ಅಹಮದಾಬಾದ್: ರವಿವಾರವೇ ವರ್ಣರಂಜಿತವಾಗಿ ಅಂತ್ಯ ಕಾಣಬೇಕಿದ್ದ 2023ರ ಐಪಿಎಲ್ ಕೂಟ ಒಂದು ದಿನ ಮುಂದಕ್ಕೆ ಹೋಗಿದೆ. ಅಹಮದಾಬಾದ್ ನಲ್ಲಿ ರವಿವಾರ ಬಿಡದೆ ಕಾಡಿದ ವರುಣನಿಂದಾಗಿ ಐಪಿಎಲ್ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಲಾಗಿದೆ. ಸೋಮವಾರ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.
ರವಿವಾರ ಸಂಜೆ ಅಹಮದಾಬಾದ್ ನಲ್ಲಿ ಮಳೆ ಬರುತ್ತಲೇ ಇತ್ತು. ಒಮ್ಮೆ ನಿಂತು ಟಾಸ್ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮತ್ತೆ ಮಳೆ ಧಾರಾಕಾರವಾಗಿ ಸುರಿಯಿತು. ನಂತರ ಪಂದ್ಯ ನಡೆಯಲು ಸಾಧ್ಯವಿಲ್ಲ ಎಂದು ಪಂದ್ಯದ ಅಧಿಕಾರಿಗಳು ತೀರ್ಮಾನಿಸಿದರು. ಮಧ್ಯರಾತ್ರಿ 12.06 ಕಟ್ ಆಫ್ ಸಮಯವಾಗಿತ್ತು ಆದರೆ ಮಳೆ ಬಿಡುವ ಲಕ್ಷಣ ಕಾಣಿಸದ ಕಾರಣದಿಂದ ಪಂದ್ಯವನ್ನು 10:54 ಕ್ಕೆ ರದ್ದುಗೊಳಿಸಲಾಯಿತು.
ಪಂದ್ಯವನ್ನು ಮೀಸಲು ದಿನ ಅಂದರೆ ಸೋಮವಾರ (ಮೇ.29)ಕ್ಕೆ ಮುಂದೂಡಲಾಯಿತು. ಗುಜರಾತ್ ಕೋಚ್ ಆಶೀಷ್ ನೆಹ್ರಾ ಮತ್ತು ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್ ಪರಸ್ಪರ ಕೈಕುಲುಕಿಕೊಂಡರು. ಸೋಮವಾರ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಹವಾಮಾನ ವರದಿ ಹೇಗಿದೆ?
Related Articles
ಆಕ್ಯುವೆದರ್ ಪ್ರಕಾರ ಸೋಮವಾರ ಸಂಜೆಯೂ ಅಹಮದಾಬಾದ್ ನಲ್ಲಿ ಮಳೆಯಾಲಿದೆ. ಸಂಜೆ 4ರಿಂದ 6 ಗಂಟೆಯವರೆಗೆ ಮಳೆ ಬರುವ ಸಾಧ್ಯತೆಯಿದೆ. ಆದರೆ 7 ಗಂಟೆಯ ಬಳಿಕ ಮಳೆ ಬರುವ ಸಾಧ್ಯತೆಯಿಲ್ಲ. ಒಂದು ವೇಳೆ ಟಾಸ್ ವಿಳಂಬವಾದರೂ ತಲಾ 20 ಓವರ್ ಗಳ ಪಂದ್ಯ ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಫೈನಲ್ ವಾಶ್ ಔಟ್ ಆದರೇ?
ಮೀಸಲು ದಿನದ ಆಟದ ಪರಿಸ್ಥಿತಿಗಳು ಬಹುಮಟ್ಟಿಗೆ ಒಂದೇ ಆಗಿರುತ್ತವೆ. ಪೂರ್ಣ 20-ಓವರ್ ಆಟಕ್ಕೆ ಕಟ್ ಆಫ್ ಸಮಯವು 9:45 ಆಗಿದೆ. ಐದು ಓವರ್‌ಗಳ ಪಂದ್ಯ ನಡೆಯಲು, ಕಟ್ ಆಫ್ ಸಮಯ 11:56. ಅದು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಗೆ ಕಟ್ ಆಫ್ ಸಮಯ ಮಧ್ಯರಾತ್ರಿ 01:20.
ಒಂದು ವೇಳೆ ಇಡೀ ಪಂದ್ಯವನ್ನು ರದ್ದುಪಡಿಸಿದರೆ, ಪಾಯಿಂಟ್ ಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆಗ ಸಹಜವಾಗಿ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಉಳಿಸಿಕೊಳ್ಳಲಿದೆ.