ಟೆಹ್ರಾನ್: ಗಲ್ಫ್ ಆಫ್ ಓಮಾನ್ ನಲ್ಲಿ ಇರಾನ್ ಯುದ್ಧ ತರಬೇತು ಕವಾಯತು ಸಂದರ್ಭದಲ್ಲಿ ಇರಾನ್ ಯುದ್ಧ ನೌಕೆಗೆ ಮತ್ತೊಂದು ಯುದ್ಧ ನೌಕೆಗೆ ಮಿಸೈಲ್ ದಾಳಿ ನಡೆಸಿದ ಪರಿಣಾಮ 19 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಇರಾನ್ ಆರ್ಮಿ ತಿಳಿಸಿದೆ.
ಭಾನುವಾರ ಸಂಜೆ ಗಲ್ಫ್ ಆಫ್ ಓಮಾನ್ ನಲ್ಲಿ ಸೇನಾ ಕವಾಯತು ನಡೆಯುತ್ತಿದ್ದ ಸಂದರ್ಭದಲ್ಲಿ ಇರಾನ್ ನ ಕೋನಾರ್ಕ್ ಯುದ್ಧ ನೌಕೆ ಮೇಲೆ ಆಕಸ್ಮಿಕವಾಗಿ ಇರಾನ್ ಜಾಮ್ರಾನ್ ಡಿಸ್ಟ್ರಾಯರ್ ಮಿಸೈಲ್ ದಾಳಿ ನಡೆಸಿರುವುದಾಗಿ ಇರಾನ್ ಟಿವಿ ವರದಿ ವಿವರಿಸಿದೆ.
ಕೆಲವು ಮಾಧ್ಯಮದ ವರದಿ ಪ್ರಕಾರ, ಕೋನಾರ್ಕ್ ಯುದ್ಧ ನೌಕೆಯ ಕಮಾಂಡರ್ ಸೇರಿದಂತೆ 40 ಮಂದಿ ನೌಕಾ ಸಿಬ್ಬಂದಿಗಳು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ. ನಂತರ ಇರಾನ್ ಟಿವಿ ಘಟನೆಯಲ್ಲಿ ಕನಿಷ್ಠ ಪಕ್ಷ ಒಬ್ಬರು ಸಾವನ್ನಪ್ಪಿರುವುದಾಗಿ ತಿಳಿಸಿತ್ತು.
ಘಟನೆ ನಡೆದು ಕೆಲವು ಗಂಟೆ ಬಳಿಕ ಇರಾನ್ ಸೇನೆ ಅಧಿಕೃತವಾಗಿ 19 ಮಂದಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದು, ಇದೊಂದು ಆಕಸ್ಮಿಕ ಘಟನೆ ಎಂದು ಸ್ಪಷ್ಟನೆ ನೀಡಿರುವುದಾಗಿ ವರದಿ ತಿಳಿಸಿದೆ.
ಜನವರಿ ತಿಂಗಳಲ್ಲಿ ಉಕ್ರೈನ್ ಪ್ರಯಾಣಿಕ ವಿಮಾನವನ್ನು ತಪ್ಪು ತಿಳಿದು ಇರಾನ್ ಹೊಡೆದುರುಳಿಸಿತ್ತು. ಇದರಿಂದಾಗಿ ವಿಮಾನದಲ್ಲಿದ್ದ 176 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.