Advertisement

Gujarat-Chennai ಕ್ವಾಲಿಫೈಯರ್‌ ಕಾದಾಟ:  ಇಂದು ಚೆನ್ನೈ ಅಂಗಳದಲ್ಲಿ ಮೇಲಾಟ

07:43 AM May 23, 2023 | Team Udayavani |

ಚೆನ್ನೈ: ಆರ್‌ಸಿಬಿ ನಿರ್ಗಮನದೊಂದಿಗೆ ಈ ಬಾರಿಯ ಐಪಿಎಲ್‌ ಲೀಗ್‌ ಸ್ಪರ್ಧೆಗೆ ತೆರೆ ಬಿದ್ದಿದೆ. 70 ಪಂದ್ಯಗಳು ರೋಚಕವಾಗಿಯೇ ನಡೆದಿವೆ. ಕ್ರಿಕೆಟ್‌ ಪ್ರೇಮಿಗಳಿಗೆ ಧಾರಾಳ ರಂಜನೆ ಲಭಿಸಿದೆ. ಸೋಮವಾರದ ವಿರಾಮದ ಬಳಿಕ ಪ್ಲೇ ಆಫ್ ಸ್ಪರ್ಧೆ ಗಳು ಕಾವೇರಿಸಿಕೊಳ್ಳಲಿವೆ.

Advertisement

ಲೀಗ್‌ ಹಂತದಲ್ಲಿ ಮೊದಲೆರಡು ಸ್ಥಾನ ಅಲಂಕರಿಸಿದ ಗುಜರಾತ್‌ ಟೈಟಾನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಮಂಗಳವಾರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೆಣಸಲಿವೆ. ಗೆದ್ದವರು ನೇರವಾಗಿ ಫೈನಲ್‌ ಪ್ರವೇಶಿಸಲಿದ್ದಾರೆ. ಸೋತವರಿಗೆ ಎಂದಿನಂತೆ ಇನ್ನೊಂದು ಅವಕಾಶವಿದೆ.

ಬುಧವಾರ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಎಲಿಮಿನೇಟರ್‌ ಪಂದ್ಯ ಏರ್ಪಡಲಿದೆ. ಇಲ್ಲಿ ಸೋತ ತಂಡ ಕೂಟದಿಂದ ನಿರ್ಗಮಿಸಲಿದೆ. ಈ ಎರಡೂ ಪಂದ್ಯಗಳ ತಾಣ ಚೆನ್ನೈ.

ಗುಜರಾತ್‌ 3-0 ಮುನ್ನಡೆ
ಗುಜರಾತ್‌ ಟೈಟಾನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಈ ಸೀಸನ್‌ನ ಉದ್ಘಾಟನ ಪಂದ್ಯದಲ್ಲಿ ಎದು ರಾಗಿದ್ದವು. ಅಹ್ಮದಾಬಾದ್‌ನಲ್ಲಿ ನಡೆದ ಈಮುಖಾಮುಖಿಯಲ್ಲಿ ಗುಜರಾತ್‌ 5 ವಿಕೆಟ್‌ಗಳಿಂದ ಧೋನಿ ಪಡೆಯನ್ನು ಮಗುಚಿತ್ತು. ಇದರೊಂದಿಗೆ ಚೆನ್ನೈ ವಿರುದ್ಧ ಆಡಿದ ಎಲ್ಲ 3 ಪಂದ್ಯ ಗಳಲ್ಲೂ ಜಯ ಸಾಧಿಸಿದ ಹಿರಿಮೆ ಗುಜರಾತ್‌ ತಂಡದ್ದಾಯಿತು. ಇದೀಗ ಪಾಂಡ್ಯ ಪಡೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಧೋನಿ ಬಳಗಕ್ಕೆ ಉತ್ತಮ ಅವಕಾಶವೊಂದ ಲಭಿಸಿದೆ. ಪಂದ್ಯ ಚೆನ್ನೈಯಲ್ಲಿ ನಡೆಯುವುದರಿಂದ ಧೋನಿಟೀಮ್‌ಗೆ ಲಾಭವಾದೀತು ಎಂಬು ದೊಂದು ಲೆಕ್ಕಾಚಾರ.

