Advertisement

ಐಪಿಎಲ್‌: ಪಂಜಾಬ್‌ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಗೆ ಭರ್ಜರಿ ಗೆಲುವು

10:34 PM Apr 20, 2022 | Team Udayavani |

ಮುಂಬೈ: ಕೊರೊನಾ ಆತಂಕದ ನಡುವೆಯೇ ಬಿಗಿಯಾದ ಬೌಲಿಂಗ್‌ ದಾಳಿ ಸಂಘಟಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 20 ಓವರ್‌ಗಳಲ್ಲಿ ಕೇವಲ 115 ರನ್ನಿಗೆ ಹಿಡಿದು ನಿಲ್ಲಿಸಿತು. ಮಾತ್ರವಲ್ಲ 9 ವಿಕೆಟ್‌ಗಳಿಂದ ಭರ್ಜರಿ ಗೆಲುವನ್ನೂ ಸಾಧಿಸಿತು.

Advertisement

ಸಣ್ಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕೇವಲ 10.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 119 ರನ್‌ ಬಾರಿಸಿತು.

ಡೆಲ್ಲಿ ಪರ ಆರಂಭಿಕ ಡೇವಿಡ್‌ ವಾರ್ನರ್‌ ಮತ್ತೊಮ್ಮೆ ಸ್ಫೋಟಿಸಿದರು. ಅವರು 30 ಎಸೆತಗಳಲ್ಲಿ ಅಜೇಯ 60 ರನ್‌ ಗಳಿಸಿದರು. ಇದರಲ್ಲಿ 10 ಬೌಂಡರಿ, 1 ಸಿಕ್ಸರ್‌ ಸೇರಿತ್ತು. ಪೃಥ್ವಿ ಶಾ ಆಕ್ರಮಕ 41 ರನ್‌ ಗಳಿಸಿದರು.

ಪಂಜಾಬ್‌ ಕನಿಷ್ಠ ಮೊತ್ತ: ಮೊದಲು ಬ್ಯಾಟಿಂಗ್‌ ಪಂಜಾಬ್‌ ಇಷ್ಟೊಂದು ಸಣ್ಣ ಮೊತ್ತಕ್ಕೆ ಕುಸಿದದ್ದು ಅಚ್ಚರಿಯಾಗಿ ಕಂಡಿದೆ. ಇದು ಈ ಐಪಿಎಲ್‌ನ ಕನಿಷ್ಠ ಸ್ಕೋರ್‌ ಆಗಿದೆ. ಆ ತಂಡದಲ್ಲಿ ಸಾಲುಸಾಲು ಆಕ್ರಮಕ ಬ್ಯಾಟಿಗರಿದ್ದ ನಡುವೆಯೂ ಕುಸಿದ ಪ್ರಶ್ನಾರ್ಹವಾಗಿದೆ.

ಪಂಜಾಬ್‌ ಉತ್ತಮ ಆರಂಭ ಪಡೆಯುವ ಸಿದ್ಧತೆಯಲ್ಲಿರುವಾಗಲೇ ದಿಢೀರ್‌ ಕುಸಿತಕ್ಕೆ ಸಿಲುಕಿತು. ಲಲಿತ್‌ ಯಾದವ್‌, ಮುಸ್ತಫಿಜುರ್‌ ರೆಹಮಾನ್‌, ಅಕ್ಷರ್‌ ಪಟೇಲ್‌ ಪವರ್‌ ಪ್ಲೇ ವೇಳೆ ತಮ್ಮ ಪವರ್‌ ತೋರ್ಪಡಿಸಿದರು. ಪರಿಣಾಮ, 47 ರನ್ನಿಗೆ 3 ವಿಕೆಟ್‌ ಉರುಳಿತು.

Advertisement

ಮೊದಲು ಪೆವಿಲಿಯನ್‌ ಸೇರಿಕೊಂಡವರು ಶಿಖರ್‌ ಧವನ್‌. ಎಡಗೈ ಆರಂಭಿಕನ ಗಳಿಕೆ ಕೇವಲ 9 ರನ್‌. ನಾಯಕ ಅಗರ್ವಾಲ್‌ ಭರವಸೆಯ ಬ್ಯಾಟಿಂಗ್‌ ತೋರ್ಪಡಿಸಿದರೂ ಕೇವಲ 24 ರನ್‌ ಮಾಡಿ ಮುಸ್ತಫಿಜುರ್‌ಗೆ ಬೌಲ್ಡ್‌ ಆದರು (15 ಎಸೆತ, 4 ಬೌಂಡರಿ). ಲಿಯಮ್‌ ಲಿವಿಂಗ್‌ಸ್ಟೋನ್‌ ಈ ಬಾರಿ ತಂಡದ ನೆರವಿಗೆ ನಿಲ್ಲಲಿಲ್ಲ. ಅಕ್ಷರ್‌ ಪಟೇಲ್‌ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋಗಿ ಎರಡೇ ರನ್ನಿಗೆ ಸ್ಟಂಪ್ಡ್ ಆದರು.

