Advertisement

ಮಧುಕರ್‌ ಸಾವಿನ ರಹಸ್ಯ ಭೇದಿಸಲು ಸಮಿತಿ

04:58 PM Apr 21, 2019 | mahesh |

ಬೆಂಗಳೂರು: ರಾಜ್ಯ ಕಂಡ ದಕ್ಷ, ಪ್ರಾಮಾಣಿಕ ಐಪಿಎಸ್‌ ಅಧಿಕಾರಿ ಡಾ. ಮಧುಕರ್‌ ಶೆಟ್ಟಿ ಅವರದ್ದು ಕೊಲೆಯೋ..? ಸಹಜ ಸಾವೋ..?

Advertisement

ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಡಾ. ಕೆ. ಮಧುಕರ್‌ ಶೆಟ್ಟಿ ಸಾವಿನ ‘ನಿಗೂಢ’ ರಹಸ್ಯದ ಬಗ್ಗೆ ಹುಟ್ಟಿಕೊಂಡ ಹಲವು ಸಂದೇಹಗಳ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಚಿಂತಿಸಿದ್ದು, ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡಲು ತಜ್ಞರ ಸಮಿತಿ ನೇಮಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಈ ವಿಚಾರಣಾ ಸಮಿತಿಗೆ ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್‌ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಉಳಿದಂತೆ ಸದಸ್ಯರನ್ನಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಾರ್ಡಿಯೋಥೊರಾಸಿಕ್‌ ಸರ್ಜರಿ ವಿಭಾಗದ ಡಾ. ಸೀತಾರಾಮ್‌ ಭಟ್, ನಿಮ್ಹಾನ್ಸ್‌ನ ವೈರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ವಿ. ರವಿ, ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆಯ ಎದೆರೋಗ ವಿಭಾಗದ ಡಾ. ನಾಗರಾಜ ಅವರನ್ನು ನೇಮಕ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನು ಸಂಚಾಲಕರನ್ನಾಗಿ ನೇಮಿಸಿದ್ದು, ಎರಡು ವಾರಗಳಲ್ಲಿ ವರದಿ ನೀಡುವಂತೆ ಆದೇಶದಲ್ಲಿ ತಿಳಿಸಿದೆ.

ಡಿಸೆಂಬರ್‌ನಲ್ಲಿ ಮಧುಕರ ಶೆಟ್ಟಿ ಸಾವು: ಹೈದ್ರಾಬಾದ್‌ನ ಸರ್ದಾರ್‌ ವಲ್ಲಭಭಾಯ್‌ ಪಟೇಲ್ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಮಧುಕರ್‌ ಶೆಟ್ಟಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಹೈದ್ರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಡಿ.25ರಂದು ಚಿಕಿತ್ಸೆ ಫ‌ಲಿಸದೆ ಕೊನೆಯುಸಿರೆಳೆದಿದ್ದರು.

ಇಪತ್ತು ವರ್ಷಗಳ ಸೇವಾ ಅವಧಿಯಲ್ಲಿ ಜನಸ್ನೇಹಿ, ದಕ್ಷತೆ ಹಾಗೂ ಪ್ರಾಮಾಣಿಕ ಆಧಿಕಾರಿ ಎಂಬ ಹೆಗ್ಗುರುತು ಹೊಂದಿದ್ದ ಮಧುಕರ್‌ ಶೆಟ್ಟಿ ಅವರ ಅಕಾಲಿಕ ಸಾವಿಗೆ ಪೊಲೀಸ್‌ ಇಲಾಖೆ ಮಾತ್ರವಲ್ಲ, ರಾಜ್ಯ ದಿಗ್ಭ್ರಮೆಪಟ್ಟಿತ್ತು. ಅವರನ್ನು ಹತ್ತಿರದಿಂದ ಬಲ್ಲವರು, ಅವರ ಜತೆ ಕಾರ್ಯನಿರ್ವಹಿಸಿದವರು ಸಾರ್ವಜನಿಕ ವಲಯಗಳಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಈ ಬೆಳವಣಿಗೆಗಳ ನಡುವೆಯೇ ಮಧುಕರ್‌ ಶೆಟ್ಟಿ ಅವರ ಸಾವಿನ ಕುರಿತಾಗಿ ಸಂದೇಹ ವ್ಯಕ್ತಪಡಿಸಿದ್ದ ಅವರ ಪತ್ನಿ ಹಾಗೂ ಸಹೋದರರು, ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಅಸಮರ್ಪಕ ಚಿಕಿತ್ಸೆ ನೀಡಿರುವುದರ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಬೆನ್ನಲ್ಲೇ ಮಧುಕರ್‌ ಶೆಟ್ಟಿ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸರ್ಕಾರ ತಾತ್ವಿಕವಾಗಿ ನಿರ್ಧರಿಸಿದೆ. ಮೊದಲ ಹಂತದಲ್ಲಿ ಮಧುಕರ್‌ ಶೆಟ್ಟಿ ಅವರಿಗೆ ಅವರಿಗೆ ದೊರೆತ ಚಿಕಿತ್ಸೆ ಹಾಗೂ ಸಾವಿನ ಬಗ್ಗೆ ತನಿಖೆ ನಡೆಸುವಂತೆ ತಜ್ಞ ವೈದ್ಯರನ್ನೊಳಗೊಂಡ ಆರು ಮಂದಿಯ ವಿಚಾರಣಾ ಸಮಿತಿ ರಚಿಸಿದೆ.

