Advertisement
ಇರಾನಿ ಗ್ಯಾಂಗ್‌ನ ಇಬ್ಬರು ಮೋಸ್ಟ್ ವಾಂಟೆಂಡ್ ಸರಗಳ್ಳರು, ಮೂವರು ಮನೆಕಳ್ಳರು, ಏರ್‌ಗನ್ ತೋರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರು, ಎಂಟು ಆಟೋಗಳನ್ನು ಕಳವು ಮಾಡಿದ್ದ ಆರೋಪಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.
Related Articles
Advertisement
ಆರೋಪಿ ಸೈಯದ್ ಖರಾರ್ ಹುಸೈನ್ ವಿರುದ್ಧ ಮಹಾರಾಷ್ಟ್ರದಲ್ಲಿ 100ಕ್ಕೂ ಅಧಿಕ ಸರಗಳವು ಪ್ರಕರಣಗಳು ದಾಖಲಾಗಿದ್ದು, ಕೋಕಾ ಕಾಯಿದೆ ಅಡಿ ಬಂಧನಕ್ಕೊಳಗಾಗಿದ್ದ. ಮೊಹಮದ್ ಅಲಿ ವಿರುದ್ಧ 25ಕ್ಕೂ ಹೆಚ್ಚು ಕೇಸ್‌ಗಳಿವೆ ಎಂದು ಅಧಿಕಾರಿ ತಿಳಿಸಿದರು.
ಕಳ್ಳ ಸಹೋದರರ ಬಂಧನ: ಮೋಜಿನ ಜೀವನ ನಡೆಸಲು ಮನೆಗಳವು ಮಾಡುತ್ತಿದ್ದ ಮೈಸೂರು ಮೂಲದ ಇಬ್ಬರು ಸಹೋದರರು ಸೇರಿ ಮೂವರು ಆರೋಪಿಗಳನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು, 30 ಲಕ್ಷ ರೂ. ಮೌಲ್ಯದ 1.ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.
ಮೈಸೂರಿನ ಮಹಮದ್ ರಹೀಮ್ ಖಾನ್, ಆತನ ಸಹೋದರ ಬಿಲಾಲ್ ಖಾನ್, ನಯೀಮ್ ಖಾನ್ ಬಂಧಿತರು. ಆರೋಪಿಗಳ ಬಂಧನದಿಂದ 18 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಮೋಜಿನ ಜೀವನಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡಿರುವ ಆರೋಪಿಗಳು ಆಂಧ್ರ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಕಿಟಕಿ ಮೂಲಕ ಕಟ್ಟಿಗೆ ತೂರಿಸಿ ಮನೆಯ ಚಿಲಕ ತೆಗೆದು ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ, ಆಟೋ ಚಂದ್ರಶೇಖರ್ ಎಂಬಾತನನ್ನು ಬಂಧಿಸಿ ಐದು ಲಕ್ಷ ರೂ, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಚಿನ್ನಾಭರಣ, ಹಣ ಕದ್ದಿದ್ದ ಶಶಿಕಲಾ ಎಂಬಾಕೆಯನ್ನು ಬಂಧಿಸಿದ್ದು, 2 ಲಕ್ಷ ರೂ. ಮೌಲ್ಯದ ಚಿನ್ನಭರಣ 1 ಕೆ.ಜಿ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಮನೆಮುಂದೆ ನಿಲ್ಲಿಸುತ್ತಿದ್ದ ಆಟೋಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಮೊಹಮದ್ ಸಾದಿಕ್ ಎಂಬಾತನನ್ನು ಬಂಧಿಸಿ, 8 ಆಟೋ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏರ್‌ಗನ್ ತೋರಿಸಿ ಸುಲಿಗೆ: ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಏರ್‌ಗನ್ ತೋರಿಸಿ ಸುಲಿಗೆ ಮಾಡುತ್ತಿದ್ದ ಮೊಹಮದ್ ಶಫೀಕ್ ಅಹಮದ್, ಮೊಹಮದ್ ಶೋಹೆಬ್, ಇಸ್ಮಾಯಿಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ತಾಯಿತ ಕಟ್ಟಿಸಿಕೊಂಡು ಬರ್ತೀದ್ರು: ಸರಗಳವಿಗೆಂದೇ ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದ ಇರಾನಿ ಗ್ಯಾಂಗ್‌ನ ಮಹಮದ್ ಅಲಿ, ಸೈಯದ್ ಖರಾರ್ ಹುಸೈನ್, ಹೀಗೆ ಬರುವ ಮುನ್ನ ತಾವು ಪೊಲೀಸರ ಕೈಗೆ ಸಿಕ್ಕಿಬೀಳಬಾರದು ಎಂದು ಹರಕೆ ಹೊತ್ತು, ಮಂತ್ರಿಸಿದ “ತಾಯಿತ’ ಕಟ್ಟಿಸಿಕೊಂಡು ಬರುತ್ತಿದ್ದರು. ಕಳವು ಯಶಸ್ವಿಯಾಗಿ, ಊರಿಗೆ ಮರಳಿದ ಬಳಿಕ, ಕದ್ದ ಚಿನ್ನಾಭರಣದಲ್ಲಿ ಶೇ.10 ಪಾಲನ್ನು ದೇವರಿಗೆ ಮೀಸಲಿಡುತ್ತಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ.