Advertisement

ಇರಾನಿ, ಆಗ್ತಾರಾ ಅಮೇಠಿ ರಾಣಿ?

11:29 PM Apr 11, 2019 | Team Udayavani |

ಗಾಂಧಿ ಕುಟುಂಬದ ಅಖಾಡ, ವಿವಿಐಪಿ ಕ್ಷೇತ್ರವೆಂದೇ ಕರೆಸಿಕೊಳ್ಳುವ ಅಮೇಠಿಯಲ್ಲೀಗ ಏನು ನಡೆಯುತ್ತಿದೆ? ಈ ಬಾರಿಯೂ ಈ ಕ್ಷೇತ್ರ ರಾಹುಲ್‌ರ ಕೈಹಿಡಿಯುತ್ತದೋ ಅಥವಾ ಕೈಬಿಡಲು ಸಿದ್ಧವಾಗಿದೆಯೋ? ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ರೆದುರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಎದುರಿಸಿದ್ದ ಬಿಜೆಪಿ ನಾಯಕಿ ಸ್ಮತಿ ಇರಾನಿ ಈಗ ಅಮೇಠಿಯ ರಾಣಿಯಾಗುತ್ತಾರಾ? ಈ ಭಯದಿಂದಲೇ ರಾಹುಲ್‌ ಗಾಂಧಿ ವಯನಾಡ್‌ನಿಂದಲೂ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರುವುದು ಅಮೇಠಿಯ ಮತದಾರರಲ್ಲಿ…

