ಕೋಲ್ಕತಾ: ನಾಯಕ ಕೆಎಲ್ ರಾಹುಲ್ ಅವರ ಅಮೋಘ ಆಟದ ಹೊರತಾಗಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ಬುಧವಾರದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದೆದುರು 14 ರನ್ನುಗಳಿಂದ ಸೋಲನ್ನು ಕಂಡು ಕೂಟದಿಂದ ಹೊರಬಿದ್ದಿದೆ.
ಈ ಗೆಲುವಿನಿಂದ ಆರ್‌ಸಿಬಿ ತಂಡವು ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುವ ಅವಕಾಶ ಪಡೆಯಿತು. ಈ ಪಂದ್ಯದ ವಿಜೇತ ತಂಡವು ರವಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ರಾಹುಲ್ 58 ಎಸೆತಗಳಿಂದ 3 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 79 ರನ್ ಗಳಿಸಿದರೆ ದೀಪಕ್ ಹೂಡಾ 45 ರನ್ ಹೊಡೆದರು. ಇವರಿಬ್ಬರನ್ನು ಹೊರತುಪಡಿಸಿ ತಂಡದ ಇತರ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಜೋಶ್ ಹ್ಯಾಝೆಲ್‌ವುಡ್ 3 ವಿಕೆಟ್ ಕಿತ್ತು ಮಿಂಚಿದರು.
ಈ ಮೊದಲು ರಜತ್ ಮನೋಹರ್ ಪಾಟೀದಾರ್ ಅವರ ಮನಮೋಹಕ ಶತಕ ಸಾಹಸದಿಂದ ರಾಯಲ್ ಚಾಲೆಂಜರ್ ಬೆಂಗಳೂರು 4 ವಿಕೆಟಿಗೆ 207 ರನ್ ಪೇರಿಸಿತ್ತು.
ಈ ಪಂದ್ಯ ಮಳೆಯಿಂದಾಗಿ ಸುಮಾರು 35 ನಿಮಿಷ ವಿಳಂಬವಾಗಿ ಆರಂಭಗೊಂಡಿತು. ಮಳೆ ನಿಂತ ಬಳಿಕ ಪಾಟೀದಾರ್ ಅವರ ರನ್‌ಮಳೆ ಮೊದಲ್ಗೊಂಡಿತು. ಪ್ರಚಂಡ ಬ್ಯಾಟಿಂಗ್ ನಡೆಸಿದ ಪಾಟೀದಾರ್ 112 ರನ್ ಬಾರಿಸಿ ಲಕ್ನೋಗೆ ಸವಾಲಾಗಿಯೇ ಉಳಿದರು. ಕೇವಲ 54 ಎಸೆತ ಎದುರಿಸಿದ ಮಧ್ಯಪ್ರದೇಶದ ಬಲಗೈ ಬ್ಯಾಟರ್ 12 ಬೌಂಡರಿ, 7 ಸಿಕ್ಸರ್ ಸಿಡಿಸಿ ಈಡನ್‌ನಲ್ಲಿ ವಿಜೃಂಭಿಸಿದರು.
Related Articles
ರಜತ್ ಪಾಟೀದಾರ್ ಅವರ ಸಾಧನೆ ಐಪಿಎಲ್ ನಾಕೌಟ್/ಪ್ಲೇ ಆಫ್ ಪಂದ್ಯಗಳಲ್ಲಿ ಅನ್‌ಕ್ಯಾಪ್ಡ್ ಆಟಗಾರನ ಪ್ರಥಮ ಶತಕವೆಂಬ ಹಿರಿಮೆಗೆ ಪಾತ್ರವಾಯಿತು. 2014ರ ಪಂದ್ಯದಲ್ಲಿ ಮನೀಷ್ ಪಾಂಡೆ ಪಂಜಾಬ್ ವಿರುದ್ಧ 94 ರನ್ ಗಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಹಾಗೆಯೇ ಇದು ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಕ್ರಿಕೆಟಿಗನ 4ನೇ ಶತಕವೂ ಹೌದು. ಪಾಲ್ ವಲ್ತಾಟಿ, ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್ ಉಳಿದ ಮೂವರು ಸಾಧಕರು.
