Advertisement

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

12:19 PM Apr 24, 2024 | Team Udayavani |

ಚೆನ್ನೈ: ಇಲ್ಲಿ ಮಂಗಳವಾರ ನಡೆದ ಬೃಹತ್‌ ಮೊತ್ತದ ಐಪಿಎಲ್‌ ಪಂದ್ಯ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಚೆನ್ನೈ ಸೂಪರ್‌ ಕಿಂಗ್ಸ್‌, ಎದುರಾಳಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ತನ್ನದೇ ನೆಲದಲ್ಲೂ ಸೋಲನುಭವಿಸಿತು.

Advertisement

ಇದಕ್ಕೂ ಮುನ್ನ ಅದು ಲಕ್ನೋದ ಅಟಲ್‌ ಮೈದಾನದಲ್ಲಿ ಸೋಲನುಭವಿಸಿತ್ತು. ಅಲ್ಲದೇ ತವರಿನಲ್ಲಿ ಚೆನ್ನೈ ತಂಡದ ಸತತ 3 ಜಯಗಳ
ಓಟಕ್ಕೂ ಲಕ್ನೋ ತೆರೆಯೆಳೆಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

ಬೃಹತ್‌ ಗುರಿ ಬೆನ್ನತ್ತಿದ ಲಕ್ನೋವನ್ನು ದಡ ಹತ್ತಿಸಿದ್ದು ಮಾರ್ಕಸ್‌ ಸ್ಟಾಯಿನಿಸ್‌ ಅವರ ಆರ್ಭಟ. ಅವರು 63 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ಗಳ ಸಮೇತ 124 ರನ್‌ ಚಚ್ಚಿದರು. ಇನ್ನು ನಿಕೋಲಸ್‌ ಪೂರನ್‌ 15 ಎಸೆತದಲ್ಲಿ 34 ರನ್‌ ಸಿಡಿಸಿದರು.

ಸ್ಫೋಟಿಸಿದ ಋತುರಾಜ್‌
ಟಾಸ್‌ ಸೋತು ಬ್ಯಾಟಿಂಗ್‌ಗಿಳಿಸಲ್ಪಟ್ಟ ಚೆನ್ನೈ ಪರ ನಾಯಕ ಋತುರಾಜ್‌ ಗಾಯಕ್ವಾಡ್‌ ಅಬ್ಬರದ ಬ್ಯಾಟಿಂಗ್‌ ಮಾಡಿದರು. ಮೊದಲ ಓವರ್‌ ನಲ್ಲೇ ಅಜಿಂಕ್ಯ ರಹಾನೆ ಔಟಾದ ನಂತರ, ಕ್ರೀಸ್‌ಗೆ ಕಚ್ಚಿಕೊಂಡ ಋತುರಾಜ್‌ ಕೊನೆಗೂ ಔಟಾಗಲಿಲ್ಲ. 60 ಎಸೆತ ಎದುರಿಸಿದ ಅವರು, 12 ಬೌಂಡರಿ , 3 ಸಿಕ್ಸರ್‌ಗಳೊಂದಿಗೆ 108 ರನ್‌ ಚಚ್ಚಿದರು. ಅಂತಿಮ ಹಂತದಲ್ಲಿ ಚೆನ್ನೈ ಮೊತ್ತವನ್ನು ಉಬ್ಬಿಸಿದ್ದು ಆಲ್‌ರೌಂಡರ್‌ ಶಿವಂ ದುಬೆ. ಕಡೆಕಡೆಯ ಹಂತದಲ್ಲಿ ಸಿಡಿದ ದುಬೆ 27 ಎಸೆತಗಳಲ್ಲಿ 66 ರನ್‌ ಸಿಡಿಸಿದರು. ಇದರಲ್ಲಿ 3 ಬೌಂಡರಿ, 7 ಸಿಕ್ಸರ್‌ಗಳು ಸೇರಿದ್ದವು. ಚೆನ್ನೈ ಬ್ಯಾಟಿಂಗ್‌ ಅಬ್ಬರವನ್ನು ತಡೆಯಲು ಲಕ್ನೋ ಬೌಲರ್‌ಗಳು ಪೂರ್ಣವಾಗಿ ವಿಫ‌ಲವಾದರು.

