Advertisement

ಪಂಜಾಬ್‌ಗ ಪಂಚ್‌ ಕೊಟ್ಟರೆ  ಆರ್‌ಸಿಬಿ  ಪ್ಲೇ ಆಫ್ಗೆ ಹತ್ತಿರ

10:11 PM May 12, 2022 | Team Udayavani |

ಮುಂಬಯಿ: ಗೆಲುವಿನ ಸವಾರಿ ಮಾಡುತ್ತಿರುವ ಆರ್‌ಸಿಬಿ ಶುಕ್ರವಾರದ ಮಹತ್ವದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಸವಾಲನ್ನು ಎದುರಿಸಲಿದೆ. ಇದನ್ನು ಗೆದ್ದರೆ ಬೆಂಗಳೂರು ತಂಡದ ಪ್ಲೇ ಆಫ್ ಪ್ರವೇಶ ಬಹುತೇಕ ಖಚಿತಗೊಳ್ಳಲಿದೆ. ಆಗ 13 ಪಂದ್ಯಗಳಿಂದ ಆರ್‌ಸಿಬಿ ಅಂಕ 16ಕ್ಕೆ ಏರಲಿದೆ. ಅಕಸ್ಮಾತ್‌ ಜಾರಿದರೆ, ಮೇ 19ರ ಗುಜರಾತ್‌ ಎದುರಿನ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ.

Advertisement

ಆದರೆ ಪಂಜಾಬ್‌ ಕಿಂಗ್ಸ್‌ ಮುಂದಿನ ಹಾದಿ ಸುಗಮವಲ್ಲ. ಅದು 11 ಪಂದ್ಯಗಳಿಂದ 10 ಅಂಕವನ್ನಷ್ಟೇ ಹೊಂದಿದೆ. ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ. ಹೀಗಾಗಿ ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ತೀವ್ರ ಒತ್ತಡ ಮಾಯಾಂಕ್‌ ಅಗರ್ವಾಲ್‌ ಪಡೆಯ ಮೇಲಿದೆ. ಆದರೆ ಮೊದಲ ಸುತ್ತಿನಲ್ಲಿ ಆರ್‌ಸಿಬಿಯನ್ನು ಮಣಿಸಿದ ಆತ್ಮವಿಶ್ವಾಸವಂತೂ ಇದೆ.

ಉತ್ಸಾಹದಲ್ಲಿ ಆರ್‌ಸಿಬಿ: ಡು ಪ್ಲೆಸಿಸ್‌ ಪಡೆ ಕಳೆದೆರಡು ಪಂದ್ಯಗಳಲ್ಲಿ ಚೆನ್ನೈ ಮತ್ತು ಹೈದರಾಬಾದ್‌ ತಂಡಗಳನ್ನು ಕ್ರಮವಾಗಿ 13 ರನ್‌ ಹಾಗೂ 67 ರನ್ನುಗಳಿಂದ ಮಣಿಸಿದ ಉತ್ಸಾಹದಲ್ಲಿದೆ. ಜತೆಗೆ ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚುಹಾಕಿ ಕುಳಿತಿದೆ. ಇನ್ನೊಂದೆಡೆ ಪಂಜಾಬ್‌ ತನ್ನ ಕೊನೆಯ ಮುಖಾಮುಖೀಯಲ್ಲಿ ರಾಜಸ್ಥಾನ್‌ ವಿರುದ್ಧ 6 ವಿಕೆಟ್‌ಗಳಿಂದ ಎಡವಿದ ಸಂಕಟದಲ್ಲಿದೆ. “ಮಸ್ಟ್‌ ವಿನ್‌’ ಒತ್ತಡವನ್ನು ಅದು ಹೇಗೆ ನಿಭಾಯಿಸಲಿದೆ ಎಂಬುದೊಂದು ಕುತೂಹಲ.

ಹೈದರಾಬಾದ್‌ ವಿರುದ್ಧ ಕೊಹ್ಲಿ ಮೊದಲ ಎಸೆತದಲ್ಲೇ ಔಟಾದರೂ ಆರ್‌ಸಿಬಿಗೆ ಇದರಿಂದ ಯಾವ ನಷ್ಟವೂ ಆಗಿರಲಿಲ್ಲ. ನಾಯಕ ಫಾ ಡು ಪ್ಲೆಸಿಸ್‌, ಯಂಗ್‌ ಗನ್‌ ರಜತ್‌ ಪಾಟೀದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌ ಸಿಡಿದು ನಿಂತು ಮೂರೇ ವಿಕೆಟಿಗೆ 192 ರನ್‌ ಪೇರಿಸುವ ಮೂಲಕ ಹೈದರಾಬಾದ್‌ ವೇಗಕ್ಕೆ ಸಡ್ಡು ಹೊಡೆದಿದ್ದರು. ಕಾರ್ತಿಕ್‌ ಅವರದಂತೂ ವಿಸ್ಫೋಟಕ ಆಟ. ಕೇವಲ 8 ಎಸೆತಗಳಿಂದ 30 ರನ್‌ ಬಾರಿಸಿದ ಸಾಹಸ (4 ಸಿಕ್ಸರ್‌, 1 ಫೋರ್‌).

