ಚೆನ್ನೈ: 17ನೇ ಸೀಸನ್ ನ ಐಪಿಎಲ್ ಕೂಟವು ಇನ್ನು ಕೆಲವೇ ಕ್ಷಣಗಳಲ್ಲಿ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಪ್ರತಿಬಾರಿ ನವೀನತೆಯನ್ನು ಪರಿಚಯಿಸುವ ಬಿಸಿಸಿಐ ಈ ಬಾರಿಯೂ ಹೊಸತನಕ್ಕೆ ಮುಂದಾಗಿದೆ.
ಈ ಬಾರಿಯ ಕೂಟಕ್ಕೆ ಬಿಸಿಸಿಐ ಕೆಲವು ನಿಯಮ ಬದಲಾವಣೆ ಮಾಡಿದೆ. ಅದರಲ್ಲಿ ಪ್ರಮುಖವಾಗಿರುವುದು ಪ್ರತಿ ಓವರ್ ಗೆ ಎರಡು ಬೌನ್ಸರ್ ಎಸೆಯುವ ಅವಕಾಶ.
ಹೌದು, ಈ ಬಾರಿ ಐಪಿಎಲ್ ನಲ್ಲಿ ಎರಡು ಬೌನ್ಸರ್ ನಿಯಮ ಅಳವಡಿಸಲಾಗಿದೆ. ಇದುವರೆಗೆ ಟಿ20ಯಲ್ಲಿ ಪ್ರತಿ ಓವರ್ ಗೆ ಒಂದು ಬೌನ್ಸರ್ ಎಸೆಯಲು ಮಾತ್ರ ಅವಕಾಶವಿತ್ತು. ಎರಡನೇ ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತಿತ್ತು. ಈ ನಿಯಮವನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಯಶಸ್ವಿ ಪ್ರಯೋಗ ಮಾಡಲಾಗಿದೆ.
ಎರಡನೇ ಬೌನ್ಸರ್ ನಿಯಮದ ಜೊತೆಗೆ, ಐಪಿಎಲ್ 2024 ಸ್ಮಾರ್ಟ್ ರಿಪ್ಲೇ ಸಿಸ್ಟಮ್ ಪರಿಚಯ ಮಾಡಲಾಗುತ್ತಿದೆ. ಇದು ಅಂಪೈರಿಂಗ್ ನಿರ್ಧಾರಗಳನ್ನು ಉತ್ತಮಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿಸುತ್ತದೆ. ಮೈದಾನದ ಸುತ್ತಲೂ ಇರುವ ಎಂಟು ಹೈ-ಸ್ಪೀಡ್ ಹಾಕ್-ಐ ಕ್ಯಾಮೆರಾಗಳಿಂದ ನಡೆಸಲ್ಪಡುವ ಈ ವ್ಯವಸ್ಥೆಯು ಟಿವಿ ಅಂಪೈರ್‌ಗೆ ಸಹಾಯ ಮಾಡಲು ನೈಜ-ಸಮಯದ ಚಿತ್ರಗಳನ್ನು ಒದಗಿಸುತ್ತದೆ. ತ್ವರಿತ ಮತ್ತು ಹೆಚ್ಚು ನಿಖರವಾದ ತೀರ್ಪುಗಳನ್ನು ಇದರಿಂದ ನೀಡಲಾಗುತ್ತಿದೆ.
ಕಳೆದ ಬಾರಿ ಐಪಿಎಲ್ ನಲ್ಲಿ ಪರಿಚಯಿಸಲಾಗಿದ್ದ ಇಂಪಾಕ್ಟ್ ಪ್ಲೇಯರ್ ನಿಯಮವನ್ನು ಈ ಬಾರಿಯೂ ಮುಂದುವರಿಸಲಾಗುತ್ತಿದೆ.
ಐಪಿಎಲ್ 2024ರ ಪಂದ್ಯಗಳಲ್ಲಿ ಸ್ಟಂಪಿಂಗ್ ಗೆ ಥರ್ಡ್ ಅಂಪೈರ್ ರೆಫರಲ್ ಕೋರಿದಾಗ ಕ್ಯಾಚ್ ಕೂಡಾ ಪರಿಶೀಲಿಸುವ ನಿಬಂಧನೆಯನ್ನು ಇರಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಈ ತೀರ್ಪು ಐಸಿಸಿ ನಿಯಮಗಳಿಂದ ವಿರುದ್ದವಾಗಿದೆ. ಇತ್ತೀಚೆಗೆ ಬದಲಾದ ಐಸಿಸಿ ನಿಯಮದ ಪ್ರಕಾರ ಸ್ಟಂಪಿಂಗ್ ರೆಫರಲ್ ವೇಳೆ ಸ್ಟಂಪಿಂಗ್ ಮಾತ್ರ ಪರಿಶೀಲನೆ ಮಾಡಲಾಗುತ್ತದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೆಲವೇ ದಿನಗಳ ಹಿಂದೆ ಜಾರಿಯಾದ ಸ್ಟಾಪ್ ಕ್ಲಾಕ್ ನಿಯಮವನ್ನು ಐಪಿಎಲ್ ನಲ್ಲಿ ಅಳವಡಿಸದೇ ಇರಲು ಬಿಸಿಸಿಐ ತೀರ್ಮಾನಿಸಿದೆ. ಈ ನಿಯಮದ ಪ್ರಕಾರ ಪ್ರತಿ ಓವರ್ ಮುಗಿದ ಬಳಿಕ ಒಂದು ನಿಮಿಷದೊಳಗೆ ಮತ್ತೊಂದು ಓವರ್ ಆರಂಭಿಸಬೇಕು.