ಕೋಲ್ಕತ್ತಾ: ಐಪಿಎಲ್ 17ನೇ ಸೀಸನ್ ಗೆ ಕೆಲವೇ ದಿನಗಳು ಬಾಕಿ ಇರುವಂತೆ ಎಲ್ಲಾ ಫ್ರಾಂಚೈಸಿಗಳು ಸಿದ್ದತೆ ನಡೆಸುತ್ತಿದೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗಾಯಾಳು ಆಟಗಾರರ ಚಿಂತೆ ಕಾಡುತ್ತಿದೆ.
ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರು ಮತ್ತೆ ಬೆನ್ನುನೋವಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಐಪಿಎಲ್ ನ ಆರಂಭಿಕ ಸುತ್ತಿನಿಂದ ಅವರು ಹೊರ ಬೀಳುವ ಎಲ್ಲಾ ಲಕ್ಷಣಗಳಿವೆ ಎನ್ನುತ್ತಿದೆ ವರದಿ.
ವಿದರ್ಭ ವಿರುದ್ಧದ ರಣಜಿ ಟ್ರೋಫಿ ಫೈನಲ್ ನಲ್ಲಿ ಮುಂಬೈ ಪರ 95 ರನ್ ಗಳಿಸಿದ ನಂತರ ಅಯ್ಯರ್ ಅವರ ಹಳೆಯ ಬೆನ್ನುನೋವು ಮತ್ತೊಮ್ಮೆ ಉಲ್ಬಣಗೊಂಡಿದೆ ಎಂದು ವರದಿ ಹೇಳಿದೆ. 2023 ರಲ್ಲಿ, ಅದೇ ಗಾಯದಿಂದಾಗಿ ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
“ಪರಿಸ್ಥಿತಿ ಚೆನ್ನಾಗಿ ಕಾಣುತ್ತಿಲ್ಲ. ಅದೇ ಬೆನ್ನುನೋವು ಉಲ್ಬಣಗೊಂಡಿದೆ. ರಣಜಿ ಟ್ರೋಫಿ ಫೈನಲ್ ನ 5ನೇ ದಿನದಂದು ಅವರು ಮೈದಾನಕ್ಕಿಳಿಯುವ ಸಾಧ್ಯತೆ ಕಡಿಮೆ. ಅವರು ಐಪಿಎಲ್ ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ” ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.
ಬಿಸಿಸಿಐನ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗುಳಿದ ನಂತರ ಅಯ್ಯರ್ ಗೆ ಐಪಿಎಲ್ ನಿರ್ಣಾಯಕ ಪಂದ್ಯಾವಳಿಯಾಗಿದೆ. ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ಮಾರ್ಚ್ 23 ರಂದು ಕೋಲ್ಕತ್ತಾದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಅಯ್ಯರ್ ಅವರು 95 ರನ್ ಗಳಿಸುವ ಸಮಯದಲ್ಲಿ ಬೆನ್ನು ಸೆಳೆತವನ್ನು ಅನುಭವಿಸಿದರು. ಮುಂಬೈ ತಂಡದ ಫಿಸಿಯೋ ಅವರನ್ನು ಎರಡು ಬಾರಿ ಪರೀಕ್ಷಿಸಬೇಕಾಯಿತು. ಅವರು ಬುಧವಾರ ಮುಂಬೈ ಪರ ಮೈದಾನಕ್ಕೆ ಇಳಿಯಲಿಲ್ಲ.