Advertisement

1967ರಲ್ಲಿ ಅಸ್ತಿತ್ವಕ್ಕೆ ಬಂದ ಅಮೇಠಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ 44 ವರ್ಷಗಳಿಂದ ಪ್ರತಿನಿಧಿಸುತ್ತಾ ಬಂದರೆ, ಗಾಂಧಿ ಕುಟುಂಬ 28 ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿದೆ..ರಾಜೀವ್‌ ಗಾಂಧಿ ಅವರ ಸಮಯದಲ್ಲಂತೂ ಅಮೇಠಿ ಕಾಂಗ್ರೆಸ್‌ನೆಡೆಗೆ ಯಾವ ಪರಿ ವಾಲಿತ್ತೆಂದರೆ, ಆ ಕ್ಷೇತ್ರದಲ್ಲಿ ಪ್ರತಿಪಕ್ಷಗಳಿಗೆ ಕಚೇರಿ ತೆರೆಯಲು ಅಥವಾ ಪಕ್ಷದ ಧ್ವಜ ಹಾರಿಸಲೂ ಜನ ಜಾಗ ಕೊಡುತ್ತಿರಲಿಲ್ಲ, 1998ನ್ನು ಹೊರತುಪಡಿಸಿದರೆ ಕಳೆದ ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜೈತ್ರಯಾತ್ರೆ ಮುಂದುವರಿದಿದೆ. ಆ ವರ್ಷದಲ್ಲಿ ಬಿಜೆಪಿಯ ಸಂಜಯ್‌ ಸಿಂಗ್‌, ಕಾಂಗ್ರೆಸ್‌ ನಾಯಕ ಸತೀಶ್‌ ಶರ್ಮಾ ಅವರನ್ನು ಚಿಕ್ಕ ಅಂತರದಿಂದ ಸೋಲಿಸಿದ್ದರು. 1999ರಲ್ಲಿ ಅಮೇಠಿಯಿಂದ ಸೋನಿಯಾ ಗಾಂಧಿ ಆಯ್ಕೆಯಾಗಿ ಈ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ ಹಿಡಿತಕ್ಕೆ ತಂದರು. 2004ರಿಂದ ರಾಹುಲ್‌ ಈ ಕ್ಷೇತ್ರದ ಸಂಸದರಾಗಿದ್ದಾರೆ. 2004 ಮತ್ತು 2009ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ತಮ್ಮ ಎದುರಾಳಿಗಳನ್ನು ಅತಿಹೆಚ್ಚು ಮತಗಳ ಅಂತರದಿಂದ ಸೋಲಿಸಿ ಸದ್ದು ಮಾಡಿದ್ದರು. 2014ರಲ್ಲಿ ಸ್ಮತಿ ಇರಾನಿಯವರನ್ನು ಸೋಲಿಸಲು ಅವರು ಸಫ‌ಲರಾದರೂ, ಅವರ ಗೆಲುವಿನ ಮಾರ್ಜಿನ್‌ ಕೇವಲ 12 ಪ್ರತಿಶತದಷ್ಟಿತ್ತು. ಸರಿಸುಮಾರು 1 ಲಕ್ಷ ಮತಗಳ ಅಂತರದಿಂದ ಸ್ಮತಿ ಸೋತಿದ್ದರು. ಅದಕ್ಕಿಂತಲೂ ಮುಖ್ಯವಾಗಿ ಸ್ಮತಿ ಇರಾನಿ 3,00,748 ಮತಗಳÊನ್ನು ಪಡೆದಿದ್ದರು ಎನ್ನುವುದು ವಿಶೇಷ. ಕಾಂಗ್ರೆಸ್‌ನ ಹೋಂಗ್ರೌಂಡ್‌ನ‌ಲ್ಲೇ ಸ್ಮತಿ ಈ ಪ್ರಮಾಣದ ಮತಗಳನ್ನು ಪಡೆದಾಗಲೇ ಕೈ ಪಾಳಯ ಗಾಬರಿಗೊಂಡಿತ್ತು. ಸ್ವಾತಂತ್ರಾé ನಂತರ ಅಮೇಠಿಯಲ್ಲಿ ಕಾಂಗ್ರೆಸ್‌ ಇಷ್ಟು ಕಡಿಮೆ ಅಂತರದಿಂದ ಗೆದ್ದದ್ದು ಅದೇ ಮೊದಲಾಗಿತ್ತು. 2004 ಮತ್ತು 2009ರಲ್ಲಿ ಕ್ರಮವಾಗಿ 66 ಮತ್ತು 71 ಪ್ರತಿಶತದಷ್ಟಿದ್ದ ರಾಹುಲ್‌ರ ಮತಪಾಲು 2014ರಲ್ಲಿ 46 ಪ್ರತಿಶತಕ್ಕೆ ಕುಸಿದುಬಿಟ್ಟಿತ್ತು. ಆದರೆ ಆ ವರ್ಷ ದೇಶಾದ್ಯಂತ ಮೋದಿ ಅಲೆ ಇದ್ದಿದ್ದರಿಂದ ಮತಪಾಲು ಕಡಿಮೆಯಾಯಿತು…ಈಗ ರಾಹುಲ್‌ ಪರ ಅಲೆಯಿದೆ ಎನ್ನುತ್ತಾರೆ ಅಮೇಠಿಯ ಕಾಂಗ್ರೆಸ್‌ ಕಾರ್ಯಕರ್ತರು.

ಆದರೆ, 2017ರಲ್ಲಿನ ವಿಧಾನಸಭಾ ಚುನಾವಣೆಯ ಫ‌ಲಿತಾಂಶವು ಅವರ ವಾದವನ್ನು ಪ್ರಶ್ನಿಸುವಂತಿದೆ. ಅಮೇಠಿ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 5 ವಿಧಾನಸಭಾ ಸ್ಥಾನಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 5ರಲ್ಲಿ 4 ಸ್ಥಾನಗಳಲ್ಲಿ ಗೆದ್ದುಬಿಟ್ಟಿತು…ಬಿಜೆಪಿ ಗೌರಿಗಜ್‌ನಲ್ಲಿ ಸೋತಿತಾದರೂ, ಅದನ್ನು ಸೋಲಿಸಿದ್ದು ಕಾಂಗ್ರೆಸ್‌ ಅಲ್ಲ, ಬದಲಾಗಿ ಸಮಾಜವಾದಿ ಪಕ್ಷ.

