Advertisement

ಕಠಿಣ ಶ್ರಮ ಜೀವಿ ಇರ್ಫಾನ್ ಎಂಬ ಬಾಲಿವುಡ್ ಸಹಜ ನಟನನ್ನು ಮರೆಯಲು ಸಾಧ್ಯವೇ…

08:10 AM Apr 30, 2020 | Nagendra Trasi |

ಮಣಿಪಾಲ: ಬಾಲಿವುಡ್ ನಂತಹ ಮಹಾಸಾಗರದಲ್ಲಿ ಘಟಾನುಘಟಿ ನಟ, ನಟಿಯರಿಗೆ ಕೊರತೆ ಏನೂ ಇರಲಿಲ್ಲ. ಹೀಗೆ 1990ರ ಸುಮಾರಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಇರ್ಫಾನ್ ಖಾನ್ ಅದೆಷ್ಟು ಅದ್ಭುತ ನಟರಾಗಿ ಬೆಳೆದು ಬಿಟ್ಟಿದ್ದರು ಎಂಬುದಕ್ಕೆ ಅವರು ನಟಿಸಿದ ಸಿನಿಮಾಗಳಲ್ಲಿನ ಪಾತ್ರವೇ ಸಾಕ್ಷಿಯಾಗಿದೆ.

Advertisement

ಸಲಾಂ ಬಾಂಬೆ, ಎಕ್ ಡಾಕ್ಟರ್ ಕಿ ಮೌತ್, ಡೆಡ್ ಲೈನ್ ಸಿರ್ಫ್ 24 ಗಂಟೆ, ಮಕ್ಬೂಲ್, ಆ್ಯಸಿಡ್ ಫ್ಯಾಕ್ಟರಿ, ಲೈಫ್ ಆಫ್ ಪೈ, ಲಂಚ್ ಬಾಕ್ಸ್, ಪೀಕು, ನ್ಯೂಯಾರ್ಕ್, ಬ್ಲ್ಯಾಕ್ ಮೇಲ್ ಸೇರಿದಂತೆ 2020ರಲ್ಲಿ ಬಿಡುಗಡೆಯಾದ ಅಂಗ್ರೇಝಿ ಮೀಡಿಯಂ ಸಿನಿಮಾದಲ್ಲಿನ ನಟನೆ ಮರೆಯಲು ಸಾಧ್ಯವಿಲ್ಲ.

1967ರ ಜನವರಿ 7ರಂದು ರಾಜಸ್ಥಾನದ ಜೈಪುರದಲ್ಲಿ ಸಹಾಬಝಾದೇ ಇರ್ಫಾನ್ ಅಲಿ ಖಾನ್ ಜನಿಸಿದ್ದರು. ಟೋಂಕ್ ಜಿಲ್ಲೆಯ ಖಾಜುರಿಯಾ ಗ್ರಾಮದ ಬಳಿ ತಂದೆ ಜಾಗೀರ್ದಾರ್ ಖಾನ್ ಟಯರ್ ವ್ಯವಹಾರ ನಡೆಸುತ್ತಿದ್ದರು. ಆರಂಭದಲ್ಲಿ ಉತ್ತಮ ಕ್ರಿಕೆಟಿಗನಾಗಿದ್ದ, ಎಂಎ ಪದವೀಧರಾಗಿದ್ದ ಖಾನ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿಯೂ ತರಬೇತಿ ಪಡೆದಿದ್ದರು. ಜೀವನೋಪಾಯಕ್ಕಾಗಿ ಖಾನ್ ಬಂದಿದ್ದು ವಾಣಿಜ್ಯ ನಗರಿ ಮುಂಬೈಗೆ.

ಆರಂಭದಲ್ಲಿ ಇರ್ಫಾನ್ ಅಂದಿನ ಜನಪ್ರಿಯ ಟಿವಿ ಸಿರಿಯಲ್ ಗಳಾದ ಚಾಣಕ್ಯ, ಭಾರತ್ ಎಕ್ ಖೋಜ್, ಸಾರಾ ಜಹಾನ್ ಹಮಾರಾ, ಬನೇಗಿ ಅಪ್ನಿ ಬಾತ್, ಚಂದ್ರಕಾಂತಾದಲ್ಲಿ ನಟಿಸಿದ್ದರು. 1990ರಲ್ಲಿ ಪ್ರಸಿದ್ಧ ಬೆಂಗಾಲಿ ನಿರ್ದೇಶಕ ತಪನ್ ಸಿನ್ನಾ ನಿರ್ದೇಶನದ ಎಕ್ ಡಾಕ್ಟರ್ ಕಿ ಮೌತ್ ಸಿನಿಮಾದಲ್ಲಿ ಇರ್ಫಾನ್ ಸಿನಿ ಜೀವನ ಆರಂಭಿಸಿದ್ದರು. 1998ರಲ್ಲಿ ಸಚ್ ಎ ಲಾಂಗ್ ಜರ್ನಿ ಸಿನಿಮಾದಲ್ಲಿ ನಟಿಸಿದ್ದರು. ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು ಕೂಡಾ ಇರ್ಫಾನ್ ಹೆಚ್ಚು ಪ್ರಸಿದ್ದಿಗೆ ಬಂದಿರಲಿಲ್ಲವಾಗಿತ್ತು.