ಪವರ್‌ ಪ್ಲೇ ಮುಗಿದೊಡನೆಯೇ ಮತ್ತೋರ್ವ ಅಪಾಯಕಾರಿ ಆಟಗಾರ ಜಾನಿ ಬೇರ್‌ಸ್ಟೊ ಅವರನ್ನು ಖಲೀಲ್‌ ಅಹ್ಮದ್‌ ವಾಪಸ್‌ ಕಳುಹಿಸಿದರು. ಇಂಗ್ಲೆಂಡ್‌ ಕ್ರಿಕೆಟಿಗನ ಗಳಿಕೆ ಕೇವಲ 9 ರನ್‌. ಅರ್ಧಹಾದಿ ಮುಗಿಯುವ ವೇಳೆ ಪಂಜಾಬ್‌ 4 ವಿಕೆಟಿಗೆ 77 ರನ್‌ ಗಳಿಸಿತ್ತು. ಇದೇ ಸರಾಸರಿಯಲ್ಲಿ ಸಾಗಿದ್ದರೆ ತಂಡದ ಮೊತ್ತವನ್ನು ನೂರೈವತ್ತಕ್ಕೆ ಏರಿಸಬಹುದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಡೆಲ್ಲಿ ಬೌಲಿಂಗ್‌ ಇನ್ನಷ್ಟು ಘಾತಕಗೊಂಡಿತು. ಕೇವಲ 38 ರನ್‌ ನೀಡಿ ಪಂಜಾಬ್‌ನ ಉಳಿದ ಆರೂ ವಿಕೆಟ್‌ಗಳನ್ನು ಹಾರಿಸಿತು!

ಪಂಜಾಬ್‌ ಸರದಿಯಲ್ಲಿ 32 ರನ್‌ ಮಾಡಿದ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮ ಅವರದೇ ಅತ್ಯಧಿಕ ಗಳಿಕೆ. 23 ಎಸೆತ ಎದುರಿಸಿದ ಅವರು 5 ಬೌಂಡರಿ ಹೊಡೆದರು. ಅನಂತರದ ಹೆಚ್ಚಿನ ಗಳಿಕೆ ಅಗರ್ವಾಲ್‌ ಆವರದು (24). ಡಬಲ್‌ ಫಿಗರ್‌ ತಲುಪಿದ ಉಳಿದಿಬ್ಬರೆಂದರೆ ಶಾರುಖ್‌ ಖಾನ್‌ ಮತ್ತು ರಾಹುಲ್‌ ಚಹರ್‌. ಇಬ್ಬರೂ ತಲಾ 12 ರನ್‌ ಹೊಡೆದರು. ಪಂಜಾಬ್‌ ಸರದಿಯ ಏಕೈಕ ಸಿಕ್ಸರ್‌ ರಾಹುಲ್‌ ಚಹರ್‌ ಅವರಿಂದ ಸಿಡಿಯಿತು. ಶಾರ್ದೂಲ್ ಠಾಕೂರ್ ಹೊರತುಪಡಿಸಿ ಡೆಲ್ಲಿ ತಂಡದ ಉಳಿದೆಲ್ಲ ಬೌಲರ್ ವಿಕೆಟ್‌ ಕೀಳುವಲ್ಲಿ ಯಶಸ್ಸು ಸಾಧಿಸಿದರು. ಖಲೀಲ್‌ ಅಹ್ಮದ್‌, ಲಲಿತ್‌ ಯಾದವ್‌, ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌ ಕಿಂಗ್ಸ್‌ 20 ಓವರ್‌, 115/10 (ಜಿತೇಶ್‌ ಶರ್ಮ 32, ಅಕ್ಷರ್‌ ಪಟೇಲ್‌ 10ಕ್ಕೆ 2, ಖಲೀಲ್‌ ಅಹ್ಮದ್‌ 21ಕ್ಕೆ 2). ಡೆಲ್ಲಿ 10.3 ಓವರ್‌, 119/1 (ಡೇವಿಡ್‌ ವಾರ್ನರ್‌ 60, ಪೃಥ್ವಿ ಶಾ 41, ರಾಹುಲ್‌ ಚಹರ್‌ 21ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next