ಉಪ್ಪಿನ ಕಾಯಿಗೆ ಉತ್ತೇಜನ
2014ರಲ್ಲಿ ಸೋತ ನಂತರವೂ ಸ್ಮತಿ ಇರಾನಿ ನಿರಂತರವಾಗಿ ಅಮೇಠಿಗೆ ಭೇಟಿ ಕೊಡುತ್ತಲೇ ಇದ್ದಾರೆ. ಅಮೇಠಿಗೆ ತೆರಳಿ ಇ-ರಿಕ್ಷಾ ವಿತರಣೆ, ಸ್ಟೀಲ್‌ ಪ್ಲ್ರಾಂಟ್‌ಗೆ ಭೇಟಿ, ವೈಫೈ ಸೌಲಭ್ಯದ ಉದ್ಘಾಟನೆ, ಬಡವರಿಗೆ ಸೀರೆ ಹಂಚುವುದು…ಇತ್ಯಾದಿ ಕೆಲಸಗಳನ್ನು ಮಾಡಿದ್ದಾರೆ. ಇನ್ನು ಸ್ಥಳೀಯ ಉಪ್ಪಿನ ಕಾಯಿ ಬ್ರ್ಯಾಂಡ್‌ಗೂ ಉತ್ತೇಜನ ನೀಡಿರುವ ಸ್ಮತಿ ಇರಾನಿ, ಅಮೇಠಿಯಲ್ಲಿ Uri: The Surgical Strike ಚಿತ್ರಪ್ರದರ್ಶನವನ್ನೂ ಏರ್ಪಡಿಸಿದ್ದರು.

ಸ್ಮತಿ ಇರಾನಿ ಕಳೆದ ಐದು ವರ್ಷದಲ್ಲಿ ಈ ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಲು ಬಹಳ ಶ್ರಮವಹಿಸಿದ್ದಾರೆ. ಈ ಕಾರಣಕ್ಕಾಗಿಯೇ ಅಮೇಠಿಯ ಜನರೀಗ ಪ್ರಿಯಾಂಕಾರಂತೆಯೇ ಸ್ಮತಿ ಇರಾನಿಯವರನ್ನೂ “ದೀದಿ’ ಎಂದು ಕರೆಯಲಾರಂಭಿಸಿದ್ದಾರೆ. ಅಮಿತ್‌ ಶಾ ಮತ್ತು ಯೋಗಿ ಆದಿತ್ಯನಾಥ್‌ರಂಥ ಸ್ಟಾರ್‌ ಪ್ರಚಾರಕರೂ ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಅಮೇಠಿಗೆ ಭೇಟಿ ನೀಡುತ್ತಲೇ ಬಂದಿದ್ದಾರೆ.

Advertisement

ಇದಷ್ಟೇ ಅಲ್ಲದೇ ಬಿಜೆಪಿಯು ಅಮೇಠಿಯ ಗ್ರಾಮೀಣ ಭಾಗದ ಮತದಾರರನ್ನು ಸೆಳೆಯುವುದಕ್ಕೂ ಬಹಳ ಪ್ರಯತ್ನ ನಡೆಸಿದೆ. “ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರು ಅಮೇಠಿಯಲ್ಲಿನ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದರು. ರಾಹುಲ್‌ಗಿಂತಲೂ ಹೆಚ್ಚು ಕೆಲಸಗಳನ್ನು ಅವರು ಆ ಭಾಗದಲ್ಲಿ ಮಾಡಿದ್ದಾರೆ…ಒಂದು ವೇಳೆ ನಾನು ಸಂಸದೆಯಾದರೆ, ಸಂಸದ ನಿಧಿಯನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಸುತ್ತೇನೆ’ ಎನ್ನುತ್ತಾರೆ ಸ್ಮತಿ ಇರಾನಿ. ಆದರೆ, ಕಾಂಗ್ರೆಸ್‌ ಮಾತ್ರ ಇರಾನಿಯವರ ವಾದವನ್ನು ಸುಳ್ಳು ಎನ್ನುತ್ತದೆ. ರಾಹುಲ್‌ ಗಾಂಧಿ ಅಮೇಠಿ ಅಭಿವೃದ್ಧಿಗಾಗಿ 26.85 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನುತ್ತದದು.

