ಲಕ್ನೋ : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಕೈಕೆಳಗಿನ ನಿರ್ದಿಷ್ಟ ಜಾತಿಯ ಪೊಲೀಸ್ ಅಧಿಕಾರಿಗಳಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ 2010ರ ಬ್ಯಾಚಿನ ಐಪಿಎಸ್ ಅಧಿಕಾರಿ ಹಿಮಾಂಶು ಕುಮಾರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಯಾದವ್ ಸರ್‌ನೇಮ್ ಹೊಂದಿರುವ ಪೊಲೀಸ್ ಅಧಿಕಾರಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕಿರುಕುಳ ಕೊಟ್ಟು ಸತಾಯಿಸುತ್ತಿದ್ದಾರೆ ಎಂದು ಹಿಮಾಂಶು ಕುಮಾರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟೀಕಿಸಿದ್ದರು. ಆ ವಿವಾದಾತ್ಮಕ ಟ್ವೀಟ್ ವೈರಲ್ ಆಗುತ್ತಲೇ ಅವರು ಅದನ್ನು ತೆಗೆದುಹಾಕಿದ್ದರು. ಇದೀಗ ಶಿಸ್ತು ಕ್ರಮದ ಅಂಗವಾಗಿ ಹಿಮಾಂಶು ಅವರನ್ನು ಸಸ್ಪೆಂಡ್ ಮಾಡಲಾಗಿದ್ದು ಉತ್ತರಪ್ರದೇಶ ಪೊಲೀಸ್ ದಳ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಕಳೆದ ಮಾರ್ಚ್ 22ರಂದು ಹಿಮಾಂಶು ಅವರು ಮಾಡಿದ್ದ ಟ್ವೀಟ್ ಹೀಗಿತ್ತು : ಯಾದವ್ ಸರ್‌ನೇಮ್ ಹೊಂದಿರುವ ಎಲ್ಲ ಪೊಲೀಸ್ ಸಿಬಂದಿಗಳನ್ನು ಸಸ್ಪೆಂಡ್ ಮಾಡುವಲ್ಲಿ ಇಲ್ಲವೇ ರಿಸರ್ವ್ ಲೈನ್ಸ್‌ಗೆ ಕಳುಹಿಸುವಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಭರದಿಂದ ನಿರತರಾಗಿದ್ದಾರೆ’.
ಇನ್ನೊಂದು ಟ್ವೀಟ್‌ನಲ್ಲಿ ಹಿಮಾಂಶು ಅವರು “ಜಾತಿ ಹೆಸರಿನಲ್ಲಿ ಜನರನ್ನು ಶಿಕ್ಷಿಸುವುದಕ್ಕೆ ಡಿಜಿಪಿ ಕಾರ್ಯಾಲಯ ಯಾಕೆ ಅಧಿಕಾರಿಗಳನ್ನು ಬಲವಂತಪಡಿಸುತ್ತಿದೆ’ ಎಂದು ಹೇಳಿದ್ದರು.
ಈ ಎರಡೂ ಟ್ವೀಟ್‌ಗಳ ಬಳಿಕ ಹಿಮಾಂಶು ಅವರು, “ನನ್ನ ಟ್ವೀಟ್‌ನ್ನು ಕೆಲ ಜನರು ಅಪಾರ್ಥ ಮಾಡಿಕೊಂಡಿದ್ದಾರೆ; ನಾನು ಸರಕಾರದ ಕ್ರಮವನ್ನು ಬೆಂಬಲಿಸುತ್ತೇನೆ’ ಎಂದಿದ್ದರು.