗುತ್ತದೆ. ಜೊತೆಗೆ ತಾಲೂಕಿನ 69 ಕೆರೆ, 23 ಕಟ್ಟೆಗಳು ತುಂಬಲಿವೆ.
Related Articles
Advertisement
ಪೈಪ್‌ಲೈನ್‌ಗೆ ರೈತರ ವಿರೋಧ: ಮೊದಲನೆ ಹಂತವಾಗಿ ಗೂಡೆಹೊಸಹಳ್ಳಿ, ಊಗಿನಹಳ್ಳಿ, ಅಂಕನಹಳ್ಳಿ, ಐಕನಹಳ್ಳಿ, ಕೆ.ಹೊಸಹಳ್ಳಿ ಮಾರ್ಗದ 1.5 ಕಿ.ಮೀ. ಪೈಪ್‌ಲೈನ್ ಅಳವಡಿಕೆಗೆ ಹಲವು ಸ್ಥಳದಲ್ಲಿ ರೈತರ ವಿರೋಧವಿದೆ. ಯೋಜನೆ ಅನುಷ್ಠಾನಕ್ಕೆ ತೊಡಕಾಗಿದೆ. ನದಿಯಿಂದ ನೀರು ಎತ್ತಲು ಮೋಟಾರ್ ಪಂಪ್ ಅಳವಡಿಸಬೇಕಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಇಲಾಖೆಯಿಂದ ನಿಶಾನೆ ದೊರೆತಿದ್ದು, ಆನೆಗೋಳ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸಂಪರ್ಕ ಪಡೆಯಬೇಕಿದೆ. ರೈತರ ಜಮೀನಿನಲ್ಲಿ 66 ಕೆ.ವಿ. ಮಾರ್ಗದ ವಿದ್ಯುತ್ ಪಡೆಯಲು ಟವರ್ ಅಳವಡಿಕೆಗೆ ಜಾಗದ ಅವಶ್ಯಕತೆ ಇದ್ದು ಮತ್ತಷ್ಟು ತೊಡಕು ಕಾಡಲಾರಂಭಿಸಿದೆ.
ರೈತರ ಜೊತೆ ಸಂಧಾನ ನಡೆಸಿ: ರೈತರೊಂದಿಗೆ ಸಂಧಾನ ಪ್ರಕ್ರಿಯೆಗೆ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಅಧಿಕಾರಿಗಳು ಮುಂದಾಗುವುದು ಅವಶ್ಯವಿದೆ. ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು, ಹಲವು ತೊಡಕುಗಳನ್ನು ಪರಿಹರಿಸಲು ತಾಲೂಕಿನ ಶಾಸಕ ಎಚ್.ಟಿ. ಮಂಜು, ಶ್ರವಣಬೆಳಗೊಳ ಕ್ಷೇತ್ರ ಶಾಸಕ ಸಿ.ಎನ್.ಬಾಲಕೃಷ್ಣ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಯೋಜನೆ ವಿಸ್ತಾರ ಹೆಚ್ಚಿಸಿ ಮತ್ತಷ್ಟು ಕೆರೆ ಕಟ್ಟೆ ತುಂಬಿಸಿ ತಮ್ಮ ಕ್ಷೇತ್ರದ ನಾಗಮಂಗಲ ಪ್ರದೇಶದ ಬರಡು ಭೂಮಿ ಹಸನಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಶಯ ಕೂಡ ಆಗಿದೆ.
ಯೋಜನೆಯ ಮೊದಲನೇ ಹಂತ ಮುಕ್ತಾಯವಾಗುತ್ತಿದೆ. ಭೂಸ್ವಾಧೀನದಲ್ಲಿ ತೊಡಕಿದೆ. ತ್ವರಿತವಾಗಿ ಪರಿಹರಿಸಲು ರೈತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಬರಗಾಲ ಬಂದಿದೆ. ರೈತರಿಗಾಗಿ ಯೋಜನೆ ಬೇಗ ಲೋಕಾರ್ಪಣೆ ಆಗಲು ಕಂದಾಯ, ನೀರಾವರಿ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸರ್ಕಾರಕ್ಕೆ ಒತ್ತಡ ಹಾಕಲಾಗುತ್ತಿದೆ. ●ಎಚ್.ಟಿ.ಮಂಜು, ಶಾಸಕ, ಕೆ.ಆರ್.ಪೇಟೆ
ಮೊದಲ ಹಂತದ ಯೋಜನೆ ಕಾಮಗಾರಿ ಶೇ.90 ಮುಗಿದಿದೆ. 1 ಕಿ.ಮೀ. ಪೈಪ್ ಅಳವಡಿಕೆಗೆ ಹಲವು ರೈತರ ವಿರೋಧವಿದೆ. ಹೊಸದಾಗಿ ರೈತರ ಜಮೀನಿನಲ್ಲಿ ವಿದ್ಯುತ್ ಲೈನ್‌ಗೆ ಟವರ್ ನಿರ್ಮಿಸಬೇಕಿದೆ. ರೈತರೊಂದಿಗೆ ಸಂಧಾನ ಮಾಡಲಾಗುತ್ತಿದೆ. ಸುಖ್ಯಾಂತವಾದರೆ ಒಂದೆರಡು ತಿಂಗಳಲ್ಲಿ ಕನಿಷ್ಠ ಅಘಲಯ ಕೆರೆ ತುಂಬಿಸಬಹುದು. ●ಚಂದ್ರೇಗೌಡ, ಎಇಇ, ಎಚ್‌ಎಲ್‌ಬಿಸಿ.
ಯೋಜನೆಯಿಂದ ರೈತನ ಬದುಕು ನೆಮ್ಮದಿ, ಆರ್ಥಿಕ ಸುಸ್ಥಿರತೆ ಕಾಣಬಹುದು. ಗೂಡೆಹೊಸಹಳ್ಳಿ ರೈತರಿಗೆ ಯೋಜನೆ ಅನುಕೂಲವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ರೈತರತ್ತ ಗಮನ ಹರಿಸಬೇಕು. -ಕುಮಾರ್, ರೈತ, ಗೂಡೆಹೊಸಹಳ್ಳಿ.
–ತ್ರಿವೇಣಿ