ಮುಂಬೈ: ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತು ಪ್ಲೇ ಆಫ್ ದಾರಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿರುವ ಆರ್ ಸಿಬಿ ತಂಡದ ನೆಟ್ ರನ್ ರೇಟ್ ಕಡಿಮೆ ಇರುವುದೇ ತಲೆ ನೋವಾಗಿ ಪರಿಣಮಿಸಿದೆ.
ಆರ್ ಸಿಬಿ ಅಭಿಮಾನಿಗಳು ಪ್ರತಿವರ್ಷದಂತೆ ಈ ಬಾರಿಯೂ ಲೆಕ್ಕಾಚಾರ ಆರಂಭಿಸಿದ್ದಾರೆ. ಯಾವ ತಂಡ ಸೋತರೆ ನಮಗೆ ಪ್ಲೇ ಆಫ್ ಅವಕಾಶವಿದೆ ಎಂದು ಕಾಲ್ಕುಲೇಶನ್ ಆರಂಭಿಸಿದ್ದಾರೆ.
ಆರ್ ಸಿಬಿಗೆ ಅವಕಾಶ ಹೇಗೆ?
13 ಪಂದ್ಯಗಳಲ್ಲಿ ಏಳು ಗೆಲುವುಗಳ ಹೊರತಾಗಿಯೂ, ಪ್ಲೇ ಆಫ್ ವಿಚಾರಗಳು ಈಗ ಆರ್ ಸಿಬಿ ನಿಯಂತ್ರಣದಲ್ಲಿಲ್ಲ. ಫಾಫ್ ಪಡೆ ಪ್ಲೇಆಫ್ ಗೆ ಹೋಗಲು ಇತರ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ ಬಳಿಕ ಹೊಸ ಲೆಕ್ಕ ಆರಂಭವಾಗಿದೆ.
Related Articles
ಆರ್ ಸಿಬಿ ಪ್ಲೇಆಫ್ ಪ್ರವೇಶಕ್ಕೆ ಎಲ್ಲಕ್ಕಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಕೊನೆಯ ಪಂದ್ಯವನ್ನು ಸೋಲಬೇಕಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.
ನೆಟ್ ರನ್ ರೇಟ್ -0.323 ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ 200 ರನ್ ಮಾಡಿದರೂ ಮತ್ತು 100 ರನ್ ಅಂತರದಿಂದ ಗೆದ್ದರೂ, ಅವರ ಎನ್ ಆರ್ ಆರ್ ಕೇವಲ 0.071 ಕ್ಕೆ ಸುಧಾರಿಸುತ್ತದೆ. ಹೀಗಾಗಿ ದೆಹಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯವನ್ನು ಕೇವಲ ಒಂದು ರನ್ ನಿಂದ ಗೆದ್ದರೂ ಅದು ಆರ್ ಸಿಬಿಗಿಂತ ಸಾಕಷ್ಟು ಮುಂದೆ ಸಾಗುತ್ತದೆ.
ಇದನ್ನೂ ಓದಿ:‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ
ಒಂದು ವೇಳೆ ಎರಡೂ ತಂಡಗಳು (ಆರ್ಸಿಬಿ ಮತ್ತು ಡಿಸಿ) ತಮ್ಮ ಕೊನೆಯ ಪಂದ್ಯವನ್ನು ಸೋತರೆ, ಬೆಂಗಳೂರು ತಂಡ ಪ್ಲೇ ಆಫ್ ಗೆ ಹೋಗಲು ಭಾರೀ ಸೋಲನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಆರ್ ಸಿಬಿ ಒಂದು ರನ್ ನಿಂದ ಸೋತರೆ, ಕ್ಯಾಪಿಟಲ್ಸ್ ಸುಮಾರು 150 ರನ್ ಅಂತರದಿಂದ ಸೋಲಬೇಕಾಗುತ್ತದೆ (ನಿಖರವಾದ ಸ್ಕೋರ್‌ಗಳನ್ನು ಅವಲಂಬಿಸಿ) ಆದರೆ ಅದು ಸಂಭವಿಸುವ ಸಾಧ್ಯತೆಗಳು ಕಡಿಮೆ.
ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಅಂತಿಮ ರೌಂಡ್-ರಾಬಿನ್ ಪಂದ್ಯದಲ್ಲಿ ಆರ್ ಸಿಬಿ ತಂಡವು ಈಗಾಗಲೇ ಪ್ಲೇ ಆಫ್ ತಲುಪಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಸತತ ಗೆಲುವು ಕಂಡಿರುವ ಟೈಟಾನ್ಸ್ ವಿರುದ್ದ ಬೆಂಗಳೂರು ಗೆಲ್ಲಲೇ ಬೇಕಿದೆ. ಪ್ಲೇಆಫ್‌ಗೆ ಹೋಗಲು ಬೆಂಗಳೂರು ಪವಾಡದ ನಿರೀಕ್ಷೆಯಲ್ಲಿದೆ.