Advertisement

ಸಾವೇ ಇಲ್ಲದ ಕಬ್ಬಿಣದ ಮನುಷ್ಯರು

06:00 AM Oct 04, 2018 | |

ಒಂದು ದೇಶದಲ್ಲಿ ಒಬ್ಬ ರಾಜನಿದ್ದ. ಹಿತ್ತಾಳೆ ಕಿವಿಯ ಮನುಷ್ಯ. ಯಾರಾದರೂ ಏನಾದರೂ ಸುಳ್ಳು ಹೇಳಿದರೂ ನಿಜವೆಂದು ನಂಬುವ ವಿಚಿತ್ರ ಬುದ್ಧಿ ಅವನದು. ಇದರಿಂದಾಗಿ ಅನೇಕರಿಗೆ ತೊಂದರೆಯಾಗುತ್ತಿದ್ದರೂ ತನ್ನನ್ನು ತಿದ್ದಿಕೊಳ್ಳಲು ಅವನು ಪ್ರಯತ್ನಿಸಿದವನಲ್ಲ. ಅದೇ ರಾಜ್ಯದಲ್ಲಿ ಒಬ್ಬ ಕಮ್ಮಾರನಿದ್ದ. ಕಬ್ಬಿಣದಲ್ಲಿ ಅವನು ಹಲವಾರು ಉಪಕರಣಗಳನ್ನು ತಯಾರಿಸುತ್ತಿದ್ದ. ಅರಮನೆಯ ಶಸ್ತ್ರಾಗಾರಕ್ಕೆ ಬೇಕಿದ್ದ ಆಯುಧಗಳನ್ನೂ ಅವನು ತಯಾರಿಸುತ್ತಿದ್ದ. ಈ ಕಲೆಯಲ್ಲಿ ಅವನನ್ನು ಮೀರಿಸುವ ಕುಶಲ ಕೆಲಸಗಾರ ಇನ್ನೊಬ್ಬ ಆ ರಾಜ್ಯದಲ್ಲೇ ಇರಲಿಲ್ಲ. 

Advertisement

ಅರಮನೆಯ ಶಸ್ತ್ರಾಗಾರದ ಕಾವಲುಗಾರ ಕಮ್ಮಾರನಿಂದ ಆಯುಧಗಳನ್ನು ಮಾಡಿಸಿಕೊಂಡು ದುಡ್ಡು ಕೊಡದೇ ಹೋಗಿಬಿಡುತ್ತಿದ್ದ. ಅರಮನೆಯಿಂದ ಆಯುಧ ಮಾಡಿಸಲು ನೀಡುತ್ತಿದ್ದ ಹಣವನ್ನು ತನ್ನಲ್ಲೇ ಇಟ್ಟುಕೊಳ್ಳುತ್ತಿದ್ದ. ಈ ವಿಷಯಕ್ಕೆ ಕಮ್ಮಾರನಿಗೆ ಅವನ ಮೇಲೆ ಅಸಮಾಧಾನವಿತ್ತು. ಒಂದು ದಿನ ಬಾಯಿ ಬಿಟ್ಟು ಕಮ್ಮಾರ ಕೇಳಿಯೇಬಿಟ್ಟ, “ಏನಣ್ಣ? ಇಷ್ಟು ಕಾಲದಿಂದ ಅರಮನೆಗೆ ಬೇಕಾಗುವ ಆಯುಧಗಳನ್ನು ತಯಾರಿಸಿ ಕೊಟ್ಟಿದ್ದೇನೆ. ಆದರೆ ನನಗೆ ಏನನ್ನೂ ಕೊಟ್ಟಿಲ್ಲ. ಹೀಗೆ ಮಾಡಿದರೆ ನಾನು ಬದುಕುವುದು ಹೇಗೆ?’ ಎಂದು ಕೇಳಿದ. ಕಾವಲುಗಾರ ಏನೂ ಉತ್ತರಿಸದೆ ಹೋಗಿಬಿಟ್ಟ. ಅವನ ತಲೆಯಲ್ಲಿ ಕೆಟ್ಟ ವಿಚಾರ ಸುಳಿದಿತ್ತು, ತನ್ನ ಬಳಿಯೇ ದುಡ್ಡು ಕೇಳುವಷ್ಟು ಸೊಕ್ಕು ಬಂತೇ ಕಮ್ಮಾರನಿಗೆ ಎಂದು ಮನಸ್ಸಿನಲ್ಲೇ ಶಪಿಸಿಕೊಂಡು ರಾಜನ ಬಳಿಗೆ ಬಂದ. 

“ದೊರೆಗಳೇ, ಒಂದು ಗುಟ್ಟಿನ ವಿಷಯ. ನಮಗೆ ಆಯುಧಗಳನ್ನು ತಯಾರಿಸಿ ಕೊಡುವ ಕಮ್ಮಾರ ಎಂಥ ಬುದ್ಧಿವಂತ ಅಂದರೆ ಕಬ್ಬಿಣದಿಂದ ಜೀವಂತ ಮನುಷ್ಯರನ್ನೂ ತಯಾರಿಸಬಲ್ಲ. ಆ ಕಬ್ಬಿಣದ ಮನುಷ್ಯರಿಗೆ ಊಟ ಬೇಡ, ಸಂಬಳ ಬೇಡ. ಅವರಿಗೆ ಸಾವು ಬರುವುದಿಲ್ಲ. ಅವರನ್ನು ನಮ್ಮ ಸೈನ್ಯದಲ್ಲಿ ಸೇರಿಸಿಕೊಂಡರೆ ನಮ್ಮನ್ನು ಸೋಲಿಸುವವರು ಜಗತ್ತಿನಲ್ಲೇ ಯಾರೂ ಇರುವುದಿಲ್ಲ’. ಎಂದು ಕಿವಿಯೂದಿದ.

