ಇರಾನ್‌ಗೆ ಪಾಠ ಕಲಿಸಲೇಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಅಮೆರಿಕ ಮತ್ತೆ ಮಧ್ಯಪ್ರಾಚ್ಯದ ಆ ರಾಷ್ಟ್ರದ ಮೇಲೆ ನಿರ್ಬಂಧ ವಿಧಿಸುವ ಘೋಷಣೆ ಮಾಡಿದೆ. ಆದರೆ ಈ ಬಾರಿ ಅಮೆರಿಕದ ವಿರುದ್ಧದ ಧ್ವನಿಗಳು ಜೋರಾಗಿವೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟರೇಸ್, ಎಲ್ಲಿಯವರೆಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಸುರು ನಿಶಾನೆ ತೋರಿಸುವುದಿಲ್ಲವೋ ಅಲ್ಲಿಯವರೆಗೂ ಇರಾನ್‌ನ ಮೇಲೆ ನಿರ್ಬಂಧಗಳನ್ನು ಹೇರಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭದ್ರತಾ ಮಂಡಳಿಯಲ್ಲಿ ಮೊದಲಿನಿಂದಲೂ ಅಮೆರಿಕದ ವಿರುದ್ಧ ಭುಸುಗುಡುತ್ತಲೇ ಬಂದಿರುವ ಚೀನ ಮತ್ತು ರಷ್ಯಾ ಈ ಬಾರಿಯೂ ಅಮೆರಿಕದ ನಡೆಯನ್ನು ಬಹಿರಂಗವಾಗಿ ಖಂಡಿಸುತ್ತಿವೆ. ಇರಾನ್‌ನ ವಿಷಯದಲ್ಲಿ ಫ್ರಾನ್ಸ್ ಕೂಡ ಅಮೆರಿಕದ ಜತೆ ಧ್ವನಿಗೂಡಿಸುತ್ತಿಲ್ಲ ಎನ್ನುವುದು ವಿಶೇಷ.
ಈ ಹಿಂದೆ ಟ್ರಂಪ್ ಸರಕಾರ, 2015ರಲ್ಲಿ ಒಬಾಮಾ ಅವಧಿಯಲ್ಲಿ ಆಗಿದ್ದ ಇರಾನ್ ಜತೆಗಿನ ಒಪ್ಪಂದದಲ್ಲಿ ನ್ಯೂನತೆಗಳಿವೆ ಎಂದು ಹೇಳಿ, ಹೊರನಡೆದಿತ್ತು. ಇದಷ್ಟೇ ಅಲ್ಲದೆ, ಇರಾನ್ ಮೇಲೆ ಹೊಸ ನಿರ್ಬಂಧಗಳಿಗೂ ಟ್ರಂಪ್ ಸಹಿ ಹಾಕುತ್ತಾ, ವಿವಾದಾಸ್ಪದ ಒಪ್ಪಂದದ ವಿಚಾರದಲ್ಲಿ ಇತರ ರಾಷ್ಟ್ರಗಳು ಸಹಕಾರ ಮುಂದುವರಿಸಿದರೆ ಅಂಥ ರಾಷ್ಟ್ರಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಇದರಿಂದಾಗಿ ಇರಾನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವ, ವ್ಯಾಪಾರ ಸಂಬಂಧವನ್ನು ಹೊಂದಿರುವ ಭಾರತ, ಇಟಲಿ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ತೊಂದರೆಯಾಗು ವಂತಾಯಿತು. ಅಮೆರಿಕದ ಈ ಏಕಪಕ್ಷೀಯ ನಡೆಯ ವಿರುದ್ಧ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಅಸಮಾಧಾನ ಇದ್ದೇ ಇದೆ.
