Advertisement

IPL 2023: ಡೆಲ್ಲಿ ಹರ್ಡಲ್ಸ್‌  ದಾಟಬೇಕಿದೆ ಚೆನ್ನೈ

01:04 AM May 20, 2023 | Team Udayavani |

ಹೊಸದಿಲ್ಲಿ: ಅಂಕಪಟ್ಟಿ ಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೂ ಮುನ್ನಡೆಗೆ “ಮಸ್ಟ್‌ ವಿನ್‌’ ಸ್ಥಿತಿಯಲ್ಲಿ ರುವ ಚೆನ್ನೈ ಸೂಪರ್‌ ಕಿಂಗ್ಸ್‌ ಶನಿವಾರದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ವನ್ನು ಕೋಟ್ಲಾದಲ್ಲಿ ಎದುರಿಸಲಿದೆ.

Advertisement

ಎಂದಿನಂತೆ ಡೆಲ್ಲಿಗೆ ಇದು ಲೆಕ್ಕದ ಭರ್ತಿಯ ಪಂದ್ಯ. ಆದರೆ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಅವಮಾನಕ್ಕೆ ಸಿಲುಕಿರುವ ಡೆಲ್ಲಿಗೆ ಗೆಲುವಿನೊಂದಿಗೆ 2023ರ ಋತುವನ್ನು ಮುಗಿಸುವ ಸಹಜ ಅಭಿಲಾಷೆ. ಹೀಗಾಗಿ ಅದು ಧೋನಿ ಪಡೆಯ ಮೇಲೆರಗಲು ಹೆಚ್ಚಿನ ಸಿದ್ಧತೆ ಮಾಡಿಕೊಂಡರೆ ಅಚ್ಚರಿಯೇನಿಲ್ಲ. “ಫಾರ್‌ ಎ ಚೇಂಜ್‌’ ಎಂಬಂತೆ ಡೆಲ್ಲಿ ಆಟಗಾರರು ಈ ಪಂದ್ಯಕ್ಕಾಗಿ ಸಪ್ತವರ್ಣದ “ರೈನ್‌ಬೋ’ ಜೆರ್ಸಿಯನ್ನು ಧರಿಸಿ ಆಡಲಿಳಿಯಲಿದ್ದಾರೆ.

ಚೆನ್ನೈ 13 ಪಂದ್ಯಗಳಿಂದ 15 ಅಂಕ ಹೊಂದಿದ್ದು, ದ್ವಿತೀಯ ಸ್ಥಾನದಲ್ಲಿದೆ. ರನ್‌ರೇಟ್‌ ಕೂಡ ಉತ್ತಮ ಮಟ್ಟದಲ್ಲಿದೆ. ಅಕಸ್ಮಾತ್‌ ಎಡವಿದರೆ ಹಿನ್ನಡೆಗೆ ಸಿಲುಕುವ ಸಾಧ್ಯತೆ ಇದೆ. ಆಗ ಲಕ್ನೋ, ಮುಂಬೈ ಮತ್ತು ಆರ್‌ಸಿಬಿ ತಂಡಗಳ ಫ‌ಲಿತಾಂಶ ನಿರ್ಣಾಯಕವಾಗಲಿದೆ.

ನಿರ್ಗಮಿಸಿದ ಮೊದಲ ತಂಡ
ಡೆಲ್ಲಿ ಅಗತ್ಯ ಸಂದರ್ಭಗಳಲ್ಲಿ ಗೆಲ್ಲುವುದನ್ನು ಬಿಟ್ಟು ಎಡವುತ್ತ ಹೋದ ತಂಡ. ಮೊದಲ 5 ಪಂದ್ಯಗಳಲ್ಲಿ ಸೋತು ಸುಣ್ಣವಾದ ಬಳಿಕ ಗೆಲುವಿನ ಖಾತೆ ತೆರೆದಿತ್ತು. ಆಗಲೇ ವಾರ್ನರ್‌ ಪಡೆಯ ನಿರ್ಗ ಮನ ಖಾತ್ರಿಯಾಗಿತ್ತು. ಈವರೆಗಿನ 13 ಪಂದ್ಯಗಳಲ್ಲಿ ಅದು ಗೆದ್ದದ್ದು ನಾಲ್ಕರಲ್ಲಿ ಮಾತ್ರ.

ಮೇ 17ರಂದು ಧರ್ಮಶಾಲಾ ದಲ್ಲಿ ಆಡಲಾದ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಬ್ಯಾಟಿಂಗ್‌ ಜೋಶ್‌ ತೋರಿದ ಡೆಲ್ಲಿ 15 ರನ್ನುಗಳ ಜಯ ಸಾಧಿಸಿದ್ದನ್ನು ಮರೆಯುವಂತಿಲ್ಲ. ಇದರಿಂದ ಪಂಜಾಬ್‌ ತಂಡವನ್ನು ಕೂಟದಿಂದ ಹೊರದಬ್ಬಿ ಮುಗುಳು ನಕ್ಕಿತ್ತು. ನಾಳೆ ಚೆನ್ನೈಗೂ ಇದೇ ಗತಿ ಎದುರಾದರೆ?