ಘೋಷಣೆಗಳ ವಾರ್‌
ಈ ಬಾರಿ ಅಮೇಠಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಘೋಷಣಾ ಸಮರದ ಅಬ್ಬರ ಜೋರಾಗಿದೆ. ಬಿಜೆಪಿಯು “ಅಬ್ಕಿ ಬಾರ್‌, ಅಮೇಠಿ ಹಮಾರ್‌'(ಈ ಬಾರಿ ಅಮೇಠಿ ನಮ್ಮದು) ಎಂದರೆ, ಕಾಂಗ್ರೆಸ್‌ “ಅಬ್ಕಿ ಬಾರ್‌ ಸ್ಮತಿ ಇರಾನಿಕೀ ತೀಸ್ರಿ ಹಾರ್‌, ರಾಹುಲ್‌ಜೀ ಕಾ ಅಂತರ್‌ 5 ಲಾಖ್‌ ಕೇ ಪಾರ್‌'(ಸ್ಮತಿ ಇರಾನಿ ಮೂರನೇ ಬಾರಿಯೂ ಸೋಲಲಿದ್ದಾರೆ, ರಾಹುಲ್‌ 5 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ) ಎಂದು ಪ್ರತ್ಯುತ್ತರ ನೀಡುತ್ತಿದೆ. ಅಲ್ಲದೇ ಕಾಂಗ್ರೆಸ್‌ “ಅಮೇಠಿ ಕಾ ಎಂಪಿ, 2019 ಕಾ ಪಿಎಂ’ ಎಂಬ ಸೃಜನಶೀಲ ಘೋಷವಾಕ್ಯವನ್ನು ಮೊಳಗಿಸುತ್ತಿದೆ. ಆದರೆ ಈ ಘೋಷಣೆಗಳು ಕಾಂಗ್ರೆಸ್‌ ಪಾಲಿಗೆ ಅಷ್ಟೇನೂ ಸಹಾಯ ಮಾಡಲಾರವು ಎನ್ನುತ್ತಾರೆ ಬಿಜೆಪಿಯವರು.

