Advertisement

ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ದೂರು

02:15 PM Sep 21, 2018 | |

ಬೆಳ್ತಂಗಡಿ : ಉಜಿರೆ ಗ್ರಾ.ಪಂ.ನ 2017-18ನೇ ಸಾಲಿನ ಜಮಾಬಂದಿ ಪಂ. ಸುವರ್ಣಸೌಧ ಸಭಾಭವನದಲ್ಲಿ ಜರಗಿತು. ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಪ್ರಸನ್ನಭಕ್ತ ಕೆ.ಆರ್‌. ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಲೆಕ್ಕ ಅಧೀಕ್ಷಕ ಕೆ. ಸದಾನಂದ ಆಚಾರ್‌ ಜಮಾಬಂದಿ ನಡೆಸಿಕೊಟ್ಟರು. ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. 2017-18ನೇ ಸಾಲಿನ ಲೆಕ್ಕಪತ್ರ, ಜಮಾ ಖರ್ಚಿನ ವರದಿ ಮಂಡಿಸಿದರು. ಗತವರ್ಷದಲ್ಲಿ ಸಾಮಗ್ರಿಗಳ ಖರೀದಿ, ಕಾಮಗಾರಿ ವಿವರ, ಖರ್ಚು, ಉದ್ಯೋಗ ಖಾತರಿ ಯೋಜನೆ ಗಳ ಕಾಮಗಾರಿ ಕುರಿತು ವರದಿ ಮಂಡಿಸಿದರು.

Advertisement

ಲಿಖಿತ ದೂರು
ಬಾಲಸುಬ್ರಹ್ಮಣ್ಯ ಭಟ್‌ ಅವರು ಪಂ. ಲೆಕ್ಕಪತ್ರ, ವ್ಯವಹಾರಗಳು ಪಾರದರ್ಶಕವಾಗಿಲ್ಲ. ಸಮಗ್ರ ತನಿಖೆ ನಡೆಸಬೇಕು ಎಂದು ಲಿಖಿತ ದೂರನ್ನು ಮಾರ್ಗದರ್ಶಿ ಅಧಿಕಾರಿಗಳಿಗೆ ನೀಡಿದರು. ತೆರಿಗೆ ಬಾಕಿ ವಿವರ ಸಮರ್ಪಕವಾಗಿಲ್ಲ. ಗುತ್ತಿಗೆದಾರರ ಟೆಂಡರ್‌ ಪ್ರಕ್ರಿಯೆ ನಿಯಮಾವಳಿಯಂತೆ ನಡೆದಿಲ್ಲ. ಕಳಪೆ ಕಾಮಗಾರಿಗಳಿಗೂ ಬಿಲ್‌ ಪಾವತಿಸಲಾಗಿದೆ. ಬೀದಿದೀಪ ನಿರ್ವಹಣೆ ಸಮರ್ಪಕವಾಗಿಲ್ಲ. ಘನತ್ಯಾಜ್ಯ ವಿಲೇವಾರಿ, ಅಂಗಡಿ ಕೋಣೆಗಳ ಬಾಡಿಗೆ, ನಳ್ಳಿ ನೀರಿನ ಬಿಲ್‌ ಪಾವತಿ, ಕ್ರಿಯಾಯೋಜನೆ, ಗ್ರಾ.ಪಂ. ನಡವಳಿಗಳು ಪಾರದರ್ಶಕವಾಗಿರದೆ ಅವ್ಯವಹಾರಗಳು ಕಂಡು ಬರುತ್ತಿದ್ದು, ಪರಿಶೀಲನೆ ನಡೆಸಬೇಕೆಂದು ಮನವಿ ಸಲ್ಲಿಸಿದರು. 

ಗ್ರಾಮಸ್ಥರ ಎರಡು ಮನೆ ತೆರಿಗೆ ರಶೀದಿಯ ಯಥಾಪ್ರತಿಯನ್ನು ತೆರಿಗೆ ಮೊತ್ತದ ವ್ಯತ್ಯಾಸವನ್ನು ಮಾರ್ಗದರ್ಶಿ ಅಧಿಕಾರಿಗಳ ಗಮನಕ್ಕೆ ತಂದು ಇನ್ನೆಷ್ಟು ರಶೀದಿಗಳಲ್ಲಿ ಮೊತ್ತದ ವ್ಯತ್ಯಾಸವಿದೆಯೋ ಎಂದು ಸಂದೇಹ ವ್ಯಕ್ತಪಡಿಸಿದರು. ಕಾಮಗಾರಿಗಳಿಗೆ ಆಡಳಿತ ಮಂಜೂರಾತಿಯಿಲ್ಲ. ಯಾವ ರಿಜಿಸ್ಟರ್‌ಗಳೂ ಪಾರದರ್ಶಕವಾಗಿ ಸರಿಯಿಲ್ಲ. ತೆರಿಗೆ ರಿಜಿಸ್ಟರ್‌, ಕುಡಿಯುವ ನೀರಿನ ಬಿಲ್‌, ಕಾಮಗಾರಿಗಳಿಗೆ ಕೊಟೇಶನ್‌ ಕರೆಯಲಿಲ್ಲ ಮೊದಲಾದ ಲೋಪದೋಷಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಉಜಿರೆ ಗ್ರಾ.ಪಂ. ಸದಸ್ಯರು, ಸಿಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಸ್ವಾಗತಿಸಿ, ವಂದಿಸಿದರು.

ಗೇಟಿಗೆ ಬೀಗ
ಅತ್ತಾಜೆಯ ಜನತಾ ಕಾಲನಿ ಕಾಮಗಾರಿ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳ ಪರಿಶೀಲನೆಗೆ ಹೋಗಬೇಕೆಂದು ಅಧಿಕಾರಿಗಳ ಹೇಳಿಕೆಯಂತೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋದಾಗ ಅಲ್ಲಿ ಗೇಟಿಗೆ ಬೀಗ ಹಾಕಿದ್ದು, ಬೀಗದ ಕೀ ಯಾರಲ್ಲಿದೆ ಎಂದೇ ತಿಳಿಯದೆ ಮರಳಿ ಬರಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next