ಪಂದ್ಯದ ತಿರುವು

Advertisement

ಚೆನ್ನೈ ಬೌಲಿಂಗ್‌ನಲ್ಲಿ ಹಲವು ದೋಷಗಳಿದ್ದವು. ದೀಪಕ್‌ ಚಹರ್‌, ಜಡೇಜ ಕೇವಲ 2 ಓವರ್‌ ಮಾತ್ರ ಬೌಲಿಂಗ್‌ ಮಾಡಿದರು. 16ನೇ ಓವರ್‌ನಲ್ಲಿ ಶಾರ್ದೂಲ್‌ ಠಾಕೂರ್‌ರನ್ನು ಬೌಲಿಂಗ್‌ಗಿಳಿಸಲಾಯಿತು. ಅವರು 20 ರನ್‌ ಚಚ್ಚಿಸಿಕೊಂಡರು. ಅಂತಿಮ ಓವರ್‌ ನಲ್ಲಿ ಮುಸ್ತಫಿಜುರ್‌ ಕೂಡ 20 ರನ್‌ ನೀಡಿ ಚೆನ್ನೈ ಸೋಲಿಗೆ ಕಾರಣವಾದರು.

ಗಾಯಕ್ವಾಡ್‌ ಶತಕ: ಮೊದಲ ಚೆನ್ನೈ ನಾಯಕ
ಈ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್‌ ಶತಕ ಬಾರಿಸಿದರು. ಇದು ಚೆನ್ನೈ ನಾಯಕನೊಬ್ಬ ಬಾರಿಸಿದ ಮೊದಲ ಶತಕ.

ಈ ಐಪಿಎಲ್‌ ಕೂಟದ 9ನೇ ಶತಕ ದಾಖಲು
ಚೆನ್ನೈ-ಲಕ್ನೋ ಪಂದ್ಯದಲ್ಲಿ ಗಾಯಕ್ವಾಡ್‌, ಸ್ಟಾಯಿನಿಸ್‌ ಶತಕ ಬಾರಿಸಿದರು. ಇಲ್ಲಿಗೆ ಈ ಕೂಟದ ಶತಕಗಳ ಸಂಖ್ಯೆ 9ಕ್ಕೆ ಏರಿತು.

3ನೇ ಬಾರಿ ಒಂದೇ ಪಂದ್ಯದಲ್ಲಿ 2 ಶತಕ
ಚೆನ್ನೈ ಪರ ಗಾಯಕ್ವಾಡ್‌ ಮತ್ತು ಲಕ್ನೋ ಪರ ಸ್ಟಾಯಿನಿಸ್‌ ಶತಕ ಬಾರಿಸಿದರು. ಈ ಐಪಿಎಲ್‌ನಲ್ಲಿ 3ನೇ ಬಾರಿಗೆ ಒಂದೇ ಪಂದ್ಯದಲ್ಲಿ 2 ಶತಕಗಳು ದಾಖಲಾದಂತಾಗಿದೆ. ಇದಕ್ಕೂ ಮುನ್ನ ರಾಜಸ್ಥಾನ್‌-ಆರ್‌ಸಿಬಿ, ಕೋಲ್ಕತ-ರಾಜಸ್ಥಾನ್‌ ಪಂದ್ಯದಲ್ಲೂ 2 ಶತಕಗಳು ಬಂದಿದ್ದವು.

200 ಪ್ಲಸ್‌ ರನ್‌ ಚೇಸ್‌: ಲಕ್ನೋ ಅಗ್ರ
ಚೆನ್ನೈ ವಿರುದ್ಧ 211 ಗುರಿ ಬೆನ್ನತ್ತಿ ಗೆದ್ದಿರುವ ಲಕ್ನೋ, ಚೆಪಾಕ್‌ನಲ್ಲಿ 200 ಪ್ಲಸ್‌ ರನ್‌ ಚೇಸ್‌ ಮಾಡಿ ಗೆದ್ದ ದಾಖಲೆಯಲ್ಲಿ ಅಗ್ರಸ್ಥಾನಕ್ಕೇರಿದೆ. 2012ರಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ 206 ರನ್‌ ಚೇಸ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next