Advertisement

ಫೆ. 18ರಂದು ನಡೆಯಲಿದೆ ಐಪಿಎಲ್‌ ಹರಾಜು

11:07 PM Jan 27, 2021 | Team Udayavani |

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ ಹರಾಜು ದಿನಾಂಕವನ್ನು ಘೋಷಿಸಲಾಗಿದೆ. ಇದೊಂದು “ಮಿನಿ ಹರಾಜು’ ಆಗಿದ್ದು, ಫೆ. 18ರಂದು ಚೆನ್ನೈಯಲ್ಲಿ ನಡೆಯಲಿದೆ ಎಂದು ಐಪಿಎಲ್‌ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಬಿಸಿಸಿಐ ಫೆ. 18ರ ದಿನಾಂಕವನ್ನು ನಿಗದಿಗೊಳಿಸಿದ ಒಂದೇ ವಾರದಲ್ಲಿ ಇದು ಅಧಿಕೃತಗೊಂಡಿದೆ.

Advertisement

ಆಗ ಭಾರತ-ಇಂಗ್ಲೆಂಡ್‌ ನಡುವಿನ ಮೊದಲೆರಡು ಟೆಸ್ಟ್‌ ಪಂದ್ಯಗಳು ಚೆನ್ನೈಯಲ್ಲಿ ಮುಗಿದಿರುತ್ತವೆ. ದ್ವಿತೀಯ ಟೆಸ್ಟ್‌ ಫೆ. 17ಕ್ಕೆ ಕೊನೆಗೊಳ್ಳಲಿದ್ದು, ಮರುದಿನವೇ ಹರಾಜು ನಡೆಯಲಿದೆ. ಈಗಾಗಲೇ ಆಟಗಾರರನ್ನು ಉಳಿಸಿಕೊಳ್ಳುವ ಹಾಗೂ ಕೈಬಿಡುವ ಪ್ರಕ್ರಿಯೆ ಮುಗಿದಿದ್ದು, ಫೆ. 4ಕ್ಕೆ “ಟ್ರೇಡಿಂಗ್‌’ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಈಗಾಗಲೇ ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ರಿಸ್‌ ಮಾರಿಸ್‌, ಆರನ್‌ ಫಿಂಚ್‌ ಸಹಿತ 57 ಆಟಗಾರರನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ. 139 ಕ್ರಿಕೆಟಿಗರನ್ನು ಉಳಿಸಿಕೊಂಡಿವೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಗರಿಷ್ಠ 53.20 ಕೋಟಿ ರೂ. ಮೊತ್ತದೊಂದಿಗೆ ಹರಾಜು ಅಂಗಳಕ್ಕೆ ಇಳಿಯಲಿದೆ. ಕೆಕೆಆರ್‌ ಮತ್ತು ಹೈದರಾಬಾದ್‌ ಕನಿಷ್ಠ 10.75 ಕೋಟಿ ರೂ. ಹೊಂದಿವೆ.

ಐಪಿಎಲ್‌ ಎಲ್ಲಿ? :

Advertisement

2021ರ ಐಪಿಎಲ್‌ ಪಂದ್ಯಾವಳಿ ಎಲ್ಲಿ, ಯಾವಾಗ ನಡೆಯಲಿದೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಇದನ್ನು ಭಾರತದಲ್ಲೇ ನಡೆಸಲು ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂಬುದಾಗಿ ಬಿಸಿಸಿಐ ಅಧ್ಯಕ್ಷ  ಗಂಗೂಲಿ ಹೇಳಿದ್ದಾರೆ.

ಫ್ರಾಂಚೈಸಿ ಮಾಲಕರಿಗೆ ಕ್ವಾರಂಟೈನ್‌ ಇಲ್ಲ :

ಫೆ. 18ರ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಐಪಿಎಲ್‌ ಫ್ರಾಂಚೈಸಿ ಮಾಲಕರಿಗೆ ಕ್ವಾರಂಟೈನ್‌ ಅಗತ್ಯವಿಲ್ಲ ಎಂಬುದಾಗಿ ಬಿಸಿಸಿಐ ತಿಳಿಸಿದೆ. ಆದರೆ ಹರಾಜಿನಲ್ಲಿ ಭಾಗವಹಿಸುವುದಕ್ಕಿಂತ 72 ಗಂಟೆಗಳ ಮೊದಲು ಎರಡು ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಫ‌ಲಿತಾಂಶ ಹೊಂದಿರಬೇಕೆಂದು ಸೂಚಿಸಿದೆ. ಈ ಕುರಿತು ಬಿಸಿಸಿಐ ಸಿಇಒ ಹೇಮಾಂಗ್‌ ಅಮೀನ್‌ ಎಲ್ಲ ಫ್ರಾಂಚೈಸಿ ಮಾಲಕರಿಗೆ ಇ-ಮೇಲ್‌ ಮೂಲಕ ಸೂಚನೆ ರವಾನಿಸಿದ್ದಾರೆ.

ಹರಾಜಿನ ವೇಳೆ ಫ್ರಾಂಚೈಸಿಗಳ ಕೇವಲ 13 ಸದಸ್ಯರಿಗಷ್ಟೇ ಪ್ರವೇಶಾವಕಾಶ ಇರುತ್ತದೆ. ಇದರಲ್ಲಿ 8 ಮಂದಿ “ಆಕ್ಷನ್‌ ಟೇಬಲ್‌’ನಲ್ಲಿ, ಉಳಿದ ಐವರು ಗ್ಯಾಲರಿಯಲ್ಲಿ ಕುಳಿತುಕೊಳ್ಳಬೇಕೆಂದು ಸೂಚಿಸಲಾಗಿದೆ.

ಟೈಟಲ್‌ ಸ್ಪಾನ್ಸರ್‌ ಯಾರು? :

ಈ ಬಾರಿಯ ಐಪಿಎಲ್‌ ಟೈಟಲ್‌ ಸ್ಪಾನ್ಸರ್‌ ಯಾರೆಂಬುದು ಇನ್ನೂ ನಿಗದಿಯಾಗಿಲ್ಲ. ಭಾರತ-ಚೀನ ನಡುವಿನ ಗಡಿ ಸಂಘರ್ಷ ತೀವ್ರಗೊಂಡಿದ್ದರಿಂದ ಕಳೆದ ವರ್ಷ “ವಿವೋ’ ಸ್ಪಾನ್ಸರ್‌ ಕೈಬಿಡಲಾಗಿತ್ತು. ಈ ಜಾಗಕ್ಕೆ “ಡ್ರೀಮ್‌ ಇಲೆವೆನ್‌’ ಪ್ರವೇಶ ಪಡೆದಿತ್ತು. ಈ ಒಪ್ಪಂದ ಡಿ. 31ಕ್ಕೆ ಕೊನೆಗೊಂಡಿದೆ. ಮತ್ತೆ ವಿವೋ ಕಾಣಿಸಿಕೊಂಡೀತೇ ಎಂಬ ಕುತೂಹಲವಿದೆ.

Advertisement

Udayavani is now on Telegram. Click here to join our channel and stay updated with the latest news.

Next