Advertisement

ನನ್ನ ದೇಹ, ನನ್ನ ಹಕ್ಕು : ಏನಿದು ವಿವಾದ?

10:45 PM May 05, 2022 | Team Udayavani |

“ಗರ್ಭಪಾತ’ ಎಂಬ ಪದ ಕೇಳಿದರೆ ಮೊದಲಿಗೆ ನೆನಪಿಗೆ ಬರುವುದೇ ಐರ್ಲೆಂಡ್‌ನಲ್ಲಿ ಸಾವಿಗೀಡಾದ ಸವಿತಾ ಹಾಲಪ್ಪನವರ್‌ ಹೆಸರು. 2012ರ ಅಕ್ಟೋಬರ್‌ 28ರಂದು, ಗರ್ಭಪಾತಕ್ಕೆ ಅವಕಾಶ ಸಿಗದ ಕಾರಣದಿಂದಾಗಿ ಐರ್ಲೆಂಡ್‌ನಲ್ಲಿ ಮೃತಪಟ್ಟ ಕರ್ನಾಟಕದ ದಂತವೈದ್ಯೆ. ಆಗ ಇಡೀ ಜಗತ್ತಿನಾದ್ಯಂತ ದೊಡ್ಡ ಹೋರಾಟವೇ ನಡೆದಿತ್ತು. ಇಂದಿಗೂ ಗರ್ಭಪಾತಕ್ಕೆ ಜಗತ್ತಿನ ಹಲವಾರು ದೇಶಗಳಲ್ಲಿ ಅವಕಾಶವೇ ಇಲ್ಲ. ಈಗ ಅಮೆರಿಕದಲ್ಲೂ ಗರ್ಭಪಾತಕ್ಕೆ ಅವಕಾಶ ನೀಡದಿರುವ ಕಾನೂನು ಬರುವ ಸಾಧ್ಯತೆಗಳಿವೆ. ಈಗ ಅಲ್ಲಿ ನನ್ನ ದೇಹ ನನ್ನ ಹಕ್ಕು ಎಂಬ ಧ್ಯೇಯ ವಾಕ್ಯದೊಂದಿಗೆ ದೊಡ್ಡ ಹೋರಾಟವೇ ನಡೆಯುತ್ತಿದೆ.

Advertisement

ಏನಿದು ವಿವಾದ?

ಗರ್ಭಪಾತ ಕುರಿತಂತೆ ಅಮೆರಿಕದ ಸುಪ್ರೀಂಕೋರ್ಟ್‌ನ ಕರಡು ತೀರ್ಪೋಡು ಇದೇ ಜನವರಿಯಲ್ಲಿ ಸೋರಿಕೆಯಾಗಿದ್ದು, ಇದರಲ್ಲಿ 50 ವರ್ಷಗಳಷ್ಟು ಹಳೆಯದಾದ ಗರ್ಭಪಾತಕ್ಕೆ ಅವಕಾಶ ನೀಡುವ ಕಾನೂನನ್ನು ತೆಗೆಯುವ ಪ್ರಸ್ತಾಪ ಮಾಡಲಾಗಿದೆ. ಇದು ಅಮೆರಿಕದ ಮಹಿಳೆಯರನ್ನು ಕೆರಳಿಸಿದೆ. 1973ರಲ್ಲಿ ರಾಯ್‌ ವರ್ಸಸ್‌ ವೇಡ್‌ ಎಂಬ ಪ್ರಕರಣದಲ್ಲಿ ಗರ್ಭಪಾತಕ್ಕೆ ಕಾನೂನಿನ ಮನ್ನಣೆ ನೀಡಲಾಗಿತ್ತು. ಈಗ ಗರ್ಭಪಾತಕ್ಕೆ ಇರುವ ಕಾನೂನಿನ ಮಾನ್ಯತೆಯನ್ನು ತೆಗೆಯಲು ಸುಪ್ರೀಂಕೋರ್ಟ್‌ ಮುಂದಾಗಿದೆ ಎಂಬ ಸುದ್ದಿ ಹಬ್ಬಿದೆ. ಇದೇ ಅಮೆರಿಕದ ಲಕ್ಷ ಲಕ್ಷ ಮಹಿಳೆಯರ ಪ್ರತಿಭಟನೆಗೆ ಕಾರಣವಾಗಿದೆ.