ಕಾಂಗ್ರೆಸ್‌ನೊಂದಿಗಿದೆ ಭಾವನಾತ್ಮಕ ಸಂಬಂಧ
“ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅಮೇಠಿಯ ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದರು. ಆದರೆ ರಾಹುಲ್‌ರಲ್ಲಿ ಆ ಗುಣವಿಲ್ಲ. ಅವರ ಸುತ್ತಲೂ ಬರೀ ವಿಐಪಿಗಳೇ ತುಂಬಿಕೊಂಡಿರುತ್ತಾರೆ’ ಎಂದು ಇಂಡಿಯಾ ಟುಡೆ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಅಮೇಠಿಯ ಅನೇಕ ನಿವಾಸಿಗಳು ಹೇಳುತ್ತಾರೆ. ಆದರೆ ಇದೇ ವೇಳೆಯಲ್ಲೇ ಗಾಂಧಿ ಕುಟುಂಬದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿ ರುವವರೇನೂ ಕಡಿಮೆಯಿಲ್ಲ. ಅಮೇಠಿ ನಿವಾಸಿ, 75 ವರ್ಷದ ಸಂದರ್‌ ತಿವಾರಿಯಂಥ ನಿಷ್ಠಾವಂತ ಬೆಂಬಲಿಗರೂ ಅನೇಕರಿದ್ದಾರೆ. “”ಅಮೇಠಿ ಜನರು ಮತ್ತು ಗಾಂಧಿ ಕುಟುಂಬದ ನಡುವಿನ ಭಾವನಾತ್ಮಕ ಬಂಧ ಬಹಳ ಬಲಿಷ್ಠವಾಗಿದೆ. ರಾಜೀವ್‌ ಗಾಂಧಿಯವರು ಪ್ರಧಾನಿಯಾಗಿದ್ದಾಗಲೂ ಸಾಮಾನ್ಯರಂತೆ ನಮ್ಮೊಂದಿಗೆ ಬೆರೆಯುತ್ತಿದ್ದರು. ಅದನ್ನೆಲ್ಲ ಹೇಗೆ ಮರೆಯಲಿ? ಅವರು ನಮ್ಮ ಕುಟುಂಬದ ಸದಸ್ಯರಂತಿದ್ದರು, ಅವರ ಕುಟುಂಬದ ಸದಸ್ಯರು ನಮ್ಮವರೇ ಅಲ್ಲವೇ? ನಮ್ಮ ಮನೆಯಲ್ಲಿ 32 ಮತಗಳಿದ್ದು, ಎಲ್ಲಾ ಮತಗಳೂ ರಾಹುಲ್‌ಜೀಗೇ ಹೋಗುತ್ತವೆ” ಎನ್ನುತ್ತಾರೆ ಈ ಅಜ್ಜ…

ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಫ‌ಲಿತಾಂಶದ ಮೇಲೆ ನಿಸ್ಸಂಶಯವಾಗಿಯೂ ದೇಶದ ಚಿತ್ತ ನೆಟ್ಟಿದೆ. ಒಂದು ವೇಳೆ ರಾಹುಲ್‌ ಇಲ್ಲೇನಾದರೂ ಸೋತರೆ, ಅದು ಪಕ್ಷಕ್ಕೆ ಅಗಾಧ ನಿರಾಸೆಯನ್ನು ಎದುರೊಡ್ಡಲಿದೆ. ರಾಹುಲ್‌ ಗೆಲುವು ಸಾಧಿಸಿದರೆ…ಅಮೇಠಿಯ ವಿಚಾರದಲ್ಲಿನ ಬಿಜೆಪಿಯ ಲೆಕ್ಕಾಚಾರವೆಲ್ಲ ತಪ್ಪು ಎಂದು ಸಾಬೀತಾಗುತ್ತದೆ. ಒಂದು ವೇಳೆ ಸ್ಮತಿ ಸೋತರೆ ಅವರು ಮತ್ತೆ ಎಂದಾದರೂ ಅಮೇಠಿಗೆ ಕಾಲಿಡುತ್ತಾರಾ? ಎಂಬ ಪ್ರಶ್ನೆಯೂ ಎದುರಾಗಿದೆ…

2015ರಿಂದ ಇಲ್ಲಿಯವರೆಗೂ ಸ್ಮತಿ ಇರಾನಿ 202 ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಅಮೇಠಿಯ ಹೆಸರೆತ್ತಿದ್ದರೆ, ರಾಹುಲ್‌ ಗಾಂಧಿ ಕೇವಲ 28 ಬಾರಿ ಅಮೇಠಿ ಪದ ಬಳಸಿದ್ದಾರೆ.

ಅಮೇಠಿಗೆ ಕಳೆದ ಐದು ವರ್ಷಗಳಲ್ಲಿ
21ಬಾರಿ ಭೇಟಿ
26 ಕಳೆದ ದಿನಗಳು

17 ಬಾರಿ ಭೇಟಿ
35 ಕಳೆದ ದಿನಗಳು

Advertisement

Udayavani is now on Telegram. Click here to join our channel and stay updated with the latest news.

Next