ಟೆಹ್ರಾನ್: ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಅಮೆರಿಕ ವೈಮಾನಿಕ ದಾಳಿ ನಡೆಸಿ ಹತ್ಯೆಗೈದ ಘಟನೆಗೆ ಪ್ರತೀಕಾರಕ್ಕೆ ಮುಂದಾಗಿರುವ ಇರಾನ್ ಮಂಗಳವಾರ ರಾತ್ರಿ ಇರಾಕ್ ಮಿಲಿಟರಿ ನೆಲೆಯಲ್ಲಿರುವ ಅಮೆರಿಕ ಪಡೆಗಳ ಮೇಲೆ ಮಿಸೈಲ್ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇರಾನ್ ಪಡೆಗಳು 12ಕ್ಕೂ ಅಧಿಕ ಬ್ಯಾಲಿಸ್ಟಿಕ್ ಮಿಸೈಲ್ಸ್ ಗಳನ್ನು ಇರಾಕ್ ನ ಅಲ್ ಅಸಾದ್ ಮತ್ತು ಇರ್ಬಿಲ್ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಪೆಂಟಾಗಾನ್ ತಿಳಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಯಾವುದೇ ವಿವರ ನೀಡಿಲ್ಲ ಎಂದು ವರದಿ ವಿವರಿಸಿದೆ.
ಇರಾಕ್ ನ ಅಲ್ ಅಸಾದ್ ವಾಯುನೆಲೆಯಲ್ಲಿ 1500ಕ್ಕೂ ಅಧಿಕ ಅಮೆರಿಕ ಮತ್ತು ಮೈತ್ರಿ ಪಡೆಗಳು ಇವೆ. ಇರಾನ್ ಮೇಲೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಐಸಿಸ್ ದಾಳಿ ನಡೆಸುವ ಸಾಧ್ಯತೆಯ ಮುನ್ನೆಚ್ಚರಿಕೆ ಅಂಗವಾಗಿ ವಾಯುನೆಲೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದೆ.
ಇದು ಇರಾನ್ ನ ಯುದ್ಧ ಕಾರ್ಯಾಚರಣೆ: ಗ್ರಾಹಂ
ಇರಾನ್ ಸೆನೆಟರ್ ಲಿಂಡ್ಸೆ ಗ್ರಾಹಂ ಫೋಕ್ಸ್ ನ್ಯೂಸ್ ಗೆ ಮಂಗಳವಾರ ಸಂಜೆ ನೀಡಿರುವ ಪ್ರತಿಕ್ರಿಯೆಯಲ್ಲಿ, ಇದು ಇರಾನ್ ನ ಯುದ್ಧ ಕಾರ್ಯಾಚರಣೆಯಾಗಿದೆ. ಹೇಗೆ ಪ್ರತಿಕ್ರಿಯಿಸಬೇಕೆಂಬ ಎಲ್ಲಾ ಅಧಿಕಾರ ಅಧ್ಯಕ್ಷರಿಗಿದೆ ಎಂದು ತಿಳಿಸಿರುವುದಾಗಿ ಹೇಳಿದೆ. ಇರಾನ್ ಈಗಾಗಲೇ ಮಿಸೈಲ್ ದಾಳಿ ನಡೆಸಿದೆ. ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಅಧ್ಯಕ್ಷರು ನಿರ್ಧರಿಸಲಿದ್ದಾರೆ ಎಂದು ಗ್ರಾಹಂ ಹೇಳಿರುವುದಾಗಿ ವರದಿ ವಿವರಿಸಿದೆ.