ಚೆನ್ನೈ 14 ಪಂದ್ಯಗಳಲ್ಲಿ ಎಂಟನ್ನು ಗೆದ್ದು ದ್ವಿತೀಯ ಸ್ಥಾನಿಯಾಗಿತ್ತು. ಆದರೆ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಮಿಶ್ರ ಫ‌ಲ ಅನುಭವಿಸಿತ್ತು. ಆಡಿದ 7 ಪಂದ್ಯಗಳಲ್ಲಿ ಐದನ್ನು ಗೆದ್ದು ಮೂರರಲ್ಲಿ ಸೋಲನುಭವಿಸಿತ್ತು. ಸತತ 2 ಗೆಲುವು ಸಾಧಿಸಿದ್ದು ಒಮ್ಮೆ ಮಾತ್ರ. ಕೋಲ್ಕತಾ ವಿರುದ್ಧ ಇಲ್ಲಿ ಆಡಿದ ಕೊನೆಯ ಪಂದ್ಯವನ್ನು 6 ವಿಕೆಟ್‌ಗಳಿಂದ ಕಳೆದುಕೊಂಡಿತ್ತು.

Advertisement

ಗುಜರಾತ್‌ ತಂಡ ಚೆನ್ನೈಯಲ್ಲಿ ಆಡುತ್ತಿರುವುದು ಇದೇ ಮೊದಲು. ಹೀಗಾಗಿ “ಎಲ್ಲೋ ಆರ್ಮಿ’ ಫ್ಯಾನ್ಸ್‌ ಸಮ್ಮುಖದಲ್ಲಿ ಪಾಂಡ್ಯ ಪಡೆ ಎಂಥ ಪ್ರದರ್ಶನ ನೀಡಬಹುದು ಎಂಬ ಕುತೂಹಲ ಇದ್ದೇ ಇದೆ.

ಸಮಬಲದ ತಂಡಗಳು
ಮೇಲ್ನೋಟಕ್ಕೆ ಚೆನ್ನೈ ಮತ್ತು ಗುಜರಾತ್‌ ಸಮಬಲದ ತಂಡಗಳಾಗಿ ಗೋಚರಿಸುತ್ತಿವೆ. ಎರಡೂ ತಂಡಗಳ ನಾಯಕತ್ವ ಬಲಿಷ್ಠವಾಗಿದೆ. ಆಯ್ಕೆ ಪ್ರಕ್ರಿಯೆ ಸಮತೋಲನದಿಂದ ಕೂಡಿದೆ. ಕೊನೆಯ ನಿಮಿಷದ ತನಕ ಹೋರಾಡುವ ಕೆಚ್ಚು ಎರಡೂ ತಂಡಗಳ ವೈಶಿಷ್ಟé. ಹೀಗಾಗಿ ಸ್ಪರ್ಧೆ ಅತ್ಯಂತ ರೋಚಕವಾಗಿ ಸಾಗುವುದರಲ್ಲಿ ಅನುಮಾನವಿಲ್ಲ.

ಚೆನ್ನೈ ಆರಂಭಿಕರಾದ ಕಾನ್ವೇ- ಗಾಯಕ್ವಾಡ್‌ ಉತ್ತಮ ಫಾರ್ಮ್ ನಲ್ಲಿದ್ದಾರೆ. ರಹಾನೆ, ದುಬೆ ಮತ್ತಿಬ್ಬರು ಅಪಾಯಕಾರಿ ಆಟಗಾರರು. ದುಬೆ ಈಗಾಗಲೇ 33 ಸಿಕ್ಸರ್‌ ಸಿಡಿಸಿ ಪ್ರಚಂಡ ಫಾರ್ಮ್ ತೆರೆದಿರಿಸಿದ್ದಾರೆ. ಆದರೆ ತಂಡದ ಕೆಳ ಕ್ರಮಾಂಕದ ಬ್ಯಾಟಿಂಗ್‌ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಅಲಿ, ರಾಯುಡು, ಜಡೇಜ ಮತ್ತು ಧೋನಿ ಸಿಡಿದು ನಿಲ್ಲಬೇಕಾದ ಅಗತ್ಯ ಎಂದಿಗಿಂತ ಹೆಚ್ಚಿದೆ.

