ಮುಂಬಯಿ: ಮುಂಬೈ ಇಂಡಿಯನ್ಸ್ ಕಪ್ತಾನ ರೋಹಿತ್ ಶರ್ಮ ಅವರಿಗೆ ಗಾಯದ ಮೇಲೆ ಬರೆ ಬಿದ್ದಿದೆ. ತಂಡ ಸತತ 5 ಸೋಲುಂಡ ಸಂಕಟದಲ್ಲಿರುವಾಗಲೇ, ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ.
ಬುಧವಾರ ರಾತ್ರಿ ಪಂಜಾಬ್ ಕಿಂಗ್ಸ್ ವಿರುದ್ಧ ಓವರ್ ಗತಿ ಕಾಯ್ದುಕೊಳ್ಳಲು ವಿಫಲರಾದ ಕಾರಣ ರೋಹಿತ್ ಶರ್ಮ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಯಿತು. ಜತೆಗೆ ಮುಂಬೈ ತಂಡದ ಸದಸ್ಯರಿಗೆಲ್ಲ 6 ಲಕ್ಷ ರೂ. ಅಥವಾ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ಹೇರಲಾಗಿದೆ. ಇವೆರಡರಲ್ಲಿ ಯಾವುದು ಕಡಿಮೆಯೋ, ಆ ಮೊತ್ತ ಅನ್ವಯಿಸಲಿದೆ.
ದ್ವಿತೀಯ ನಿದರ್ಶನ :
ಪ್ರಸಕ್ತ ಋತುವಿನಲ್ಲಿ ರೋಹಿತ್ ಶರ್ಮ ಈ ಸಂಕಟಕ್ಕೆ ಸಿಲುಕಿದ ದ್ವಿತೀಯ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಮಾ. 27ರ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅವರು ನಿಧಾನ ಗತಿಯ ಓವರ್ ಕಾರಣಕ್ಕಾಗಿ 12 ಲಕ್ಷ ರೂ. ದಂಡ ತೆತ್ತಿದ್ದರು. ಇನ್ನೊಂದು ಸಲ ಇದೇ ತಪ್ಪೆಸಗಿದರೆ ಅವರು ಒಂದು ಪಂದ್ಯದ ನಿಷೇಧಕ್ಕೊಳಗಾಗಲಿದ್ದಾರೆ. ಜತೆಗೆ 30 ಲಕ್ಷ ರೂ. ಪೆನಾಲ್ಟಿಯನ್ನೂ ಕಟ್ಟಬೇಕಾಗುತ್ತದೆ.
ರೋಹಿತ್ ಶರ್ಮ ಈ ಐಪಿಎಲ್‌ನಲ್ಲಿ 2 ಸಲ ಓವರ್ ಗತಿ ಕಾಯ್ದುಕೊಳ್ಳಲು ವಿಫಲರಾದ ಮೊದಲ ನಾಯಕ. ಉಳಿದಂತೆ ಡೆಲ್ಲಿಯ ರಿಷಭ್ ಪಂತ್, ಸನ್‌ರೈಸರ್ನ ಕೇನ್ ವಿಲಿಯಮ್ಸನ್ ಅವರಿಗೆ ಒಮ್ಮೆ ಈ ಕಂಟಕ ಎದುರಾಗಿದೆ.