Advertisement

ಕಬ್ಬಿಣದ ಅದಿರು ರಫ್ತು ನಿಷೇಧ ತೆರವು ಆದೇಶ: ಬಂದರಿಗೆ ಅದಿರು ಹರಿದು ಬರುವ ನಿರೀಕ್ಷೆ

01:33 AM May 26, 2022 | Team Udayavani |

ಮಂಗಳೂರು: ರಾಜ್ಯದ ಕಬ್ಬಿಣದ ಅದಿರನ್ನು ರಫ್ತು ಮಾಡುವುದಕ್ಕೆ ಇದ್ದ ನಿರ್ಬಂಧಗಳನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನವಮಂಗಳೂರು ಬಂದರಿಗೆ ಅದಿರು ಹರಿದು ಬರುವ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ.

Advertisement

ಇದೇ ವೇಳೆ ಕಬ್ಬಿಣದ ಅದಿರು ಖರೀದಿಗೆ ಈಗಿನ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಗ್ರಾಹಕರು ಸಿಗಬಹುದೇ ಎಂಬ ಸಂಶಯವೂ ಕಾಡತೊಡಗಿದೆ. ಮುಖ್ಯ ಆಮದುದಾರ ದೇಶವಾಗಿರುವ ಚೀನದೊಂದಿಗೆ ಸಂಬಂಧ ಹದಗೆಟ್ಟಿರುವುದು ಇದಕ್ಕೆ ಕಾರಣ.

ಹಿಂದೆ ಕಬ್ಬಿಣದ ಅದಿರನ್ನು ರಾಜ್ಯದ ನವಮಂಗಳೂರು ಬಂದರು, ಬೇಲೆಕೇರಿ ಮತ್ತು ಕಾರವಾರ – ಈ ಮೂರು ಬಂದರುಗಳಿಂದ ಚೀನ ಮತ್ತಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆಗ ಕರಾವಳಿಗೆ ಸಾವಿರಾರು ಕಬ್ಬಿಣದ ಅದಿರು ಸಾಗಾಟ ಟ್ರಕ್‌ಗಳು ಬಳ್ಳಾರಿ, ಹೊಸಪೇಟೆ ಕಡೆಯಿಂದ ಬರುತ್ತಿದ್ದವು.ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ರಾಜ್ಯ, ಕೇಂದ್ರ ಸರಕಾರಗಳು ಕಬ್ಬಿಣದ ಅದಿರುಗಣಿಗಾರಿಕೆಗೆ ನಿಷೇಧ ಹೇರಿದ್ದಷ್ಟೇ ಅಲ್ಲದೆ ಗಣಿಗಾರಿಕೆ ನಡೆಸಲಾಗಿದ್ದ ಅದಿರನ್ನೂ ರಫ್ತು ಮಾಡುವಂತಿಲ್ಲ ಎಂಬ ಆದೇಶಿಸಲಾಗಿತ್ತು

ಅದಿರು ನಿರ್ವಹಣೆ ಸವಾಲು
ಲಕ್ಷಗಟ್ಟಲೆ ಟನ್‌ ಅದಿರು ಇನ್ನೂ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿದ್ದು, ಸೂಕ್ತ ಮಾರುಕಟ್ಟೆ ಲಭ್ಯವಾದರೆ ರಫ್ತು ಆರಂಭವಾಗುವ ಸಾಧ್ಯತೆ ಇದೆ. ಅದಕ್ಕಾಗಿ ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಪ್ರಯತ್ನ ಕೈಗೊಳ್ಳಲಾಗುವುದು. ಬಳ್ಳಾರಿಯಿಂದ ರೈಲು ಮತ್ತು ರಸ್ತೆ ಮೂಲಕ ಸರಕು ಸ್ವೀಕರಿಸಬಹುದು. ಎನ್‌ಎಂಪಿಎಯಲ್ಲಿ ಬೃಹತ್‌ ಯಾರ್ಡ್‌ಗಳಿದ್ದು, ಅವುಗಳಲ್ಲಿ ಅದಿರು ಇಳಿಸಿ ಬಳಿಕ ರಫ್ತು ಮಾಡುವುದಕ್ಕೆ ಅವಕಾಶಗಳಿವೆ ಎನ್ನತ್ತಾರೆ ಅಧಿಕಾರಿಗಳು.