47 ಸಾವಿರ ಮಂದಿ ಸಾವು

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳ ಪ್ರಕಾರ, ಜಗತ್ತಿನಲ್ಲಿ ಪ್ರತಿ ವರ್ಷ ಅಸುರಕ್ಷಿತ ಗರ್ಭಪಾತದಿಂದಾಗಿ 47 ಸಾವಿರ ಮಂದಿ ಸಾಯುತ್ತಿದ್ದಾರೆ. ಹಾಗೆಯೇ ಗರ್ಭಪಾತದ ವೇಳೆ ಉಂಟಾದ ಬ್ಲೀಡಿಂಗ್‌ ಮತ್ತು ಇನೆ#ಕ್ಷನ್‌ನಿಂದ ಲಕ್ಷಾಂತರ ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಗರ್ಭಪಾತಕ್ಕೆ ಕಾನೂನು ಮಾನ್ಯತೆ ನೀಡುವುದು ಇದೂ ಒಂದು ಕಾರಣ ಎಂಬುದು ಕೆಲವು ರಾಷ್ಟ್ರಗಳ ಅಂಬೋಣ. ಆದರೆ ಇದೇ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರವೇ, ಗರ್ಭಪಾತವನ್ನು ನಿಷೇಧ ಮಾಡಿದರೂ, ಗರ್ಭಪಾತದ ಸಂಖ್ಯೆ ಕಡಿಮೆಯಾಗಿಲ್ಲ.

Advertisement

ಎಲ್ಲಿ ಅವಕಾಶ, ಎಲ್ಲಿ ಇಲ್ಲ?

ಲ್ಯಾಟಿನ್‌ ಅಮೆರಿಕ: ಎಲ್‌ ಸೆಲ್ವಿಡಾರ್‌, ನಿಕಾರ್ಗುವಾ ಮತ್ತು ಹೊಂಡುರಾಸ್‌ನಲ್ಲಿ ಎಂಥದ್ದೇ ಸ್ಥಿತಿಯಲ್ಲಿಯೂ ಗರ್ಭಪಾತಕ್ಕೆ ಅವಕಾಶವಿಲ್ಲ. ಬ್ರೆಜಿಲ್‌ನಲ್ಲಿ ಅತ್ಯಾಚಾರಕ್ಕೆ ಒಳಗಾದವರು, ಭ್ರೂಣಕ್ಕೆ ಏನಾದರೂ ಹಾನಿಯಾಗಿದ್ದರೆ ಮತ್ತು ಮಹಿಳೆಯ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕೊಲಂಬಿಯಾ ಮತ್ತು ಚಿಲಿಯಲ್ಲಿ ಗರ್ಭಪಾತಕ್ಕೆ ಅವಕಾಶವಿದೆ.  ಅರ್ಜೆಂಟೀನಾದಲ್ಲಿ ಮೊದಲ 14 ವಾರಗಳವರೆಗೆ ಒಪ್ಪಿಗೆ ಪಡೆದು ಗರ್ಭಪಾತ ಮಾಡಿಸಿಕೊಳ್ಳಬಹುದು. ಉರುಗ್ವೆಯಲ್ಲಿಯೂ ಇಂಥದ್ದೇ ಕಾನೂನು ಜಾರಿಯಲ್ಲಿದೆ.

ಆಫ್ರಿಕಾ: ಈಜಿಪ್ಟ್, ಕಾಂಗೋ ಮತ್ತು ಸೆನೆಗಲ್‌ನಲ್ಲಿ ಗರ್ಭಪಾತ ಸಂಪೂರ್ಣ ಅಪರಾಧ. ಬೆನಿನ್‌ ಎಂಬ ದೇಶದಲ್ಲಿ ಗರ್ಭಪಾತಕ್ಕೆ ಅವಕಾಶಗಳಿವೆ.

