Advertisement

ಗೆದ್ದರಷ್ಟೇ ಹೈದರಾಬಾದ್‌ಗೆ ಚಾನ್ಸ್‌; ಗೆದ್ದರೂ ಕೆಕೆಆರ್‌ಗೆ ಇಲ್ಲ ಮುನ್ನಡೆಯ ಅವಕಾಶ

02:46 AM May 14, 2022 | Team Udayavani |

ಪುಣೆ: ಶನಿವಾರದ ನಿರ್ಣಾಯಕ ಲೀಗ್‌ ಹಣಾಹಣಿಯೊಂದರಲ್ಲಿ ಸನ್‌ರೈಸರ್ ಹೈದರಾಬಾದ್‌ ಮತ್ತು ಕೋಲ್ಕತಾ ನೈಟ್‌ರೈಡರ್ ಎದುರಾಗಲಿವೆ. ಇದು ಹೈದರಾಬಾದ್‌ ಪಾಲಿಗೆ ಮಹತ್ವದ ಪಂದ್ಯವಾಗಿದ್ದು, ಅದು ಗೆಲುವು ಅನಿವಾರ್ಯ ಎಂಬ ಸ್ಥಿತಿಯಲ್ಲಿದೆ. ಇನ್ನೊಂದೆಡೆ ಕೋಲ್ಕತಾ ನಿರ್ಗಮನ ಬಾಗಿಲಲ್ಲಿ ನಿಂತಿರುವ ತಂಡ. ಸೋತರೆ ಕೂಟದಿಂದ ಹೊರಬೀಳಲಿದೆ. ಉಳಿದೆರಡೂ ಪಂದ್ಯ ಗೆದ್ದರೂ ಶ್ರೇಯಸ್‌ ಅಯ್ಯರ್‌ ಬಳಗಕ್ಕೆ ಮುನ್ನಡೆಯ ಅವಕಾಶ ಇಲ್ಲ ಎಂಬುದು ಸದ್ಯದ ಸ್ಥಿತಿ.

Advertisement

ಸತತ 5 ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ್ದನ್ನು ಕಂಡಾಗ ಸನ್‌ರೈಸರ್ ಹೈದರಾಬಾದ್‌ ಬಹಳ ಬೇಗ ಪ್ಲೇ ಆಫ್ ತಲುಪಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅನಂತರ ಅನುಭವಿಸಿದ ಸತತ 4 ಸೋಲಿನಿಂದ ಕೇನ್‌ ವಿಲಿಯಮ್ಸನ್‌ ಬಳಗ ಒಮ್ಮೆಲೇ ಹಿಮ್ಮುಖವಾಗಿ ಚಲಿಸಿದೆ. ಮತ್ತೆ ಹಳಿ ಏರಿ ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಟಿಕೆಟ್‌ ಪಡೆದೀತು.

ಕೆಕೆಆರ್‌ ಅಸ್ಥಿರ ಪ್ರದರ್ಶನ
ಕೆಕೆಆರ್‌ ಆರಂಭ ಭರವಸೆಯಿಂದಲೇ ಕೂಡಿತ್ತು. ಆದರೆ ಕೂಟ ಮುಂದುವರಿದಂತೆ ಅಸ್ಥಿರ ಪ್ರದರ್ಶನ ನೀಡತೊಡಗಿತು. ಯಾರಿಂದಲೂ ತಂಡವನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಈಗ ವೇಗಿ ಪ್ಯಾಟ್‌ ಕಮಿನ್ಸ್‌ ಕೂಡ ತಂಡದಿಂದ ಬೇರ್ಪಟ್ಟಿದ್ದಾರೆ. ಉಮೇಶ್‌ ಯಾದವ್‌ ಗಾಯಾಳಾದ ಕಾರಣ ಕಳೆದ ಪಂದ್ಯದಿಂದ ಹೊರಗುಳಿದಿದ್ದರು. ಹೈದರಾಬಾದ್‌ ವಿರುದ್ಧ ಆಡಲಿದ್ದಾರೆ ಎಂಬ ವರ್ತಮಾನ ಸಿಕ್ಕಿದೆ.