Advertisement

ಅಷ್ಟೇ ಅಲ್ಲ, ಚೆನ್ನೈಯಲ್ಲಿ ಆಡಲಾದ ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿ 27 ರನ್ನುಗಳ ಸೋಲುಂಡಿತ್ತು. ಚೆನ್ನೈ 8ಕ್ಕೆ 167 ರನ್‌ ಗಳಿಸಿದರೆ, ಡೆಲ್ಲಿ 8ಕ್ಕೆ 140 ರನ್‌ ಮಾಡಿ ಶರಣಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಯೋಜನೆಯೂ ವಾರ್ನರ್‌ ಬಳಗದ ಮುಂದಿದೆ. ಇದರಿಂದ ಚೆನ್ನೈ ಹೆಚ್ಚು ಎಚ್ಚರಿಕೆಯಿಂದ ಆಡಬೇಕಾದುದು ಅನಿವಾರ್ಯ.
ಪಂಜಾಬ್‌ ವಿರುದ್ಧ ಡೆಲ್ಲಿ ಅಮೋಘ ಬ್ಯಾಟಿಂಗ್‌ ಪರಾಕ್ರಮ ಮೆರೆದಿತ್ತು. ಎರಡೇ ವಿಕೆಟಿಗೆ 213 ರನ್‌ ಪೇರಿಸಿತ್ತು. ತಂಡಕ್ಕೆ ಮರಳಿದ ಪೃಥ್ವಿ ಶಾ, ರಿಲೀ ರೋಸ್ಯೂ, ಡೇವಿಡ್‌ ವಾರ್ನರ್‌, ಫಿಲಿಪ್‌ ಸಾಲ್ಟ್ ಸೇರಿಕೊಂಡು ಧರ್ಮಶಾಲಾದಲ್ಲಿ ಪಂಜಾಬ್‌ ಮೇಲೆರಗಿ ಹೋಗಿದ್ದರು. ಪಂಜಾಬ್‌ ಕೂಡ ದಿಟ್ಟ ರೀತಿಯಲ್ಲೇ ಚೇಸಿಂಗ್‌ ನಡೆಸಿತ್ತಾದರೂ ಕೆಳ ಕ್ರಮಾಂಕದಲ್ಲಿ ಕುಸಿತ ಅನುಭವಿಸಿ ಸೋಲು ಕಾಣಬೇಕಾಯಿತು.

ಡೆಲ್ಲಿಯಲ್ಲಿ ಕೊನೆಯ ಪಂದ್ಯ ನಡೆದದ್ದು ಮೇ 13ರಂದು. ಎದುರಾಳಿ ಪಂಜಾಬ್‌. ಇದರಲ್ಲಿ ಪಂಜಾಬ್‌ ಆರಂಭಕಾರ ಪ್ರಭ್‌ಸಿಮ್ರಾನ್‌ ಸಿಂಗ್‌ ಅಕರ್ಷಕ ಶತಕ ಬಾರಿಸಿ ಮೆರೆದಿದ್ದರು. ಡೆಲ್ಲಿ ಉತ್ತಮ ಆರಂಭದ ಹೊರತಾಗಿಯೂ ಈ ಪಂದ್ಯವನ್ನು 31 ರನ್ನುಗಳಿಂದ ಕಳೆದುಕೊಂಡಿತ್ತು. ಚೆನ್ನೈ ವಿರುದ್ಧ ಮಿಚೆಲ್‌ ಮಾರ್ಷ್‌ ಫಾರ್ಮ್ ನಿರ್ಣಾಯಕವಾಗಲಿದೆ.

ನಿಧಾನ ಗತಿಯ ಟ್ರ್ಯಾಕ್‌
“ಫಿರೋಜ್‌ ಶಾ ಕೋಟ್ಲಾ’ ಪಿಚ್‌ ನಿಧಾನ ಗತಿಯಿಂದ ಕೂಡಿರುವುದರಿಂದ ಚೆನ್ನೈ ತಂಡದ ಗೇಮ್‌ ಪ್ಲ್ರಾನ್‌ಗೆ ಹೆಚ್ಚು ಪ್ರಶಸ್ತ ಎಂಬುದೊಂದು ಲೆಕ್ಕಾಚಾರ. ಚೆನ್ನೈ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡೂ ವೈವಿಧ್ಯಮಯ. ಕಾನ್ವೇ, ಗಾಯಕ್ವಾಡ್‌, ರಹಾನೆ, ದುಬೆ ಬ್ಯಾಟಿಂಗ್‌ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಜಡೇಜ ಆಲ್‌ರೌಂಡ್‌ ಶೋ ಮೂಲಕ ಗಮನ ಸೆಳೆದಿದ್ದಾರೆ. ಬೌಲಿಂಗ್‌ನಲ್ಲಿ ಮತೀಶ ಪತಿರಣ, ಮಹೀಶ ತೀಕ್ಷಣ ಟ್ರಂಪ್‌ಕಾರ್ಡ್‌ ಆಗಬಲ್ಲರು. ಡೆಲ್ಲಿ ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಸ್ಪಿನ್‌ ದಾಳಿಯನ್ನು ಅವಲಂಬಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next