Advertisement

ಮಧುಕರ್‌ ಶೆಟ್ಟಿ ಸಾವಿನ ಬಗ್ಗೆ ಅನುಮಾನ ಏಕೆ?

ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ಅನಾರೋಗ್ಯ ಕಾರಣದಿಂದ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದರು. ಮಧುಕರ್‌ ಶೆಟ್ಟಿ ಎಚ್.1 ಎನ್‌ 1 ಸೋಂಕಿನಿಂದ ಬಳಲುತ್ತಿದ್ದರು ಅಂತೆಯೇ ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ, ನಿಖರವಾಗಿ ಇಂತಹದ್ದೇ ಅನಾರೋಗ್ಯದಿಂದ ಮೃತಪಟ್ಟಿದ್ದರು ಎಂಬುದರ ಬಗ್ಗೆ ಬಹಿರಂಗಗೊಂಡಿಲ್ಲ. ಹೀಗಾಗಿಯೇ ಅವರಿಗೆ ಅಸಮರ್ಪಕ ಚಿಕಿತ್ಸೆ ದೊರೆತಿರಬಹುದು ಇಲ್ಲವೇ ಬೇರೆ ಕಾರಣಗಳೂ ಇರಬಹುದು ಎಂದು ಮಧುಕರ್‌ ಶೆಟ್ಟಿ ಅವರನ್ನು ಹತ್ತಿರದಿಂದ ಬಲ್ಲ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ವೈದ್ಯಕೀಯ ದಾಖಲೆ ಸಂಗ್ರಹದಲ್ಲಿ ಸಮಿತಿ!

ಮಧುಕರ್‌ ಶೆಟ್ಟಿ ಸಾವಿನ ಕುರಿತು ತನಿಖೆ ನಡೆಸಲು ರಚಿಸಲಾಗಿರುವ ವೈದ್ಯರ ವಿಚಾರಣಾ ಸಮಿತಿ, ಅವರು ದಾಖಲಾಗಿದ್ದ ಕಾಂಟಿನೆಂಟಲ್ ಆಸ್ಪತ್ರೆಯ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಆದರೆ, ಸಮಿತಿ ಸದಸ್ಯರ ಸಭೆ ಇದುವರೆಗೂ ನಡೆದಿಲ್ಲ. ಮಧುಕರ್‌ ಶೆಟ್ಟಿ ಚಿಕಿತ್ಸೆಯ ವೈದ್ಯಕೀಯ ದಾಖಲೆಗಳ ಪರಾಮರ್ಶೆ ಬಳಿಕ ಸಭೆ ನಡೆಸಬಹುದು. ಜತೆಗೆ, ಎಲ್ಲ ವಿಭಾಗಗಳ ತಜ್ಞರು ಸಮಿತಿಯಲ್ಲಿದ್ದು ಸೂಕ್ತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಸಮಿತಿಯಲ್ಲಿರುವ ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡರು.

ಮಂಜುನಾಥ ಲಘುಮೇನಹಳ್ಳಿ
Advertisement

Udayavani is now on Telegram. Click here to join our channel and stay updated with the latest news.

Next