ಕಳೆದ ಪಂದ್ಯದಲ್ಲಿ ಮುಂಬೈಯನ್ನು 52 ರನ್ನುಗಳಿಂದ ಮಣಿಸುವ ಮೂಲಕ ಕೆಕೆಆರ್‌ ಸುದ್ದಿಗೆ ಬಂದಿತ್ತು. ಆದರೆ ಅದು 12ರಲ್ಲಿ ಕೇವಲ 5 ಗೆಲುವು ಸಾಧಿಸಿದ್ದು, 10 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದೆ. ರನ್‌ರೇಟ್‌ ಮೈನಸ್‌ನಲ್ಲಿದೆ. ಉಳಿದೆರಡು ಪಂದ್ಯಗಳಿಂದ ಟಾಪ್‌ ಫೋರ್‌ಗೆ ನೆಗೆಯಲು ಖಂಡಿತ ಸಾಧ್ಯವಿಲ್ಲ. ಆಗ ಅಂಕ 14ರ ಗಡಿ ದಾಟದು. ರಾಜಸ್ಥಾನ್‌ ರಾಯಲ್ಸ್‌ ಮತ್ತು ಆರ್‌ಸಿಬಿ ಈಗಾಗಲೇ 14 ಅಂಕಗಳೊಂದಿಗೆ ಅಗ್ರ ನಾಲ್ಕರಲ್ಲಿವೆ. ಹೀಗಾಗಿ ಕೆಕೆಆರ್‌ ಹಾದಿ ಮುಚ್ಚಿದೆ ಎಂದೇ ಹೇಳಬೇಕಾಗುತ್ತದೆ.

ಹೈದರಾಬಾದ್‌ ರಿವರ್ಸ್‌ ಗೇರ್‌
ಹೈದರಾಬಾದ್‌ ಹಾದಿ ಕೂಡ ಸುಗಮವೇನಲ್ಲ. ಅಕಸ್ಮಾತ್‌ ತನ್ನ ಸತತ ಸೋಲನ್ನು 5ಕ್ಕೆ ವಿಸ್ತರಿಸಿದರೆ ಅದು ಕೂಡ ಶನಿವಾರವೇ ಪಂದ್ಯಾವಳಿಯಿಂದ ಹೊರಬೀಳಲಿದೆ. ಆಗ ಉಳಿದೆರಡು ಪಂದ್ಯಗಳನ್ನು ಗೆದ್ದರೂ ಹೈದರಾಬಾದ್‌ ಅಂಕ ಕೂಡ 14ಕ್ಕೇ ನಿಲ್ಲುತ್ತದೆ. ಹೀಗಾಗಿ ವಿಲಿಯಮ್ಸನ್‌ ಪಡೆಗೆ ಹ್ಯಾಟ್ರಿಕ್‌ ಗೆಲುವು ಅನಿವಾರ್ಯ.