ಪಾಟೀದಾರ್-ದಿನೇಶ್ ಕಾರ್ತಿಕ್ 41 ಎಸೆತಗಳಿಂದ 92 ರನ್ ಒಟ್ಟುಗೂಡಿಸಿ ಆರ್‌ಸಿಬಿ ಮೊತ್ತವನ್ನು ಇನ್ನೂರರಾಚೆ ವಿಸ್ತರಿಸಿದರು. ಕಾರ್ತಿಕ್ ಕಾಣಿಕೆ 23 ಎಸೆತಗಳಿಂದ ಅಜೇಯ 37 ರನ್ (5 ಬೌಂಡರಿ, 1 ಸಿಕ್ಸರ್). ಡೆತ್ ಓವರ್‌ಗಳಲ್ಲಿ ಇವರಿಬ್ಬರು ಸೇರಿಕೊಂಡು 84 ರನ್ ಸೂರೆಗೈದರು.
ಡು ಪ್ಲೆಸಿಸ್ ಸೊನ್ನೆ
ನಾಯಕ ಫಾ ಡು ಪ್ಲೆಸಿಸ್ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟು ಆರ್‌ಸಿಬಿಯನ್ನು ಆಘಾತಕ್ಕೆ ತಳ್ಳಿದರು. ಅವರದು ಗೋಲ್ಡನ್ ಡಕ್ ಸಂಕಟ. ಮೊಹ್ಸಿನ್ ಖಾನ್ ಅವರ ಎಸೆತವನ್ನು ಕೀಪರ್ ಡಿ ಕಾಕ್ ಕೈಗಿತ್ತು ವಾಪಸಾದರು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಡು ಪ್ಲೆಸಿಸ್ ಸುತ್ತಿದ ಎರಡನೇ ಸೊನ್ನೆ. ಎರಡೂ ಸಲ ಕಾಟ್ ಬಿಹೈಂಡ್ ಆಗಿ ವಾಪಸಾದರು.
ದ್ವಿತೀಯ ವಿಕೆಟಿಗೆ ಜತೆಗೂಡಿದ ವಿರಾಟ್ ಕೊಹ್ಲಿ-ರಜತ್ ಪಾಟೀದಾರ್ ತಂಡವನ್ನು ಮೇಲೆತ್ತುವ ಪ್ರಯತ್ನದಲ್ಲಿ ಯಶಸ್ವಿಯಾದರು. ಪಾಟೀದಾರ್ ಅವರಂತೂ ಬಂದವರೇ ಮುನ್ನುಗ್ಗಿ ಬಾರಿಸಲಾರಂಭಿಸಿದರು. ಕೊಹ್ಲಿಯನ್ನು ಹಿಂದಿಕ್ಕಿ ಬಹಳ ಮುಂದೆ ಸಾಗಿದರು. ಕೃಣಾಲ್ ಪಾಂಡ್ಯ ಎಸೆತಗಳನ್ನು ಪುಡಿಗಟ್ಟಿದರು. ಹತ್ತರ ಸರಾಸರಿಯಲ್ಲಿ ರನ್ ಹರಿದು ಬರತೊಡಗಿತು. ಪವರ್ ಪ್ಲೇ ಮುಕ್ತಾಯಕ್ಕೆ ಆರ್‌ಸಿಬಿ ಒಂದು ವಿಕೆಟಿಗೆ 52 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.
ಕೊಹ್ಲಿ-ಪಾಟೀದಾರ್ ಸೇರಿಕೊಂಡು 7.3 ಓವರ್‌ಗಳಿಂದ 71 ರನ್ ಪೇರಿಸಿದರು. ಆವೇಶ್ ಖಾನ್ 9ನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ಸು ಕಂಡರು. 24 ಎಸೆತಗಳಿಂದ 25 ರನ್ ಮಾಡಿದ ಕೊಹ್ಲಿ (2 ಬೌಂಡರಿ) ಪೆವಿಲಿಯನ್ ಸೇರಿಕೊಂಡರು. 10 ಓವರ್ ಅಂತ್ಯಕ್ಕೆ ಆರ್‌ಸಿಬಿ 2 ವಿಕೆಟಿಗೆ 84 ರನ್ ಮಾಡಿತ್ತು.