2001ರಲ್ಲಿ ದ ವಾರಿಯರ್ ಸಿನಿಮಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. 2003-04ರಲ್ಲಿ ಅಶ್ವಿನ್ ಕುಮಾರ್ ಅವರ ಕಿರು ಚಿತ್ರ ರೋಡ್ ಟು ಲಡಾಖ್ ನಲ್ಲಿ ಅಭಿನಯಿಸಿದ್ದರು. ಇದು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಮೂಲಕ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. 2003ರಲ್ಲಿ ವಿಶಾಲ್ ಭಾರದ್ವಾಜ್ ನಿರ್ದೇಶನದ ಮಕ್ಬೂಲ್ ಸಿನಿಮಾದಲ್ಲಿ ಖಾನ್ ಉತ್ತಮವಾಗಿ ನಟಿಸಿದ್ದರು.

Advertisement

2005ರಲ್ಲಿ ಹಿಮಾಂಶು ನಿರ್ದೇಶನದ ರೋಗ್ ಸಿನಿಮಾದಲ್ಲಿ ಇರ್ಫಾನ್ ಹೀರೋ ಆಗಿ ನಟಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. 2003ರಲ್ಲಿ ಬಿಡುಗಡೆಯಾಗಿದ್ದ ಹಾಸಿಲ್ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಇರ್ಫಾನ್ ಖಾನ್ 20004ರಲ್ಲಿ ಫಿಲ್ಮ್ ಫೇರ್ ಬೆಸ್ಟ್ ವಿಲನ್ ಪ್ರಶಸ್ತಿ ಪಡೆದುಕೊಂಡಿದ್ದರು. ತೆಲುಗಿನ ಸೈನಿಕುಡು ಚಿತ್ರದಲ್ಲಿಯೂ ನಟಿಸಿ ಟಾಲಿವುಡ್ ಪ್ರೇಕ್ಷಕರ ಮನಗೆದ್ದಿದ್ದರು.

2007ರಲ್ಲಿ ಅನುರಾಗ್ ಬಸು ನಿರ್ದೇಶನದ ಮೆಟ್ರೋ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ವಿ ಗಳಿಸಿತ್ತು. ಅಷ್ಟೇ ಅಲ್ಲ ಖಾನ್ ಗೆ ಫಿಲ್ಮ್ ಫೇರ್ ಬೆಸ್ಟ್ ಸಪೋರ್ಟಿಂಗ್ ನಟ ಪ್ರಶಸ್ತಿ ದೊರಕಿತ್ತು. ಅಂತಾರಾಷ್ಟ್ರೀಯ ಸಿನಿಮಾಗಳಾದ The Mighty Heart ಮತ್ತು The Darjeeling Limitedನಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು. ಬಾಲಿವುಡ್ ನಲ್ಲಿ ಯಶಸ್ವಿ ನಟನಾದ ನಂತರವೂ ಖಾನ್ ಟೆಲಿವಿಷನ್ ಬದುಕನ್ನು ಮುಂದುವರಿಸಿದ್ದರು. ಸ್ಟಾರ್ ಒನ್ ನಲ್ಲಿ “ಮಾನೋ ಯಾ ನಾ ಮಾನೋ ಶೋ ಅನ್ನು ಖಾನ್ ನಿರೂಪಿಸಿದ್ದರು.

ನಂತರ ಆ್ಯಸಿಡ್ ಫ್ಯಾಕ್ಟರಿ, ನ್ಯೂಯಾರ್ಕ್, ಐ ಲವ್ ಯೂ, ಪಾನ್ ಸಿಂಗ್ ತೋಮರ್, ಲಂಚ್ ಬಾಕ್ಸ್, ಪೀಕು, ತಲ್ವಾರ್, ಜಝ್ ಬಾ, ಬ್ಲ್ಯಾಕ್ ಮೇಲ್ ನಂತಹ ಸಿನಿಮಾಗಳಲ್ಲಿ ಸಹಜ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದರು. 1995ರಲ್ಲಿ ಸುತಾಪ ಸಿಕ್ದಾರ್ ಜತೆ ಖಾನ್ ವಿವಾಹವಾಗಿದ್ದರು. ದಂಪತಿಗೆ ಬಬ್ಲಿ ಹಾಗೂ ಅಯಾನ್ ಸೇರಿದಂತೆ ಇಬ್ಬರು ಗಂಡುಮಕ್ಕಳು. ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವಾಗಲೇ 2018ರಲ್ಲಿ ಖಾನ್ ಕಾಯಿಲೆಯೊಂದಕ್ಕೆ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದರು. ಮಾಧ್ಯಮಗಳ ವರದಿ ಪ್ರಕಾರ ಖಾನ್ ಮಿದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿತ್ತು. ಆದರೆ ಬಳಿಕ ಖಾನ್ ಸ್ಪಷ್ಟನೆ ನೀಡಿ ಊಹಾಪೋಹ ಹಬ್ಬಿಸಬೇಡಿ, ತಾನು ನ್ಯೂರೋಎಂಡೋಕ್ರೈನ್ (ದೊಡ್ಡ ಕರುಳು)ಟ್ಯೂಮರ್ ನಿಂದ ಬಳಲುತ್ತಿದ್ದೇನೆ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದರು. ಲಂಡನ್ ನಲ್ಲಿ ಚಿಕಿತ್ಸೆ ಪಡೆದು ಮುಂಬೈಗೆ ವಾಪಸ್ ಆಗಿದ್ದರು. ಇದೀಗ ಇರ್ಫಾನ್ ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ಅದ್ಭುತ ನಟನೆಯ ನೆನಪು ಸದಾ ನಮ್ಮೊಂದಿಗೆ ಇರಲಿದೆ…

Advertisement

Udayavani is now on Telegram. Click here to join our channel and stay updated with the latest news.

Next