ಪ್ಯಾರಿಸ್: 12 ಮಂದಿ ಬಲೂಚಿ ಕೈದಿಗಳಿಗೆ ಇರಾನ್ ಸಾಮೂಹಿಕವಾಗಿ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಎನ್ ಜಿಒ ತಿಳಿಸಿದ್ದು, ಇದರೊಂದಿಗೆ ಇಸ್ಲಾಮಿಕ್ ಗಣರಾಜ್ಯಗಳಲ್ಲಿ ಹೆಚ್ಚಳವಾಗುತ್ತಿರುವ ಮರಣದಂಡನೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಗೃಹ, ವಾಹನ ಸಾಲದ ಇಎಂಐ ಹೊರೆ ಏರಿಕೆ: ಆರ್ ಬಿಐನಿಂದ ಮತ್ತೆ ರೆಪೋ ದರ ಹೆಚ್ಚಳ
ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನ್ ಗಡಿ ಸಮೀಪ ಇರುವ ಝಾಹೇಡನ್ ಕೇಂದ್ರ ಕಾರಾಗೃಹದಲ್ಲಿ ಮಾದಕವಸ್ತು ಅಥವಾ ಕೊಲೆ ಆರೋಪದಡಿ ಬಂಧಿಸಲ್ಪಟ್ಟ 11 ಪುರುಷರು ಹಾಗೂ ಓರ್ವ ಮಹಿಳೆಯನ್ನು ಸೋಮವಾರ ಬೆಳಗ್ಗೆ ಗಲ್ಲಿಗೇರಿಸಲಾಗಿತ್ತು ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕು ತಿಳಿಸಿದೆ.
ಅವರೆಲ್ಲರೂ ಬಲೂಚ್ ಜನಾಂಗದ ಅಲ್ಪಸಂಖ್ಯಾತ ಸದಸ್ಯರಾಗಿದ್ದರು. ಅಷ್ಟೇ ಅಲ್ಲ ಅವರು ಮುಖ್ಯವಾಗಿ ಇರಾನ್ ನಲ್ಲಿ ಪ್ರಬಲವಾಗಿರುವ ಶಿಯಾ ಪಂಗಡಕ್ಕಿಂತ ಸುನ್ನಿ ಪಂಥಕ್ಕೆ ಹೆಚ್ಚು ಬದ್ಧರಾಗಿದ್ದರು ಎಂದು ವರದಿ ವಿವರಿಸಿದೆ.
ಡ್ರಗ್ಸ್ ಆರೋಪದಡಿ ಆರು ಮಂದಿಗೆ ಹಾಗೂ ಕೊಲೆ ಪ್ರಕರಣದಲ್ಲಿ ಆರು ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಗಲ್ಲುಶಿಕ್ಷೆಯ ಬಗ್ಗೆ ಇರಾನ್ ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ, ಅದೇ ರೀತಿ ಅಧಿಕಾರಿಗಳು ಕೂಡಾ ಖಚಿತಪಡಿಸಿಲ್ಲ ಎಂದು ಮಾನವ ಹಕ್ಕು ಆರೋಪಿಸಿದೆ.
ಗಲ್ಲಿಗೇರಿಸಲ್ಪಟ್ಟ ಮಹಿಳೆಯನ್ನು ಕೇವಲ ಗಾರ್ಗಿಜ್ ಎಂದು ಮಾತ್ರ ಗುರುತಿಸಲಾಗಿದೆ. ಗಂಡನನ್ನು ಕೊಲೆಗೈದ ಆರೋಪದಲ್ಲಿ ಈಕೆಯನ್ನು 2019ರಲ್ಲಿ ಬಂಧಿಸಲಾಗಿತ್ತು ಎಂದು ವರದಿ ತಿಳಿಸಿದೆ. ಸಾಂಪ್ರದಾಯಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ಇರಾನ್ ಮರಣದಂಡನೆ ಶಿಕ್ಷೆ ಜಾರಿಗೊಳಿಸುತ್ತಿದೆ. ಮುಖ್ಯವಾಗಿ ವಾಯುವ್ಯ ಭಾಗದ ಕುರ್ದ್ಸ್, ನೈರುತ್ಯದಲ್ಲಿ ಅರಬ್ಸ್ ಮತ್ತು ಆಗ್ನೇಯದಲ್ಲಿ ಬಲೂಚ್ ಜನಾಂಗವನ್ನು ಇರಾನ್ ಗುರಿಯಾಗಿರಿಸಿಕೊಂಡಿರುವುದಾಗಿ ಮಾನವ ಹಕ್ಕು ತಿಳಿಸಿದೆ.