ಯೂರೋಪ್‌: ಮೂರು ದೇಶಗಳನ್ನು ಹೊರತುಪಡಿಸಿ, ಐರೋಪ್ಯ ಒಕ್ಕೂಟದ ಎಲ್ಲ ದೇಶಗಳಲ್ಲಿಯೂ ಗರ್ಭಪಾತಕ್ಕೆ ಕಾನೂನಿನ ಮಾನ್ಯತೆ ಇದೆ. ಅಂಡೋರಾ, ಮೆಲ್ಟಾ ಮತ್ತು ವ್ಯಾಟಿಕನ್‌ ಸಿಟಿಯಲ್ಲಿ ಮಾತ್ರ ಗರ್ಭಪಾತ ನಿಷಿದ್ಧ. ಆದರೂ ಪೊಲೆಂಡ್‌ನಲ್ಲಿ ಗರ್ಭಪಾತ ಸಂಬಂಧ ಕಠಿನ ಕಾನೂನುಗಳಿವೆ. ಆದರೂ ಇಲ್ಲಿ ಅತ್ಯಾಚಾರ ಮತ್ತು ಮಹಿಳೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದಾಗ ಮಾತ್ರ ಗರ್ಭಪಾತ ಮಾಡಿಸಿಕೊಳ್ಳಬಹುದು.

ಏಷ್ಯಾ: ಲಾವೋಸ್‌ ಮತ್ತು ಫಿಲಿಪ್ಪಿನ್ಸ್‌ನಲ್ಲಿ ಗರ್ಭಪಾತ ಕಾನೂನುಬಾಹಿರ. ಪಾಕಿಸ್ಥಾನದಲ್ಲಿಯೂ ಮಹಿಳೆಯ ಆರೋಗ್ಯ ನೋಡಿಕೊಂಡು ಗರ್ಭಪಾತದ ಬಗ್ಗೆ ತೀರ್ಮಾನಿಸಬಹುದು.

ಉಳಿದಂತೆ ರಷ್ಯಾ, ಆಸ್ಟ್ರೇಲಿಯಾ, ಚೀನ, ಕೆನಡಾ ಸೇರಿದಂತೆ ಬಹುತೇಕ ದೇಶಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ.

ಗರ್ಭಪಾತಕ್ಕೆ ಅವಕಾಶ ನೀಡಲು ಕಾರಣಗಳು

ಕೋರಿಕೆ ಮೇರೆಗೆ – ಯಾವುದೇ ಕಾರಣವಾದರೂ ಆಗಬಹುದು, ಆದರೆ ಗರ್ಭಪಾತಕ್ಕೆ ಕೆಲವೊಂದು ಮಿತಿಗಳುಂಟು.

ಜೀವ ಉಳಿಸುವ ಸಲುವಾಗಿ – ಮಹಿಳೆಯ ಜೀವಕ್ಕೆ ಅಪಾಯವಾಗುತ್ತದೆ ಎಂಬ ಕಾರಣದಿಂದಾಗಿ.

ದೈಹಿಕ ಆರೋಗ್ಯ – ಗರ್ಭ ಧರಿಸಿದ ಕಾರಣದಿಂದಾಗಿ ಮಹಿಳೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದಾಗಿ.

ಮಾನಸಿಕ ಆರೋಗ್ಯ – ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂದರ್ಭದಲ್ಲಿ.

ಅತ್ಯಾಚಾರ – ಅತ್ಯಾಚಾರಕ್ಕೀಡಾದ ಮಹಿ ಳೆಗೆ ಗರ್ಭಪಾತಕ್ಕೆ ಅವಕಾಶ ನೀಡುವುದು.

ಸಾಮಾಜಿಕ ಆರ್ಥಿಕತೆ – ಗರ್ಭ ಧರಿಸಿದ ಮಹಿಳೆಯ ಆರ್ಥಿಕ ಶಕ್ತಿ ಕುಂಠಿತವಾಗಿದ್ದಲ್ಲಿ.

