Advertisement

ಕ್ವಾಲಿಫೈಯರ್‌ 2 : ರಾಯಲ್‌ ಕದನಕ್ಕೆ ಆರ್‌ಸಿಬಿ-ರಾಜಸ್ಥಾನ್‌ ಸಜ್ಜು 

10:25 PM May 26, 2022 | Team Udayavani |

ಅಹ್ಮದಾಬಾದ್: ಬುಧವಾರವಷ್ಟೇ ಐತಿಹಾಸಿಕ ಈಡನ್‌ ಗಾರ್ಡನ್ಸ್‌ನಲ್ಲಿ “ರಜತ ವೈಭವ’ ಆಚರಿಸಿದ ಮಹಾಸಂಭ್ರಮದಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಶುಕ್ರವಾರ ಇಂಥದೇ ಪ್ರದರ್ಶನವನ್ನು ಪುನರಾವರ್ತಿಸುವ ಯೋಜನೆಯಲ್ಲಿದೆ.

Advertisement

ತನ್ಮೂಲಕ ಟ್ರೋಫಿ ಗೆಲುವಿನ ಸುದೀರ್ಘ‌ ನಿರೀಕ್ಷೆಗೆ ಇನ್ನೂ ಒಂದು ಹೆಜ್ಜೆ ಹತ್ತಿರವಾಗುವುದು ಆರ್‌ಸಿಬಿ ಗುರಿ. ಇದು ದ್ವಿತೀಯ ಕ್ವಾಲಿಫೈಯರ್‌ ಪಂದ್ಯವಾಗಿದ್ದು, ಸಂಜು ಸ್ಯಾಮ್ಸನ್‌ ಸಾರಥ್ಯದ ರಾಜಸ್ಥಾನ್‌ ರಾಯಲ್ಸ್‌ ಎದುರಾಗಲಿದೆ. ಈ ರಾಯಲ್ಸ್‌ ಸಮರದಲ್ಲಿ ಗೆದ್ದವರು ಫೈನಲ್‌ಗೆ ಲಗ್ಗೆ ಇರಿಸುತ್ತಾರೆ, ಸೋತವರು ಮನೆಗೆ ಹೋಗುತ್ತಾರೆ.

ಲೀಗ್‌ ಹಂತದಲ್ಲಿ ಆರ್‌ಸಿಬಿ-ರಾಜಸ್ಥಾನ್‌ ಎರಡು ಸಲ ಎದುರಾಗಿವೆ. ಮೊದಲ ಪಂದ್ಯವನ್ನು ಆರ್‌ಸಿಬಿ ಗೆದ್ದರೆ, ಇನ್ನೊಂದು ಮುಖಾಮುಖೀಯಲ್ಲಿ ರಾಜಸ್ಥಾನ್‌ ಸೇಡು ತೀರಿಸಿಕೊಂಡಿತ್ತು. ಇವೆರಡಕ್ಕಿಂತ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದ ಫ‌ಲಿತಾಂಶ ನಿರ್ಣಾಯಕ. ಇದು “ವರ್ಚುವಲ್‌ ಸೆಮಿಫೈನಲ್‌’ ಇದ್ದಂತೆ.

ಹೇಗಿದೆ ಅಹ್ಮದಾಬಾದ್‌ ಟ್ರ್ಯಾಕ್‌? :

ಇದರೊಂದಿಗೆ ಐಪಿಎಲ್‌ ಹಣಾಹಣಿ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನತ್ತ ಮುಖ ಮಾಡಲಿದೆ. ರವಿವಾರದ ಪ್ರಶಸ್ತಿ ಸಮರ ಕೂಡ ಇಲ್ಲಿಯೇ ನಡೆಯಲಿದೆ. ಕೋಲ್ಕತಾದಲ್ಲಿ ಮಳೆ ಭೀತಿಯ ನಡುವೆಯೂ ಎರಡೂ ಪಂದ್ಯಗಳು ಸಾಂಗವಾಗಿ ಸಾಗಿದವು. ಅಹ್ಮದಾಬಾದ್‌ನಲ್ಲಿ ಪ್ರತಿಕೂಲ ವಾತಾವರಣದ ಯಾವ ಲಕ್ಷಣವೂ ಇಲ್ಲ. ಹೀಗಾಗಿ ಪಂದ್ಯಕ್ಕೆ ಯಾವುದೇ ಆತಂಕ ಎದುರಾಗದು. ಆದರೆ ಇಲ್ಲಿನ ಟ್ರ್ಯಾಕ್‌ ಹೇಗೆ ಎಂಬ ಬಗ್ಗೆ ಕುತೂಹಲವಿದೆ. ಹಿಂದೆ ಇದು ಭಾರತದ ಏಕೈಕ ಫಾಸ್ಟ್‌ ಟ್ರ್ಯಾಕ್‌ ಎನಿಸಿಕೊಂಡಿತ್ತು. ಈಗ ಹೇಗಿದೆಯೋ ಗೊತ್ತಿಲ್ಲ. ಹಿಂದಿನಂತೆಯೇ ಇದ್ದರೆ ಇಲ್ಲಿ ವೇಗಿಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಆದರೆ ಐಪಿಎಲ್‌ಗಾಗಿ ಇದನ್ನು ಬ್ಯಾಟಿಂಗ್‌ ಟ್ರ್ಯಾಕ್‌ ಆಗಿ ರೂಪಿಸಿರುವ ಸಾಧ್ಯತೆಯೂ ಇದೆ.

Advertisement

ಪಾಟೀದಾರ್‌ ಸೂಪರ್‌ :

ಲಕ್ನೋ ಎದುರಿನ ಮುಖಾಮುಖಿ ವೇಳೆ ಆರ್‌ಸಿಬಿ ಇನ್ನೂರರ ಗಡಿ ದಾಟುವ ಮೂಲಕ ಮೇಲುಗೈ ಸಾಧಿಸಿತ್ತು. ರಜತ್‌ ಪಾಟೀದಾರ್‌ ಅವರ ಟಾಪ್‌ಕ್ಲಾಸ್‌ ಸೆಂಚುರಿ ಆಕರ್ಷಣೆಯಾಗಿತ್ತು. ಆದರೆ ನಾಯಕ ಫಾ ಡು ಪ್ಲೆಸಿಸ್‌ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದರು. ಈ ವೈಫ‌ಲ್ಯವನ್ನು ಕ್ವಾಲಿಫೈಯರ್‌ ಪಂದ್ಯದಲ್ಲಿ ಸರಿದೂಗಿಸಬೇಕಿದೆ. ಹಾಗೆಯೇ ಕೊಹ್ಲಿ, ಮ್ಯಾಕ್ಸ್‌ವೆಲ್‌ ಕೂಡ ರನ್‌ ಪೇರಿಸಬೇಕಿದೆ.

ಲಕ್ನೋಗೆ ಹೋಲಿಸಿದರೆ ರಾಜಸ್ಥಾನ್‌ ಬ್ಯಾಟಿಂಗ್‌ ಹೆಚ್ಚು ಬಲಿಷ್ಠ ಹಾಗೂ ಅಪಾಯಕಾರಿ. ಆರೇಂಜ್‌ ಕ್ಯಾಪ್‌ಧಾರಿ ಜಾಸ್‌ ಬಟ್ಲರ್‌, ನಾಯಕ ಸಂಜು ಸ್ಯಾಮ್ಸನ್‌, ದೇವದತ್ತ ಪಡಿಕ್ಕಲ್‌, ಯಶಸ್ವಿ ಜೈಸ್ವಾಲ್‌, ಶಿಮ್ರನ್‌ ಹೆಟ್‌ಮೈರ್‌, ರಿಯಾನ್‌ ಪರಾಗ್‌ ರಾಜಸ್ಥಾನ್‌ ಬ್ಯಾಟಿಂಗ್‌ ಲೈನ್‌ಅಪ್‌ನ ಪ್ರಮುಖರು. ಬಟ್ಲರ್‌ ವಿಕೆಟನ್ನು ಬೇಗ ಉರುಳಿಸಿದರೆ ಯಾವುದೇ ಎದುರಾಳಿ ಮೇಲುಗೈ ಸಾಧಿಸಬಹುದು. ಆಗ ರಾಜಸ್ಥಾನ್‌ ಕೂಡ ಒತ್ತಡಕ್ಕೆ ಸಿಲುಕಲಿದೆ. ಆರ್‌ಸಿಬಿ ಬೌಲಿಂಗ್‌ ತಂತ್ರಗಾರಿಕೆ ಈ ನಿಟ್ಟಿನಲ್ಲಿ ಸಾಗಬೇಕು.

ರಾಜಸ್ಥಾನ್‌ ಬೌಲಿಂಗ್‌ ಕೂಡ ಘಾತಕ. ಟ್ರೆಂಟ್‌ ಬೌಲ್ಟ್, ಒಬೆಡ್‌ ಮೆಕಾಯ್‌, ಸ್ಪಿನ್‌ದ್ವಯರಾದ ಚಹಲ್‌-ಅಶ್ವಿ‌ನ್‌ ಅವರನ್ನೊಳಗೊಂಡ ಈ ಬೌಲಿಂಗ್‌ ಪಡೆಯನ್ನು ಆರ್‌ಸಿಬಿ ಎಂದಿಗಿಂತ ಹೆಚ್ಚು ಎಚ್ಚರದಿಂದ ನಿಭಾಯಿಸಬೇಕಿದೆ. ಆದರೆ ಗುಜರಾತ್‌ ವಿರುದ್ಧ ರಾಜಸ್ಥಾನ್‌ ಬೌಲಿಂಗ್‌ ವಿಫ‌ಲಗೊಂಡಿತ್ತು. ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ ಡೇವಿಡ್‌ ಮಿಲ್ಲರ್‌ ಎತ್ತೆತ್ತಿ ಬಾರಿಸಿದ ಹ್ಯಾಟ್ರಿಕ್‌ ಸಿಕ್ಸರ್‌ ಈಗಲೂ ತಂಡವನ್ನು ಬೆಚ್ಚಿಬೀಳಿಸುತ್ತಿರಬಹುದು!

ಇತ್ತ ಆರ್‌ಸಿಬಿ ಈಡನ್‌ನ ಬ್ಯಾಟಿಂಗ್‌ ಟ್ರ್ಯಾಕ್‌ ಮೇಲೂ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಿರ್ಣಾಯಕ ಹಂತದಲ್ಲಿ ತೂರಿ ಬರುವ ವೈಡ್‌ ಎಸೆತಗಳಿಗೆ ಕಡಿವಾಣ ಹಾಕುವುದು ಮುಖ್ಯ. ಹ್ಯಾಝಲ್‌ವುಡ್‌, ಹರ್ಷಲ್‌ ಪಟೇಲ್‌, ಸಿರಾಜ್‌, ಹಸರಂಗ, ಶಬಾಜ್‌ ಅವರೆಲ್ಲ ಶಿಸ್ತುಬದ್ಧ ಬೌಲಿಂಗ್‌ ನಡೆಸಬೇಕಿದೆ. ಇದು ಬೌಲಿಂಗ್‌ ಟ್ರ್ಯಾಕ್‌ ಆಗಿದ್ದರೆ ಬ್ಯಾಟರ್‌ಗಳಿಗೆ ಅಗ್ನಿಪರೀಕ್ಷೆ ತಪ್ಪಿದ್ದಲ್ಲ!

Advertisement

Udayavani is now on Telegram. Click here to join our channel and stay updated with the latest news.

Next