ರಾಜ ಕಮ್ಮಾರನನ್ನು ಕರೆಸಿಕೊಂಡು ಇನ್ನೊಂದು ತಿಂಗಳಲ್ಲಿ ನೂರು ಕಬ್ಬಿಣದ ಮನುಷ್ಯರನ್ನು ತಯಾರಿಸಲು ಕಟ್ಟಾಜ್ಞೆ ಹೊರಡಿಸಿದ. ಕಮ್ಮಾರ ತಲೆಗೆ ಕೈಹೊತ್ತು ಮನೆಗೆ ಬಂದ. ಊಟ ಸೇರಲಿಲ್ಲ, ನಿದ್ರೆ ಬರಲಿಲ್ಲ. ಕಬ್ಬಿಣದಿಂದ ಜೀವಂತ ಮನುಷ್ಯನ ಸೃಷ್ಟಿ ಸಾಧ್ಯವಿಲ್ಲ. ಮಾಡಿಕೊಡದಿದ್ದರೆ ರಾಜ ಶಿಕ್ಷೆ ವಿಧಿಸುತ್ತಾನೆ ಎಂದು ಚಿಂತಿತನಾದ. ಕಮ್ಮಾರನಿಗೆ ಒಬ್ಬಳು ಮಗಳಿದ್ದಳು. ಅವಳು ಬಹಳ ಜಾಣೆ. ತಂದೆಯ ಚಿಂತೆಗೆ ಅವಳೇ ಒಂದು ಉಪಾಯ ಹೇಳಿಕೊಟ್ಟಳು.

ಒಂದು ತಿಂಗಳ ನಂತರ ಕಮ್ಮಾರ ರಾಜನ ಬಳಿಗೆ ಹೋದ. ಅವನು ಬರಿಗೈಯಲ್ಲಿ ಬಂದಿದ್ದು ಕಂಡು “ಕಬ್ಬಿಣದ ಮನುಷ್ಯರು ಎಲ್ಲಿ?’ ಎಂದು ಕೆಂಡಾಮಂಡಲಾದ ರಾಜ ಕೇಳಿದ. “ದೊರೆಯೇ, ಅದರ ತಯಾರಿಕೆಗೆ ಎಲ್ಲ ಸಿದ್ಧವಾಗಿದೆ. ಆದರೆ ಎರಡು ಮುಖ್ಯ ವಸ್ತುಗಳು ಬೇಕಾಗಿವೆ. ಅದನ್ನು ಒದಗಿಸಲು ನಿಮ್ಮ ಶಸ್ತ್ರಾಗಾರದ ಕಾವಲುಗಾರನಿಗೆ ಮಾತ್ರವೇ ಸಾಧ್ಯ’ ಎಂದ ಕಮ್ಮಾರ. “ಅಷ್ಟೇ ತಾನೇ, ಆ ವಸ್ತುಗಳು ಯಾವುವು?’ ರಾಜ ಕೇಳಿದ.

Advertisement

“ನೂರು ಕೊಡ ಮನುಷ್ಯರ ಕಣ್ಣೀರು ಮತ್ತು ನೂರು ಮೂಟೆ ಮನುಷ್ಯರ ತಲೆಗೂದಲುಗಳಿಂದ ತಯಾರಿಸಿದ ಇದ್ದಿಲು ಬೇಕು’ ಎಂದು ಕಮ್ಮಾರ ತನ್ನ ಬೇಡಿಕೆ ಮುಂದಿಟ್ಟ. ರಾಜ ಕಾವಲುಗಾರನನ್ನು ಕರೆಸಿ, ಕಮ್ಮಾರನು ಬೇಡಿದ ವಸ್ತುಗಳನ್ನು ತಂದುಕೊಡಲು ಕಟ್ಟಾಜ್ಞೆ ಮಾಡಿದ. ಕಾವಲುಗಾರ ಹೌಹಾರಿದ. ತನ್ನ ತಂತ್ರ ತನಗೇ ತಿರುಗಿ ಬೀಳುತ್ತದೆಂದು ಅವನೆಣಿಸಿರಲಿಲ್ಲ. “ಈಗ ತಂದುಕೊಡುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಟ. ಮುಖಕ್ಕೆ ಬಟ್ಟೆ ಮುಸುಕು ಹಾಕಿಕೊಂಡು ರಾತ್ರಿ ಕಳೆಯುವಷ್ಟರಲ್ಲಿ ರಾಜ್ಯವನ್ನೇ ತೊರೆದು ಓಡಿಹೋಗಿಬಿಟ್ಟ. “ನಿನ್ನ ಜಾಣ್ಮೆ ನನ್ನ ಜೀವ ಉಳಿಸಿತು ಮಗಳೇ’ ಎಂದು ಕಮ್ಮಾರ ನಿಟ್ಟುಸಿರಿಟ್ಟ. 

-ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next