ಭಾರತದಲ್ಲಿ ಗರ್ಭಪಾತ ಕಾನೂನು

1971ಕ್ಕಿಂತ ಮುನ್ನ ಭಾರತದಲ್ಲಿ ಗರ್ಭಪಾತಕ್ಕೆ ಅವಕಾಶವಿರಲಿಲ್ಲ. ಒಂದೊಮ್ಮೆ ಅಸುರಕ್ಷಿತ ಗರ್ಭಪಾತ ಮಾಡಿದಲ್ಲಿ ಅತ್ಯಂತ ಕಠಿನ ಶಿಕ್ಷೆಗೆ ಗುರಿಯಾಗಬೇಕಿತ್ತು. ಆದರೆ ಮಹಿಳೆಯನ್ನು ಉಳಿಸುವ ಸಲುವಾಗಿ ಗರ್ಭಪಾತ ಮಾಡಿದರೆ, ಯಾವುದೇ ಶಿಕ್ಷೆ ಇರಲಿಲ್ಲ. 1971ರಲ್ಲೇ ಭಾರತದಲ್ಲಿ ಕಾನೂನುಬದ್ಧ ಗರ್ಭಪಾತಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನಿಯಮ ರೂಪಿಸಲಾಯಿತು. ಇದರಂತೆ ಮಹಿಳೆಯರ ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಗರ್ಭಪಾತ ಮಾಡಿಸಬಹುದಿತ್ತು. 2003ರಲ್ಲಿ ಒಂದಷ್ಟು ತಿದ್ದುಪಡಿ ಮಾಡಿ, ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಸೇವೆಯನ್ನು ಸೇರಿಸಲಾಯಿತು. 2021ರಲ್ಲಿ ಮತ್ತಷ್ಟು ಬದಲಾವಣೆ ಮಾಡಿ, ಸುರಕ್ಷಿತ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಲಾಯಿತು. ಆದರೆ ಮಹಿಳೆಯ ಆರೋಗ್ಯದ ಹಿತದೃಷ್ಟಿಯಿಂದ ಕೆಲವೊಂದು ನಿಯಮ ರೂಪಿಸಲಾಗಿದೆ. ಅಂದರೆ ಗರ್ಭಧರಿಸಿದ ಬಳಿಕ 20 ವಾರಗಳ ವರೆಗೆ ಮಾತ್ರ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ 24 ವಾರದ ವರೆಗೆ ಗರ್ಭಪಾತಕ್ಕೆ ಅವಕಾಶವಿದೆ.

ಅಲ್ಲದೆ ಈ ಗರ್ಭಪಾತಗಳಿಗೆ ಸರಕಾರವೇ ಹಣ ನೀಡುತ್ತದೆ. ಅಲ್ಲದೆ ಗರ್ಭಪಾತಕ್ಕೆ ಆ ಮಹಿಳೆಯ ಸಂಪೂರ್ಣ ಒಪ್ಪಿಗೆ ಇರಬೇಕು, ಒಂದು ವೇಳೆ ಗರ್ಭಧರಿಸಿದವರು 18 ವರ್ಷಕ್ಕಿಂತ ಚಿಕ್ಕವರಾಗಿದ್ದರೆ, ಆಕೆಯ ಪೋಷಕರು ಒಪ್ಪಿಗೆ ನೀಡಬೇಕು. ಮೊದಲಿಗೆ ಕೇವಲ ವಿವಾಹವಾದವರು ಮಾತ್ರ ಗರ್ಭಪಾತ ಮಾಡಿಸಿಕೊಳ್ಳಲು ಅರ್ಹರು ಎಂಬ ನಿಯಮವಿತ್ತು. 2021ರಲ್ಲಿ ಇದನ್ನು ಬದಲಿಸಿ ಎಲ್ಲ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಬಹುದು ಎಂಬುದನ್ನು ಸೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next