ಸ್ಕೋರ್ ಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ಸಿ ಮೊಹ್ಸಿನ್ ಬಿ ಆವೇಶ್ 25
ಫಾ ಡು ಪ್ಲೆಸಿಸ್ ಸಿ ಡಿ ಕಾಕ್ ಬಿ ಮೊಹ್ಸಿನ್ 0
ರಜತ್ ಪಾಟೀದಾರ್ ಔಟಾಗದೆ 112
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಲೆವಿಸ್ ಬಿ ಪಾಂಡ್ಯ 9
ಮಹಿಪಾಲ್ ಲೊನ್ರೋರ್ ಸಿ ರಾಹುಲ್ ಬಿ ಬಿಷ್ಣೋಯಿ 14
ದಿನೇಶ್ ಕಾರ್ತಿಕ್ ಔಟಾಗದೆ 37
ಇತರ 10
ಒಟ್ಟು (4 ವಿಕೆಟಿಗೆ) 207
ವಿಕೆಟ್ ಪತನ: 1-4, 2-70, 3-86, 4-115.
ಬೌಲಿಂಗ್: ಮೊಹ್ಸಿನ್ ಖಾನ್ 4-0-25-1
ದುಷ್ಮಂತ ಚಮೀರ 4-0-54-0
ಕೃಣಾಲ್ ಪಾಂಡ್ಯ 4-0-39-1
ಆವೇಶ್ ಖಾನ್ 4-0-44-1
ರವಿ ಬಿಷ್ಣೋಯಿ 4-0-45-1
ಲಕ್ನೋ ಸೂಪರ್ ಜೈಂಟ್ಸ್
ಕ್ವಿಂಟನ್ ಡಿ ಕಾಕ್ ಸಿ ಪ್ಲೆಸಿಸ್ ಬಿ ಸಿರಾಜ್ 6
ಕೆಎಲ್ ರಾಹುಲ್ ಸಿ ಶಾಬಾಜ್ ಬಿ ಹ್ಯಾಝೆಲ್‌ವುಡ್ 79
ಮನನ್ ವೊಹ್ರ ಸಿ ಶಾಬಾಜ್ ಬಿ ಹ್ಯಾಝೆಲ್‌ವುಡ್ 19
ದೀಪಕ್ ಹೂಡಾ ಬಿ ಡಿಸಿಲ್ವ 45
ಸ್ಟೋಯಿನಿಸ್ ಸಿ ಪಾಟೀದಾರ್ ಬಿ ಪಟೇಲ್ 9
ಎವಿನ್ ಲೆವಿಸ್ ಔಟಾಗದೆ 2
ಕೃಣಾಲ್ ಪಾಂಡ್ಯ ಸಿ ಮತ್ತು ಬಿ ಹ್ಯಾಝೆಲ್‌ವುಡ್ 0
ದುಷ್ಮಂತ ಚಮೀರ ಔಟಾಗದೆ 11
ಇತರ: 22
ಒಟ್ಟು 20 ಓವರ್‌ಗಳಲ್ಲಿ 6 ವಿಕೆಟಿಗೆ 193
ವಿಕೆಟ್ ಪತನ: 1-8, 2-41, 3-137, 4-173, 5-180, 6-180
ಬೌಲಿಂಗ್: ಮೊಹಮ್ಮದ್ ಸಿರಾಜ್ 4-0-41-1
ಜೋಶ್ ಹ್ಯಾಝೆಲ್‌ವುಡ್ 4-0-43-3
ಶಾಬಾಜ್ ಅಹ್ಮದ್ 4-0-35-0
ವನಿಂದು ಹಸರಂಗ ಡಿಸಿಲ್ವ 4-0-42-1
ಹರ್ಷಲ್ ಪಟೇಲ್ 4-0-25-1
ಪಂದ್ಯಶ್ರೇಷ್ಠ: ರಜತ್ ಪಾಟೀದಾರ್