ಬೌಲಿಂಗ್‌ನಲ್ಲಿ ವನಿಂದು ಹಸರಂಗ ಅವರ ಸ್ಪಿನ್‌ ಜಾದೂ; 18 ರನ್ನಿಗೆ 5 ವಿಕೆಟ್‌ ಬೇಟೆ. ತತ್ತರಿಸಿದ ಹೈದರಾಬಾದ್‌ 125ಕ್ಕೆ ಪಲ್ಟಿ. ಆರ್‌ಸಿಬಿ ಪಾಲಿನ ಖುಷಿಯ ಸಂಗತಿಯೆಂದರೆ, ನಡುವೆ ಸ್ವಲ್ಪ ಕಾಲ ತುಸು ಮಂಕಾಗಿದ್ದ ದಿನೇಶ್‌ ಕಾರ್ತಿಕ್‌ ಮತ್ತು ವನಿಂದು ಹಸರಂಗ ಇಬ್ಬರೂ ಫಾರ್ಮ್ಗೆ ಮರಳಿದ್ದು. ಒಟ್ಟಾರೆಯಾಗಿ ಆರ್‌ಸಿಬಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಫ‌ುಲ್‌ ಜೋಶ್‌ನಲ್ಲಿದೆ. ಪಂಜಾಬ್‌ ವಿರುದ್ಧ ಇದೇ ಲಯವನ್ನು ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯ.

Advertisement

ಸತತ 2 ಪಂದ್ಯ ಗೆಲ್ಲದ ಪಂಜಾಬ್‌: ಪಂಜಾಬ್‌ನ ದುರಂತವೆಂದರೆ, ಅದು ಈ ಕೂಟದಲ್ಲಿ ಸತತ 2 ಪಂದ್ಯಗಳನ್ನು ಜಯಿಸಿದ್ದೇ ಇಲ್ಲ. ಗುಜರಾತ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಬಳಿಕ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್‌ ವಿರುದ್ಧ 6 ವಿಕೆಟ್‌ಗಳಿಂದ ಎಡವಿ ಅಸ್ಥಿರ ಆಟವನ್ನು ತೆರೆದಿರಿಸಿದೆ. ಪಂಜಾಬ್‌ 5ಕ್ಕೆ 189 ರನ್ನುಗಳ ಬೃಹತ್‌ ಸ್ಕೋರ್‌ ದಾಖಲಿಸಿದರೂ ರಾಜಸ್ಥಾನ್‌ 19.4 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 190 ರನ್‌ ಪೇರಿಸಿ ಜಯಭೇರಿ ಮೊಳಗಿಸಿತ್ತು.  ಕಾಗಿಸೊ ರಬಾಡ, ಸಂದೀಪ್‌ ಶರ್ಮ, ರಾಹುಲ್‌ ಚಹರ್‌, ರಿಷಿ ಧವನ್‌ ಅವರೆಲ್ಲ ಬೌಲಿಂಗ್‌ನಲ್ಲಿ ಘೋರ ವೈಫ‌ಲ್ಯ ಅನುಭವಿಸಿದ್ದರು. ಇವರೆಲ್ಲ ಆರ್‌ಸಿಬಿ ಬ್ಯಾಟರ್‌ಗಳಿಗೆ ನಿಯಂತ್ರಣ ಹೇರಬಲ್ಲರೇ?

ಆರ್‌ಸಿಬಿ ಸೋಲಿನ ಆರಂಭ… :

ಆರ್‌ಸಿಬಿ ಈ ಐಪಿಎಲ್‌ ಪಂದ್ಯಾವಳಿಯನ್ನು ಆರಂಭಿಸಿದ್ದೇ ಸೋಲಿನಿಂದ, ಹಾಗೆಯೇ ಈ ಸೋಲು ಎದುರಾದದ್ದೇ ಪಂಜಾಬ್‌ ವಿರುದ್ಧ!

ಅದು ಕೂಟದ ದ್ವಿತೀಯ ದಿನದ ಮುಖಾಮುಖೀ. ಆರ್‌ಸಿಬಿ 2 ವಿಕೆಟಿಗೆ 205 ರನ್‌ ಪೇರಿಸಿಯೂ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಕಳೆದುಕೊಂಡಿತು. ಪಂಜಾಬ್‌ 19 ಓವರ್‌ಗಳಲ್ಲಿ 5 ವಿಕೆಟಿಗೆ 208 ರನ್‌ ಬಾರಿಸಿ ಸ್ಮರಣೀಯ ಆರಂಭ ಪಡೆಯಿತು.

ಬೆಂಗಳೂರು ಪರ ನಾಯ ಫಾ ಡು ಪ್ಲೆಸಿಸ್‌ 88, ವಿರಾಟ್‌ ಕೊಹ್ಲಿ ಅಜೇಯ 41, ದಿನೇಶ್‌ ಕಾರ್ತಿಕ್‌ ಕೇವಲ 14 ಎಸೆತಗಳಿಂದ ಅಜೇಯ 32 ರನ್‌ (3 ಬೌಂಡರಿ, 3 ಸಿಕ್ಸರ್‌) ಸಿಡಿಸಿದ್ದರು. ಚೇಸಿಂಗ್‌ ವೇಳೆ ಪಂಜಾಬ್‌ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ಸಂದಾಯವಾಗಲಿಲ್ಲ. ತಲಾ 43 ರನ್‌ ಮಾಡಿದ ಶಿಖರ್‌ ಧವನ್‌ ಮತ್ತು ಭನುಕ ರಾಜಪಕ್ಸ ಅವರದೇ ಹೆಚ್ಚಿನ ಗಳಿಕೆ. ಆದರೆ ಕೊನೆಯಲ್ಲಿ ಶಾರೂಖ್‌ ಖಾನ್‌ ಮತ್ತು ಒಡೀನ್‌ ಸ್ಮಿತ್‌ ಸಿಡಿದು ನಿಂತು ಆರ್‌ಸಿಬಿ ಗೆಲುವನ್ನು ಕಸಿದರು. ಇವರು ಮುರಿಯದ 6ನೇ ವಿಕೆಟಿಗೆ 4.1 ಓವರ್‌ಗಳಿಂದ 42 ರನ್‌ ಬಾರಿಸಿ ಪಂಜಾಬ್‌ ಜಯಭೇರಿ ಮೊಳಗಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next