ಸುಪ್ರೀಂ ಕೋರ್ಟ್‌ ಆದೇಶದ ಸರಿಯಾದ ಅಧ್ಯಯನ ನಡೆದ ಬಳಿಕ ಬಂದರು ಪ್ರಾಧಿಕಾರದ ಆಡಳಿತ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಈಗಿನ ಮಾಹಿತಿಯ ಅನ್ವಯ ಎಲ್ಲ ಪ್ರಕ್ರಿಯೆ ಮುಗಿದು, ರಫ್ತು ಆರಂಭವಾಗಲು ಇನ್ನು ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು.

Advertisement

ಎನ್‌ಎಂಪಿಎ ತನ್ನ 14 ಮೀ. ಆಳದ ಡೀಪ್‌ ಡ್ರಾಫ್ಟ್‌ ಬರ್ತನ್ನು ಕಂಟೈನರ್‌ ನಿರ್ವಹಣೆಗಾಗಿ ಈಗಾಗಲೇ ಜೆಎಸ್‌ಡಬ್ಲ್ಯುಗೆ ಹಸ್ತಾಂತರಿಸಿದೆ. ಹಾಗಾಗಿ ಅದರಲ್ಲಿಇನ್ನು ದೊಡ್ಡ ಹಡಗು ನಿರ್ವಹಣೆ ಅಸಾಧ್ಯ. ಉಳಿದ ಬರ್ತ್‌ ಗಳು 9ರಿಂದ 10 ಮೀ. ಆಳವಷ್ಟೇ ಇದೆ. ಇದು ದೊಡ್ಡ ಹಡಗು ಬರುವುದಕ್ಕೆ ಅಡ್ಡಿಯಾಗಬಹುದು ಎನ್ನುತ್ತಾರೆ ಕೆಲವು ರಫ್ತುದಾರರು. ಈ ಅಂಶಗಳನ್ನು ಗಮನಿಸಿದರೆ ರಫ್ತುದಾರರು ಮಂಗಳೂರಿಗಿಂತ ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಬಂದರು ಕಡೆಗೆ ಹೋಗುವ ಸಾಧ್ಯತೆ ಅಧಿಕ. ಚೀನಕ್ಕೆ ರಫ್ತು ಮಾಡುವುದಾದರೂ ಇದು ಹೆಚ್ಚು ಸೂಕ್ತವಾಗುತ್ತದೆ. ಕಬ್ಬಿಣದ ಅದಿರು ಸಾಗಾಟವನ್ನು ತಡೆಯುವಲ್ಲಿ ಈ ಹಿಂದೆ ರಾಜ್ಯ ಸರಕಾರ ಆಸಕ್ತಿ ವಹಿಸಿತ್ತು. ಈಗ ಮತ್ತೆ ಆರಂಭಿಸುವುದಕ್ಕೆ ಆಸಕ್ತಿ ತೋರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಬಂದರಿನಲ್ಲಿದೆ ಅದಿರು
2012ರ ವೇಳೆ ಅದಿರು ನಿಷೇಧವಾದಾಗ ಬಂದರಿನಲ್ಲಿದ್ದ ಕೆಲವು ಟನ್‌ ಕಬ್ಬಿಣದ ಅದಿರು ಹಾಗೆಯೇ ಇದೆ. ಈಗ ಬಳಕೆಗೆ ಯೋಗ್ಯವಾಗಿರಲಾರದು ಎನ್ನುತ್ತಾರೆ ಅಧಿಕಾರಿಗಳು.

ಸುಪ್ರೀಂ ಕೋರ್ಟ್‌ ಆದೇಶ ಈಗಷ್ಟೇ ಹೊರಬಿದ್ದಿದೆ. ಅದನ್ನು ಅಧ್ಯಯನ ಮಾಡುತ್ತೇವೆ. ಜತೆಗೆ ನಮ್ಮ ತಂಡದವರು ಎನ್‌ಎಂಪಿಎ ಇದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುವುದನ್ನು ಪರಿಶೀಲಿಸಲಿದ್ದೇವೆ. ಸ್ವಲ್ಪ ಕಾಲಾವಕಾಶ ಬೇಕಾಗಬಹುದು.
– ಕೆ.ಜಿ. ನಾಥ್‌, ನವಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷ

-ವೇಣು ವಿನೋದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next