Advertisement

ಸನ್‌ರೈಸರ್ ಒಮ್ಮೆಲೇ ರಿವರ್ಸ್‌ ಗೇರ್‌ ಪಯಣ ಏಕೆ ಆರಂಭಿಸಿತು? ಇದು ಎಲ್ಲರನ್ನೂ ಕಾಡುವ ಪ್ರಶ್ನೆ. ತಂಡದ ಬೌಲಿಂಗ್‌ ವಿಭಾಗ ವೇಗಿಗಳನ್ನೇ ಅವಲಂಬಿಸಿದ್ದು ಹಿನ್ನಡೆಯಾಗಿ ಕಾಡಿತು ಎಂದು ವಿಶ್ಲೇಷಿಸಲಾಗುತ್ತಿದೆ. ಟಿ. ನಟರಾಜನ್‌ ಮತ್ತು ವಾಷಿಂಗ್ಟನ್‌ ಸುಂದರ್‌ ಗಾಯಾಳಾದದ್ದು, ಸ್ಪೀಡ್‌ಸ್ಟರ್‌ ಉಮ್ರಾನ್‌ ಮಲಿಕ್‌ ದಿಢೀರನೇ ಫಾರ್ಮ್ ಕಳೆದುಕೊಂಡದ್ದೂ ಲಯ ತಪ್ಪಲು ಕಾರಣವಾಯಿತು. ರಶೀದ್‌ ಖಾನ್‌ ಬೇರ್ಪಟ್ಟ ಬಳಿಕ ತಂಡದ ಸ್ಪಿನ್‌ ವಿಭಾಗ ದುರ್ಬಲಗೊಂಡಿದೆ. ಒಟ್ಟಾರೆ ಹೇಳುವುದಾದರೆ, ತಂಡದ ಬೌಲಿಂಗ್‌ ಮತ್ತೆ ಹರಿತಗೊಳ್ಳದ ಹೊರತು ಹೈದರಾಬಾದ್‌ಗೆ ಉಳಿಗಾಲವಿಲ್ಲ.

ಸನ್‌ರೈಸರ್ ಬ್ಯಾಟಿಂಗ್‌ನಲ್ಲೇನೋ ಕ್ವಾಲಿಟಿ ಇದೆ. ಆದರೆ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಬ್ಯಾಟೇ ಮಾತಾಡದಿರುವುದೊಂದು ದುರಂತ. ಈ ಸರಣಿಯಲ್ಲಿ ಅವರು ಹೊಡೆದದ್ದು ಒಂದೇ ಅರ್ಧ ಶತಕ.

ಸುಲಭದಲ್ಲಿ
ಜಯಿಸಿತ್ತು ಹೈದರಾಬಾದ್‌
ಇತ್ತಂಡಗಳ ನಡುವಿನ ಮೊದಲ ಸುತ್ತಿನ ಪಂದ್ಯ ಹೈದರಾಬಾದ್‌ನ ಬ್ಯಾಟಿಂಗ್‌ ಮೆರೆದಾಟಕ್ಕೆ ಸಾಕ್ಷಿಯಾಗಿತ್ತು. ಅದು 7 ವಿಕೆಟ್‌ಗಳ ಜಯಭೇರಿ ಮೊಳಗಿಸಿತ್ತು.

ಕೆಕೆಆರ್‌ 8 ವಿಕೆಟಿಗೆ 175 ರನ್‌ ಗಳಿಸಿದರೆ, ಹೈದರಾಬಾದ್‌ 17.3 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 176 ರನ್‌ ಬಾರಿಸಿತು. ಚೇಸಿಂಗ್‌ ವೇಳೆ ಕೇನ್‌ ವಿಲಿಯಮ್ಸನ್‌ (17) ಮತ್ತು ಅಭಿಷೇಕ್‌ ಶರ್ಮ (3) ಬೇಗನೇ ನಿರ್ಗಮಿಸಿದರು. ಆದರೆ ರಾಹುಲ್‌ ತ್ರಿಪಾಠಿ 71 ರನ್‌ ಹಾಗೂ ಐಡನ್‌ ಮಾರ್ಕ್‌ರಮ್‌ ಅಜೇಯ 68 ರನ್‌ ಬಾರಿಸಿ ಕೋಲ್ಕತಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಈ ಜೋಡಿಯಿಂದ 3ನೇ ವಿಕೆಟಿಗೆ 94 ರನ್‌ ಒಟ್ಟುಗೂಡಿತು. ಹೈದರಾಬಾದ್‌ ಬೌಲಿಂಗ್‌ ಸರದಿಯಲ್ಲಿ ಟಿ. ನಟರಾಜನ್‌ 37ಕ್ಕೆ 3, ಉಮ್ರಾನ್‌ ಮಲಿಕ್‌ 27ಕ್ಕೆ 2 ವಿಕೆಟ್‌ ಕಿತ್ತು ಮಿಂಚಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next