ಚೆನ್ನೈ ಬೌಲಿಂಗ್‌ ವೈವಿಧ್ಯಮಯ. ಲಂಕೆಯ ತೀಕ್ಷಣ ಮತ್ತು ಪತಿರಣ ಸೇರಿಕೊಂಡು ಎದುರಾಳಿಯನ್ನು ಕೆಡವಲು ರಣವ್ಯೂಹ ಹೆಣೆಯುವಲ್ಲಿ ನಿಷ್ಣಾತರು. ದೀಪಕ್‌ ಚಹರ್‌, ತುಷಾರ್‌ ದೇಶಪಾಂಡೆ, ಜಡೇಜ ಕೂಡ ಅಪಾಯಕಾರಿ ಆಗಬಲ್ಲರು ಗಿಲ್‌ ಫ್ಯಾಕ್ಟರ್‌ ಸತತ ಎರಡು ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿರುವ ಶುಭಮನ್‌ ಗಿಲ್‌ ಗುಜರಾತ್‌ ಪಾಲಿನ ದೊಡ್ಡ ಬ್ಯಾಟಿಂಗ್‌ ಅಸ್ತ್ರವಾಗಿದ್ದಾರೆ. ಆದರೆ ಸಾಹಾ ಇವರಿಗೆ ಅಷ್ಟು ಸೂಕ್ತ ಜತೆಗಾರನಾಗಿಲ್ಲ. ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಕಾಡಿದ ವಿಜಯ್‌ ಶಂಕರ್‌, ಹಾರ್ದಿಕ್‌ ಪಾಂಡ್ಯ, ಡೇವಿಡ್‌ ಮಿಲ್ಲರ್‌, ಅಭಿನವ್‌ ಮನೋಹಾರ್‌, ಸಾಯಿ ಸುದರ್ಶನ್‌, ರಾಹುಲ್‌ ತೆವಾಟಿಯ, ರಶೀದ್‌ ಖಾನ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ವೈವಿಧ್ಯಮಯ.

ಬೌಲಿಂಗ್‌ ವಿಭಾಗ ಶಮಿ, ರಶೀದ್‌ ಖಾನ್‌ ಮತ್ತು ನೂರ್‌ ಅಹ್ಮದ್‌ ಅವರನ್ನು ನೆಚ್ಚಿಕೊಂಡಿದೆ. ಶಮಿ ಮತ್ತು ರಶೀದ್‌ ಈಗಾಗಲೇ ತಲಾ 24 ವಿಕೆಟ್‌ ಬೇಟೆಯಾಡಿದ್ದಾರೆ. ಮೋಹಿತ್‌ ಶರ್ಮ ಬದಲು ಶಿವಂ ಮಾವಿ, ದಸುನ್‌ ಶಣಕ ಬದಲು ಜೋಶುವ ಲಿಟ್ಲ ಆಡಲಿಳಿಯಬಹುದು.

ಆದರೆ ಚೆನ್ನೈ ಟ್ರ್ಯಾಕ್‌ ಈವರೆಗೆ ಅನಿಶ್ಚಿತವಾಗಿ ವರ್ತಿಸುತ್ತ ಬಂದಿದೆ. ಕೆಲವೊಮ್ಮೆ ಬೌಲರ್‌ಗಳಿಗೆ, ಕೆಲವು ಸಲ ಬ್ಯಾಟರ್‌ಗಳಿಗೆ ನೆರವು ನೀಡಿದೆ. ಕ್ವಾಲಿಫೈಯರ್‌ ಪಂದ್ಯದ ಪಿಚ್‌ ಹೇಗಿ ದ್ದೀತು ಎಂಬ ಕುತೂಹಲ ಸಹಜ.

ಪ್ಲೇ ಆಫ್ ತಂಡಗಳ ಸ್ವಾರಸ್ಯ!
– ಕ್ವಾಲಿಫೈಯರ್‌ನಲ್ಲಿ ಸೆಣಸಲಿರುವ ಚೆನ್ನೈ ತಂಡ ಗುಜರಾತ್‌ ವಿರುದ್ಧ ಆಡಿದ ಎಲ್ಲ ಮೂರು ಪಂದ್ಯಗಳಲ್ಲಿ ಸೋತಿದೆ.
– ಎಲಿಮಿನೇಟರ್‌ನಲ್ಲಿ ಆಡಲಿರುವ ಮುಂಬೈ ತಂಡ ಲಕ್ನೋ ವಿರುದ್ಧ ಎಲ್ಲ ಮೂರು ಪಂದ್ಯಗಳಲ್ಲೂ ಮುಗ್ಗರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next