ನವದೆಹಲಿ: ಈ ಬಾರಿ ಐಪಿಎಲ್ ನಡೆಯುತ್ತದೆಯೋ- ಇಲ್ಲವೋ ಎಂಬ ಡೋಲಾಯಮಾನ ಸ್ಥಿತಿಯ ನಡುವೆಯೇ ಒಂದು ವೇಳೆ ಪಂದ್ಯ ಆರಂಭವಾದರೂ ಏಪ್ರಿಲ್ 15 ರವರೆಗೂ ಯಾವುದೇ ವಿದೇಶಿ ಆಟಗಾರರು ಪಂದ್ಯಾಟದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಮಾಧ್ಯಮದ ವರದಿಗಳು ತಿಳಿಸಿವೆ
ಹೌದು, ಈಗಾಗಲೇ ಭಾರತದಲ್ಲಿ ಕೊರೊನಾ ವೈರಸ್ ಕಬಂಧಬಾಹುವನ್ನು ಚಾಚಿರುವುದರಿಂದ ಸರ್ಕಾರ, ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಈ ಕಾರಣದಿಂದ ವಿದೇಶಿ ಆಟಗಾರರು ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆಯೆಂದು ಮಾಧ್ಯಮ ತಿಳಿಸಿದೆ.
ವಿದೇಶಿ ಆಟಗಾರರು ವಾಣಿಜ್ಯ (ಬ್ಯುಸಿನೆಸ್) ವೀಸಾದಡಿಯಲ್ಲಿ ಬರುವುದರಿಂದ, ಸರ್ಕಾರದ ಆದೇಶದ ಪ್ರಕಾರ ಏಪ್ರಿಲ್ 15ರ ನಂತರವೇ ಭಾರತಕ್ಕೆ ಆಗಮಿಸಬೇಕಾಗುತ್ತದೆ. ಆದರೇ ಸರ್ಕಾರ ತನ್ನ ಆದೇಶವನ್ನು ಇನ್ನೂ ಕೆಲವು ದಿನಗಳ ಮುಂದೂಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತ ಸರ್ಕಾರ ಕೆಲವು ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಿ, ರಾಜತಾಂತ್ರಿಕ, ಆಡಳಿತಾತ್ಮಕ, ವಿಶ್ವಸಂಸ್ಥೆ ಅಥವಾ ಇನ್ನಿತರ ಅಂತಾರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ, ಯೋಜನೆಗೆ ಸಂಬಂಧಿಸಿದ ವೀಸಾಗಳಿಗೆ ವಿನಾಯಿತಿ ನೀಡಿದೆ.
ಮಾರ್ಚ್ 14ರಂದು ಮುಂಬೈ ನಲ್ಲಿ ಬಿಸಿಸಿಐ ಆಡಳಿತ ಮಂಡಳಿಗಳ ಸಭೆ ನಡೆಯಲಿದ್ದು ಇದರಲ್ಲಿ ಈ ಭಾರೀ ಐಪಿಎಲ್ ಪಂದ್ಯಾಟ ನಡೆಸಬೇಕೆ-ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.