ಧರ್ಮಶಾಲಾ: ಈಗಾಗಲೇ ಐಪಿಎಲ್‌ನಿಂದ ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬುಧವಾರದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 2 ವಿಕೆಟಿಗೆ 213 ರನ್ ರಾಶಿ ಹಾಕಿದೆ. ಪಂಜಾಬ್ ಪಾಲಿಗೆ ಇದು “ಮಸ್ಟ್ ವಿನ್ ಗೇಮ್” ಆಗಿದೆ. ಇದು 10 ವರ್ಷಗಳ ಬಳಿಕ ಧರ್ಮಶಾಲಾದಲ್ಲಿ ನಡೆದ ಐಪಿಎಲ್ ಪಂದ್ಯ ಎಂಬುದು ವಿಶೇಷ.
ಬಹಳ ಸಮಯದ ಬಳಿಕ ಆಡುವ ಬಳಗದಲ್ಲಿ ಕಾಣಿಸಿಕೊಂಡ ಪೃಥ್ವಿ ಶಾ, ನಾಯಕ ಡೇವಿಡ್ ವಾರ್ನರ್, ರಿಲೀ ರೋಸ್ಯೂ ಎಲ್ಲರೂ ಮುನ್ನುಗ್ಗಿ ಬಾರಿಸತೊಡಗಿದರು. ಮೊದಲೆರಡು ಓವರ್‌ಗಳಲ್ಲಷ್ಟೇ ಡೆಲ್ಲಿ ಸ್ಕೋರ್ ಕಡಿಮೆ ಇತ್ತು. ಬಳಿಕ ಹತ್ತರ ಸರಾಸರಿಯಲ್ಲಿ ರನ್ ಬರತೊಡಗಿತು.
10.2 ಓವರ್‌ಗಳ ತನಕ ಕ್ರೀಸ್ ಆಕ್ರಮಿಸಿಕೊಂಡ ವಾರ್ನರ್-ಶಾ ಮೊದಲ ವಿಕೆಟಿಗೆ 94 ರನ್ ಪೇರಿಸಿದರು. ವಾರ್ನರ್ 46 ರನ್ ಹೊಡೆದರೆ, ಶಾ 54 ರನ್ ಬಾರಿಸಿದರು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಶಾ ಹೊಡೆದ ಮೊದಲ ಅರ್ಧ ಶತಕ. ಮೊದಲ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 47 ರನ್ ಮಾಡಿದ ಶಾ ಅವರನ್ನು ಅನಂತರ ಕೈಬಿಡಲಾಗಿತ್ತು. ಅವರ 54 ರನ್ 38 ಎಸೆತಗಳಿಂದ ಬಂತು. ಸಿಡಿಸಿದ್ದು 7 ಬೌಂಡರಿ ಹಾಗೂ ಒಂದು ಸಿಕ್ಸರ್.
ವಾರ್ನರ್ 46 ರನ್‌ಗಾಗಿ 31 ಎಸೆತ ಎದುರಿಸಿದರು. ಇದು 5 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಆರಂಭಿಕರಿಬ್ಬರ ವಿಕೆಟ್‌ಗಳೂ ಸ್ಯಾಮ್ ಕರನ್ ಪಾಲಾದವು. ಉಳಿದ ಬೌಲರ್‌ಗಳಾರೂ ಯಶಸ್ಸು ಕಾಣಲಿಲ್ಲ.
ಶಾ-ರೋಸ್ಯೂ ಜೋಡಿ ಕೂಡ ಉಪಯುಕ್ತ ಜತೆಯಾಟ ನಿಭಾಯಿಸಿತು. ದ್ವಿತೀಯ ವಿಕೆಟಿಗೆ 54 ರನ್ ಒಟ್ಟುಗೂಡಿತು. ರೋಸ್ಯೂ ಸಿಡಿಲಬ್ಬರದ ಆಟವಾಡಿ ಪಂಜಾಬ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅವರದು ಅಜೇಯ 82 ರನ್ ಕೊಡುಗೆ. ಇದಕ್ಕೆ ಎದುರಿಸಿದ್ದು 37 ಎಸೆತ ಮಾತ್ರ. ಸಿಡಿಸಿದ್ದು 6 ಬೌಂಡರಿ ಹಾಗೂ 6 ಸಿಕ್ಸರ್. ಫಿಲಿಪ್ ಸಾಲ್ಟ್ 14 ಎಸೆತಗಳಿಂದ 26 ರನ್ ಮಾಡಿ ಅಜೇಯರಾಗಿ ಉಳಿದರು (2 ಬೌಂಡರಿ, 2 ಸಿಕ್ಸರ್).