ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ದೂರಿ ಆರಂಭ ಪಡೆದಿದೆ. ಮೊದಲೆರಡು ದಿನದಲ್ಲಿ ಮೂರು ಪಂದ್ಯಗಳು ನಡೆದಿದ್ದು, ಕೂಟದ ರಂಗು ಹೆಚ್ಚಿಸಿದೆ.
ಈ ಬಾರಿಯ ಫೈನಲ್ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವುದಿಲ್ಲ ಎನ್ನುತ್ತಿದೆ ವರದಿ. ಬಿಸಿಸಿಐ ಮೂಲಗಳ ಪ್ರಕಾರ ಅಹಮದಾಬಾದ್ ನಲ್ಲಿ ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಪಂದ್ಯಗಳು ನಡೆಯಲಿದೆ. ಮತ್ತೊಂದು ಪ್ಲೇ ಆಫ್ ಪಂದ್ಯ ಮತ್ತು ಫೈನಲ್ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ.
ಕಳೆದ ವರ್ಷದ ಚಾಂಪಿಯನ್ ತಂಡದ ತವರಿನಲ್ಲಿ ಮೊದಲ ಮತ್ತು ಅಂತಿಮ ಪಂದ್ಯ ನಡೆಸುವ ಸಂಪ್ರದಾಯವನ್ನು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ನಡೆಸಿಕೊಂಡು ಬಂದಿರುವ ಕಾರಣ ಈ ಬಾರಿಯ ಐಪಿಎಲ್ ಫೈನಲ್ ಚೆನ್ನೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಮೇ 26ರಂದು ಐಪಿಎಲ್ ಫೈನಲ್ ನಡೆಯಲಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಬಿಸಿಸಿಐ ನೀಡಲಿದೆ.
ಈ ಬಾರಿ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಬಿಸಿಸಿಐ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಲೋಕಸಭಾ ಚುನಾವಣೆಯು ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಪಂದ್ಯಗಳ ಮುಂದಿನ ಪಟ್ಟಿ ಬಿಡುಗಡೆಯಾಗಲಿದೆ.