Advertisement

Iraq; ಹುಡುಗಿಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 9ಕ್ಕೆ ಇಳಿಸಲು ಇರಾಕ್‌ ಕಾನೂನು!

03:52 PM Aug 09, 2024 | Team Udayavani |

ಬಾಗ್ದಾದ್:‌ ಇರಾಕ್ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿರುವ ಮಸೂದೆಯೊಂದು ವ್ಯಾಪಕ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಹೆಣ್ಣುಮಕ್ಕಳ ವಿವಾಹದ ಕಾನೂನುಬದ್ಧ ವಯಸ್ಸನ್ನು ಕೇವಲ 9 ವರ್ಷಕ್ಕೆ ಇಳಿಸಲು ಪ್ರಸ್ತಾಪಿಸಿರುವ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

ಇರಾಕ್ (Iraq) ನ್ಯಾಯ ಸಚಿವಾಲಯವು ಪರಿಚಯಿಸಿದ ವಿವಾದಾತ್ಮಕ ಮಸೂದೆಯು ದೇಶದ ವೈಯಕ್ತಿಕ ಸ್ಥಿತಿಯ ಕಾನೂನನ್ನು ( Personal Status Law) ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಪ್ರಸ್ತುತ ಇರಾಕ್‌ ನಲ್ಲಿ ಮದುವೆಗೆ ಕನಿಷ್ಠ ವಯಸ್ಸನ್ನು 18 ಕ್ಕೆ ನಿಗದಿಪಡಿಸಲಾಗಿದೆ.

ಕೌಟುಂಬಿಕ ವ್ಯವಹಾರಗಳನ್ನು ನಿರ್ಧರಿಸಲು ಧಾರ್ಮಿಕ ಅಧಿಕಾರಿಗಳು ಅಥವಾ ನಾಗರಿಕ ನ್ಯಾಯಾಂಗದ ನಡುವೆ ಆಯ್ಕೆ ಮಾಡಲು ಈ ಮಸೂದೆಯು ನಾಗರಿಕರಿಗೆ ಅವಕಾಶ ನೀಡುತ್ತದೆ. ಇದು ಉತ್ತರಾಧಿಕಾರ, ವಿಚ್ಛೇದನ ಮತ್ತು ಮಕ್ಕಳ ಪಾಲನೆಯ ವಿಷಯಗಳಲ್ಲಿ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಹಲವರು ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಈ ಮಸೂದೆ ಅಂಗೀಕಾರವಾದರೆ ಇದು ಹುಡುಗಿರ ಮದುವೆಯ ಕನಿಷ್ಠ ವಯಸ್ಸು 9 ಮತ್ತು ಹುಡುಗರಿಗೆ 15 ವರ್ಷಕ್ಕೆ ನಿಗದಿ ಮಾಡುತ್ತದೆ. ಬಾಲ್ಯ ವಿವಾಹ ಮತ್ತು ಶೋಷಣೆಗೆ ಇದು ದಾರಿ ಮಾಡುತ್ತದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮಹಿಳಾ ಹಕ್ಕು ಮತ್ತು ಲಿಂಗ ಸಮಾನತೆಗಾಗಿ ದಶಕಗಳ ಕಾಲ ನಡೆದ ಹೋರಾಟವನ್ನು ಈ ಮಸೂದೆ ಹಿಂದಕ್ಕೆ ತಳ್ಳುತ್ತದೆ ಎಂದು ವಿಮರ್ಶಕರು ಟೀಕಿಸಿದ್ದಾರೆ.

Advertisement

ಮಾನವ ಹಕ್ಕು ಸಂಘಟನೆಗಳು, ಮಹಿಳಾ ಗುಂಪುಗಳು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಈ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಹುಡುಗಿಯರ ಶಿಕ್ಷಣ, ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಬಾಲ್ಯ ವಿವಾಹದ ಕಾರಣದಿಂದ ಶಾಲೆ ತ್ಯಜಿಸುವಿಕೆಯ ಸಂಖ್ಯೆ, ಎಳೆ ವಯಸ್ಸಿನ ಗರ್ಭಧಾರಣೆ ಮತ್ತು ಕೌಟುಂಬಿಕ ಹಿಂಸೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಯುನಿಸೆಫ್‌, ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆಯ ಪ್ರಕಾರ ಇರಾಕ್‌ ನಲ್ಲಿ 18 ವರ್ಷಕ್ಕಿಂತ ಮೊದಲು ಹೆಣ್ಣು ಮಕ್ಕಳಿಗೆ ವಿವಾಹ ಮಾಡುವಂತಿಲ್ಲ ಎಂಬ ಕಾನೂನಿದ್ದರೂ ಸುಮಾರು 28 ಶೇಕಡಾ ಹುಡುಗಿಯರಿಗೆ 18 ವರ್ಷ ತುಂಬುವ ಮೊದಲೇ ಮದುವೆ ಮಾಡಲಾಗುತ್ತಿದೆ.

ಈ ಮಸೂದೆಯನ್ನು ಅಂಗೀಕಾರ ಮಾಡುವುದರಿಂದ ದೇಶವು ಹಿಮ್ಮುಖ ಚಲಿಸುತ್ತಿದೆ ಎಂದು ತೋರಿಸುತ್ತದೆ ಎಂದು ಮಾನವ ಹಕ್ಕುಗಳ ಸಂಶೋಧಕ ಸಾರಾ ಸಬಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next