ಟೆಹರಾನ್ : ಜೋರ್ಡಾನ್ ಫುಟ್‌ಬಾಲ್ ಅಸೋಸಿಯೇಷನ್, ಇರಾನಿನ ಮಹಿಳಾ ಫುಟ್‌ಬಾಲ್ ತಂಡದ ಗೋಲ್ ಕೀಪರ್ ಜೊಹ್ರೆಹ್ ಕೌಡೈ ಅವರ ಲಿಂಗ ತನಿಖೆ ಮಾಡುವಂತೆ ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಶನ್ ಗೆ ವಿನಂತಿಸಿರುವುದು ಕ್ರೀಡಾ ಲೋಕದಲ್ಲಿ ಹೊಸ ವಿವಾದ ಸ್ರಷ್ಟಿಸಿದೆ.
ಡೈಲಿ ಮೇಲ್ ವರದಿಯ ಪ್ರಕಾರ, ಕೌಡೈ ಗುರುವಾರ ಈ ಬಗ್ಗೆ ಕಿಡಿ ಕಾರಿದ್ದು, ಜೋರ್ಡಾನ್ ಫುಟ್‌ಬಾಲ್ ಅಸೋಸಿಯೇಷನ್‌ಗೆ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
‘ನಾನು ಮಹಿಳೆ’ ಎಂದ ಕೌಡೈ, ಇದು ಜೋರ್ಡಾನ್‌ನಿಂದ ಬೆದರಿಸುವಿಕೆಯ ತಂತ್ರ ಎಂದು ಆಕ್ರೋಶ ಹೊರ ಹಾಕಿದ್ದಾರೆ.
2022 ರ ಮಹಿಳಾ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಜೋರ್ಡಾನ್ ಎದುರಿನ ಅರ್ಹತಾ ಪಂದ್ಯದಲ್ಲಿ ಇರಾನ್ 4-2 ರಿಂದ ಗೆದ್ದಿತು. ಇರಾನ್‌ನ ಶಾಟ್-ಸ್ಟಾಪರ್ ಕೌಡೈ ಎರಡು ಪೆನಾಲ್ಟಿಗಳನ್ನು ಉಳಿಸಿ, ಮುಂಬರುವ ಏಷ್ಯಾ ಕಪ್‌ಗೆ ಇರಾನ್ ಅರ್ಹತೆ ಪಡೆಯುವುದನ್ನು ಖಚಿತಪಡಿಸಿದ್ದರು. ಆ ಬಳಿಕ ಜೋರ್ಡಾನ್ ಈ ಪ್ರಶ್ನೆ ಎತ್ತಿದೆ.
ಟೈಮ್ಸ್ ಆಫ್ ಇಸ್ರೇಲ್‌ನ ವರದಿಯ ಪ್ರಕಾರ, ಇರಾನ್‌ನ ಆಯ್ಕೆಗಾರರಾದ ಮರ್ಯಮ್ ಇರಾಂಡೂಸ್ಟ್ ಅವರು ಜೋರ್ಡಾನ್ ಆರೋಪವನ್ನು ನಿರಾಕರಿಸಿದ್ದಾರೆ.
ಇರಾಂಡೂಸ್ಟ್ ಅವರು, “ವೈದ್ಯಕೀಯ ಸಿಬ್ಬಂದಿ ಈ ವಿಷಯದಲ್ಲಿ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ಹಾರ್ಮೋನ್ ವಿಷಯದಲ್ಲಿ ರಾಷ್ಟ್ರೀಯ ತಂಡದ ಪ್ರತಿ ಆಟಗಾರ್ತಿಯನ್ನು ಎಚ್ಚರಿಕೆಯಿಂದ ಪರೀಕ್ಷಿಸಿದ್ದಾರೆ ಮತ್ತು ಆದ್ದರಿಂದ ನಾನು ಎಲ್ಲಾ ಅಭಿಮಾನಿಗಳಿಗೆ ಚಿಂತಿಸಬೇಡಿ ಎಂದು ಹೇಳುತ್ತೇನೆ, ಸಮಯವನ್ನು ವ್ಯರ್ಥ ಮಾಡದೆ ಏಷ್ಯನ್ ಫುಟ್ಬಾಲ್ ಒಕ್ಕೂಟವು ಬಯಸುವ ಯಾವುದೇ ದಾಖಲಾತಿಯನ್ನು ನಾವು ಒದಗಿಸುತ್ತೇವೆ.ಎಂದು ಹೇಳಿದ್ದಾರೆ.