Advertisement

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

09:53 PM Apr 23, 2024 | Team Udayavani |

ಹೊಸದಿಲ್ಲಿ: ರಿಷಭ್‌ ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆಯ ಕಾಲ ಸನ್ನಿಹಿತವಾಗಿದೆ. ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿರುವ ತಂಡನ್ನು ಮೇಲಕ್ಕೆತ್ತುವ ಬಹು ದೊಡ್ಡ ಸವಾಲು ಪಂತ್‌ ಆ್ಯಂಡ್‌ ಕಂಪೆನಿಯ ಮೇಲಿದೆ. ಬುಧವಾರ ತವರಿನ “ಕೋಟ್ಲಾ’ ಅಂಗಳದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲಿದ್ದು, ಇಲ್ಲಿಂದ ಡೆಲ್ಲಿ ಅದೃಷ್ಟ ಬದಲಾದೀತೇ ಎಂಬುದು ಅಭಿಮಾನಿಗಳ ನಿರೀಕ್ಷೆ.

Advertisement

“ಹೋಮ್‌ ಕಮಿಂಗ್‌’ ಎಂಬುದು ಡೆಲ್ಲಿ ಪಾಲಿಗೆ ವರದಾನವಾಗೇನೂ ಆಗಲಿಲ್ಲ. ಆರಂಭದಲ್ಲೇ ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡ ಹೈದರಾಬಾದನ್ನು ತವರಲ್ಲಿ ಎದುರಿಸುವ ಅವಕಾಶ ಎದುರಾದದ್ದು ಡೆಲ್ಲಿಗೆ ಉಭಯಸಂಕಟವಾಗಿ ಪರಿಣಮಿಸಿತು. ಎ. 20ರಂದು ನಡೆದ ಈ ಮುಖಾಮುಖೀಯಲ್ಲಿ ಹೈದರಾಬಾದ್‌ 7ಕ್ಕೆ 266 ರನ್‌ ರಾಶಿ ಹಾಕಿತು. ಜವಾಬಿತ್ತ ಡೆಲ್ಲಿ 199ಕ್ಕೆ ಆಲೌಟ್‌ ಆಯಿತು. ಇದು 8 ಪಂದ್ಯಗಳಲ್ಲಿ ಡೆಲ್ಲಿಗೆ ಎದುರಾದ 5ನೇ ಸೋಲು. ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಗುಜರಾತ್‌ ವಿರುದ್ಧ ಗೆಲುವು ಸಾಧಿಸಿ ಈ ಓಟವನ್ನು ಮುಂದುವರಿಸಿಕೊಂಡು ಹೋಗಬೇಕಿದೆ.

ಹೈದರಾಬಾದ್‌ ವಿರುದ್ಧ ಅಕ್ಷರ್‌ ಪಟೇಲ್‌ ಒಬ್ಬರನ್ನು ಹೊರತುಪಡಿಸಿ ಡೆಲ್ಲಿಯ ಅಷ್ಟೂ ಬೌಲರ್ ಧಾರಾಳಿಯಾಗಿದ್ದರು. ಪವರ್‌ ಪ್ಲೇಯಲ್ಲಿ ಸರ್ವಾಧಿಕ 125 ರನ್‌ ಸೋರಿಹೋಯಿತು. ಕಮಿನ್ಸ್‌ ಪಡೆಯನ್ನು ಮುನ್ನೂರರೊಳಗೆ ತಡೆದದ್ದೇ ಇವರ ದೊಡ್ಡ ಸಾಧನೆ ಎನಿಸಿತು. ಇವರೆಲ್ಲ ಗುಜರಾತ್‌ ವಿರುದ್ಧ ಅಷ್ಟೇ ಮಿತವ್ಯಯ ಸಾಧಿಸಬೇಕಾದ ಅಗತ್ಯವಿದೆ.

ಡೆಲ್ಲಿ ಬ್ಯಾಟಿಂಗ್‌ ಸರದಿಯ ಸಮಸ್ಯೆಯೆಂದರೆ ಓಪನಿಂಗ್‌ ವೈಫ‌ಲ್ಯ. ವಾರ್ನರ್‌-ಪೃಥ್ವಿ ಶಾ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾಗುತ್ತಿದ್ದಾರೆ. ಹೀಗಾಗಿ ಪವರ್‌ ಪ್ಲೇಯಲ್ಲಿ ರನ್‌ ಹರಿದು ಬರುತ್ತಿಲ್ಲ. ಮೆಕ್‌ಗರ್ಕ್‌, ಪೊರೆಲ್‌ ಮತ್ತು ಪಂತ್‌ ಹೊರತುಪಡಿಸಿ ಉಳಿದವರೆಲ್ಲ ರನ್‌ ಬರಗಾಲದಲ್ಲಿದ್ದಾರೆ.

ಎಂಟರಲ್ಲಿ 4 ಗೆಲುವು

Advertisement

ಗುಜರಾತ್‌ ಎಂಟರಲ್ಲಿ 4 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಅವರದೇ ಅಂಗಳದಲ್ಲಿ 3 ವಿಕೆಟ್‌ ಗೆಲುವು ಸಾಧಿಸಿದ ಉತ್ಸಾಹ ಗುಜರಾತ್‌ ತಂಡದಲ್ಲಿ ಮನೆಮಾಡಿದೆ. ಆದರೆ ಗುಜರಾತ್‌ ಇನ್ನೂ ಅಪಾಯಕಾರಿಯಾಗಿ ಗೋಚರಿಸಿಲ್ಲ. ಬ್ಯಾಟಿಂಗ್‌ ಸರದಿಯಲ್ಲಿ ಸಾಯಿ ಸುದರ್ಶನ್‌, ಡೇವಿಡ್‌ ಮಿಲ್ಲರ್‌, ಒಮರ್‌ಜಾಯ್‌, ತೆವಾಟಿಯ ಇನ್ನಿಂಗ್ಸ್‌ ಬೆಳೆಸುವ ಜತೆಗೆ ಬಿರುಸಿನ ಆಟ ಆಡಬೇಕಿದೆ.

ಬೌಲಿಂಗ್‌ನಲ್ಲಿ ಸಾಯಿ ಕಿಶೋರ್‌, ರಶೀದ್‌ ಖಾನ್‌, ಮೋಹಿತ್‌ ಶರ್ಮ, ನೂರ್‌ ಅಹ್ಮದ್‌ ಗುಜರಾತ್‌ ಪಾಲಿನ ಭರವಸೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next