ಈಗ ಅಮೆರಿಕ ಮತ್ತೆ ಏಕಪಕ್ಷೀಯ ನಿರ್ಧಾರಕ್ಕೆ ಮುಂದಾಗಿರುವುದರಿಂದ ಅನೇಕ ರಾಷ್ಟ್ರಗಳು ಬಹಿರಂಗವಾಗಿಯೇ ಪ್ರತಿರೋಧ ಎದುರೊಡ್ಡುತ್ತಿವೆ. ಅಮೆರಿಕದ ಮಿತ್ರ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಕೂಡ ಈಗ ವಿರೋಧ ವ್ಯಕ್ತಪಡಿಸಲಾರಂಭಿಸಿವೆ. ಸತ್ಯವೇನೆಂದರೆ, ಅಮೆರಿಕವು ಕೆಲವು ತಿಂಗಳ ಹಿಂದೆ ಇರಾನ್‌ನ ಸೇನಾ ಮುಖ್ಯಸ್ಥ ಸುಲೇಮಾನಿಯ ಹತ್ಯೆ ಮಾಡಿದ್ದ ಅನಂತರ ಇರಾನ್ ಪ್ರತಿರೋಧದ ಮಾತಾಡಿತ್ತಾದರೂ, ಆ ವಿಷಯದಲ್ಲಿ ಅದು ತಣ್ಣಗಾಗತೊಡಗಿತ್ತು. ಈಗ ಮತ್ತೆ ಅಮೆರಿಕ ಇರಾನ್ ಜತೆಗೆ ಬಿಕ್ಕಟ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ.
ಇದಕ್ಕೆ ಮುಖ್ಯ ಕಾರಣವೆಂದರೆ, ಇನ್ನೆರಡು ತಿಂಗಳುಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಎನ್ನಲಾಗುತ್ತದೆ. ಕೋವಿಡ್ ಬಿಕ್ಕಟ್ಟಿನಿಂದ ಅಮೆರಿಕ ತತ್ತರಿಸಿರುವುದರಿಂದಾಗಿ ಜನರ ಗಮನವನ್ನು ಬೇರೆಡೆ ಸೆಳೆಯಲು ಟ್ರಂಪ್ ಶತಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗಷ್ಟೇ ಯುಎಇ ಹಾಗೂ ಇಸ್ರೇಲ್ ನಡುವೆ ಶಾಂತಿ ಒಪ್ಪಂದ ಮಾಡಿಸಿ, ಇಡೀ ಅರಬ್ ಜಗತ್ತಿನಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಈ ತಂತ್ರದ ಮುಖ್ಯ ಗುರಿಯೂ ಇರಾನ್ ಆಗಿದೆ ಎನ್ನುವುದು ನಿಸ್ಸಂಶಯ.
ಅಣ್ವಸ್ತ್ರದ ವಿಷಯ ಹಿಡಿದುಕೊಂಡು ಅಮೆರಿಕ ಹೇಗೆ ಈ ಹಿಂದೆ ಇರಾಕ್‌ನ ಹಿಂದೆ ಬಿದ್ದಿತ್ತೋ, ಈಗ ಇರಾನ್‌ನ ವಿಷಯದಲ್ಲೂ ಅಂಥದ್ದೇ ಹೆಜ್ಜೆಯಿಡಲು ಪ್ರಯತ್ನಿಸುತ್ತಿದೆ. ಆದರೆ ಚುನಾವಣ ಲಾಭ ಪಡೆಯಲು ಟ್ರಂಪ್ ಆಡಳಿತ ರಚಿಸುತ್ತಿರುವ ಈ ತಂತ್ರಗಳು ಅನ್ಯ ದೇಶಗಳಿಗೆ ಬಹಳ ತೊಂದರೆಯುಂಟು ಮಾಡುತ್ತವೆ. ಈ ಕಾರಣಕ್ಕಾಗಿಯೇ ಏಷ್ಯನ್ ರಾಷ್ಟ್ರಗಳು, ಐರೋಪ್ಯ ರಾಷ್ಟ್ರಗಳು ಹಾಗೂ ಮುಖ್ಯವಾಗಿ ವಿಶ್ವಸಂಸ್ಥೆ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ.