Advertisement

ಐಪಿಎಲ್‌ ರದ್ದು ಮಾಡಿ: ಕೇಂದ್ರಕ್ಕೆ ರಾಜ್ಯ ಮನವಿ

12:33 PM Mar 12, 2020 | sudhir |

ಬೆಂಗಳೂರು: ಈ ಬಾರಿಯ ಐಪಿಎಲ್‌ ರದ್ದು ಮಾಡಿ ಎಂದು ಮಹಾರಾಷ್ಟ್ರ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ, ಕರ್ನಾಟಕ ಸರಕಾರವೂ ಅದೇ ದಾರಿ ಹಿಡಿದಿದೆ. ಕೊರೊನಾ ವೈರಸ್‌ ಹೆಚ್ಚಾಗುತ್ತಿರುವುದರಿಂದ ಕೂಟವನ್ನು ಮುಂದೂಡಿ ಅಥವಾ ರದ್ದು ಮಾಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

Advertisement

ಒಂದು ವೇಳೆ ಕೇಂದ್ರ ಸರಕಾರ ಐಪಿಎಲ್‌ ಸಂಘಟಿಸಲು ಅನುಮತಿ ನೀಡಿದರೂ ಬೆಂಗಳೂರಿನಲ್ಲಿ ಮಾತ್ರ ಪಂದ್ಯ ನಡೆಯುವುದು ಅನುಮಾನ. ಮಾ. 29ರಿಂದ ಕೂಟವನ್ನು ನಡೆಸಲು ಸಾಧ್ಯವಿಲ್ಲ ಎಂದಾದರೆ, ಈ ವರ್ಷ ಮತ್ತೆ ಐಪಿಎಲ್‌ ನಡೆಸಲು ಸಾಧ್ಯವಾಗುವುದು ಅನುಮಾನ! ಅಂದರೆ ಬಹುತೇಕ ಈ ಬಾರಿಯ ಆವೃತ್ತಿ ರದ್ದಾಗುವ ಸಾಧ್ಯತೆಯಿದೆ.

ಅಮೆರಿಕದಿಂದ ಹಿಂದಿರುಗಿದ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಸೋಂಕು ತಗುಲಿದ್ದು. ಅವರನ್ನೀಗ ಬೆಂಗಳೂರಿನ ರಾಜೀವ್‌ ಗಾಂಧಿ ಹೃದಯ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಇಡಲಾಗಿದೆ. ಟೆಕ್ಕಿಯ ಸಂಪರ್ಕಕ್ಕೆ ಬಂದ 2,666 ವ್ಯಕ್ತಿಗಳನ್ನು ಪರಿಶೀಲನೆಯಲ್ಲಿಡಲಾಗಿದೆ. ಹಲವು ಐಟಿ ಕಂಪೆನಿಗಳ ಉದ್ಯೋಗಿಗಳು ತಾತ್ಕಾಲಿಕವಾಗಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ಇದನ್ನೆಲ್ಲ ಗಮನಿಸಿ, ಐಪಿಎಲ್‌ ಮುಂದೂಡಲು ರಾಜ್ಯ ಸರಕಾರ ಪತ್ರ ಬರೆದಿದೆ.
ದೇಶದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದ್ದರೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಾತ್ರ ಐಪಿಎಲ್‌ ಅನ್ನು ನಡೆಸಿಯೇ ಸಿದ್ಧ ಎಂಬ ಧೋರಣೆ ತಳೆದಿದ್ದಾರೆ. ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಥರ್ಮಲ್‌ ಸ್ಕ್ಯಾನಿಂಗ್‌ ಕೂಡ ಮಾಡುತ್ತೇವೆ ಎಂದು ಬಿಸಿಸಿಐ ಹೇಳಿದೆ. ಸದ್ಯ ಅಂತಿಮ ನಿರ್ಧಾರ ಕೇಂದ್ರದ ಮುಂದಿದೆ. ಒಂದುವೇಳೆ ಬಿಸಿಸಿಐ ತೆಗೆದುಕೊಂಡಿರುವ ಮುನ್ನಚ್ಚರಿಕೆ ಕ್ರಮಗಳು ತೃಪ್ತಿಕರವೆನ್ನಿಸಿದರೆ, ಕೇಂದ್ರ ಅನುಮತಿ ನೀಡಲೂಬಹುದು. ಐಪಿಎಲ್‌ ಈ ತಿಂಗಳ ಅಂತ್ಯದಲ್ಲಿ ಆರಂಭವಾಗಬೇಕಾಗಿದೆ.

ಬೆಂಗಳೂರು ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ತಾಣ. ಚಿನ್ನಸ್ವಾಮಿ ಮೈದಾನದಲ್ಲಿ ಬೆಂಗಳೂರು ಆತಿಥ್ಯದ ಪಂದ್ಯಗಳು ನಡೆಯಲಿವೆ. ಆದರೆ ಸರಕಾರ ಬೆಂಗಳೂರಿನಲ್ಲಿ ಐಪಿಎಲ್‌ ಪಂದ್ಯ ಆಯೋಜಿಸಲು ಅವಕಾಶ ನೀಡಿದಿದ್ಧರೆ ಆರ್‌ಸಿಬಿಯ ಪಂದ್ಯಗಳನ್ನು ಬೇರೆ ಕಡೆ ಆಯೋಜಿಸಬೇಕಾಗಿದೆ.

Advertisement

ಇದಕ್ಕೂ ಮುನ್ನ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಥೋಪೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ಐಪಿಎಲ್‌ ಮುಂದೂಡಲು ಮನವಿ ಮಾಡಿದ್ದರು. ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುವ ಜಾಗಗಳಲ್ಲಿ ಕೊರೊನಾ ತಗಲುವ ಸಾಧ್ಯತೆ ಹೆಚ್ಚು. ಆದ್ದರಿಂದ ಇಂತಹ ಕೂಟಗಳನ್ನು ಮುಂದೂಡಿದರೆ ಒಳಿತು ಎಂದು ಥೋಪೆ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next