ಟೆಹ್ರಾನ್:ಇರಾನ್ ಪ್ರಮುಖ ಪರಮಾಣು ವಿಜ್ಞಾನಿಯೊಬ್ಬರನ್ನು ಶುಕ್ರವಾರ(ನವೆಂಬರ್ 27, 2020) ಟೆಹ್ರಾನ್ ನ ಹೊರವಲಯದಲ್ಲಿ ಹತ್ಯೆಗೈದಿರುವ ಘಟನೆ ನಡೆದಿದೆ. ವಿಜ್ಞಾನಿ ಹತ್ಯೆಯ ಹಿಂದೆ ಇಸ್ರೇಲ್ ಕೈವಾಡ ಇದ್ದಿರುವುದಾಗಿ ಇರಾನ್ ಆರೋಪಿಸಿದೆ.
ಶಸ್ತ್ರಧಾರಿ ಗುಂಪೊಂದು ವಿಜ್ಞಾನಿ ಮೋಹ್ಸೆನ್ ಫಖ್ರಿಝಾಡೆಹ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮೋಹ್ಸೆನ್ ಅವರ ರಕ್ಷಣಾ ಸಿಬ್ಬಂದಿಗಳು ಪ್ರತಿದಾಳಿ ನಡೆಸಿದ್ದರು ಕೂಡಾ ಮೋಹ್ಸೆನ್ ಗಂಭೀರವಾಗಿ ಗಾಯಗೊಂಡಿರುವುದಾಗಿ ಇರಾನ್ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಫಕ್ರಿಝಾಡೆಹ್ ಅವರು ಸಂಶೋಧನಾ ಮತ್ತು ಆವಿಷ್ಕಾರ ಸಚಿವಾಲಯದ ಮುಖ್ಯಸ್ಥರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿಜ್ಞಾನಿ ಮೋಹ್ಸೆನ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವುದಾಗಿ ವರದಿ ವಿವರಿಸಿದೆ.
ಒಮ್ಮೆ ವಿಜ್ಞಾನಿ ಫಖ್ರಿಝಾಡೆಹ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಅವರನ್ನು “ಇರಾನ್ ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಪಿತಾಮಹ” ಎಂದು ಬಣ್ಣಿಸಿದ್ದರು. ಫಖ್ರಿಝಾಡೆಹ್ ಕಾರಿನಲ್ಲಿ ಟೆಹ್ರಾನ್ ಪ್ರಾಂತ್ಯದ ಪೂರ್ವ ದಾಮಾವಂದ್ ಕೌಂಟಿ ಸಮೀಪದ ಅಬ್ಸಾರ್ಡ್ ನಗರದತ್ತ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ:ಮದುವೆ ಮಾಡಿಕೊಳ್ಳುವುದಾಗಿ ಹೇಳಿದಾತ ಲಕ್ಷಾಂತರ ರೂ. ಲೂಟಿ ಮಾಡಿ ಪರಾರಿ ಆದ.!
“ನಮ್ಮ ದೇಶದ ಪ್ರಮುಖ ಪರಮಾಣು ವಿಜ್ಞಾನಿಯನ್ನು ಹತ್ಯೆಗೈಯಲಾಗಿದ್ದು, ಇಸ್ರೇಲ್ ಅವರ ಬಗ್ಗೆ ದೀರ್ಘಕಾಲದ ಹಗೆತನ ಇಟ್ಟುಕೊಂಡಿತ್ತು” ಎಂದು ಇರಾನ್ ಟೆಲಿವಿಷನ್ ವರದಿ ಮಾಡಿದೆ.